ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರುತ್ತಿರುವ ನರೇಂದ್ರ ಮೋದಿ ಅವರು ಗುರುವಾರ ಸತತ ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಗುರುವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಎನ್ ಡಿಎ ಸಂಸದೀಯ ಮಂಡಳಿಯ ನಾಯಕ ನರೇಂದ್ರ ಮೋದಿ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
ಕಳೆದ ಬಾರಿ ಈಶ್ವರನ ಹೆಸರನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ನರೇಂದ್ರ ಮೋದಿ ಅವರು ಈ ಬಾರಿಯೂ ಈಶ್ವರನ ಹೆಸರಿನಲ್ಲಿ ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಪ್ರಧಾನಿ ಮೋದಿ ಜೊತೆ ಕೇಂದ್ರ ಸಚಿವರಾಗಿ ರಾಜನಾಥ್ ಸಿಂಗ್, ಅಮಿತ್ ಶಾ, ಸ್ಮೃತಿ ಇರಾನಿ, ನಿತಿನ್ ಗಡ್ಕರಿ, ಡಿ ವಿ ಸದಾನಂದಗೌಡ, ಪಿಯೂಷ್ ಗೋಯೆಲ್, ರವಿಶಂಕರ್ ಪ್ರಸಾದ್, ರಾಮ್ ವಿಲಾಸ್ ಪಾಸ್ವಾನ್,ವಿ.ಮುರಳೀಧರನ್ ಸೇರಿದಂತೆ ಹಲವರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ರಾಷ್ಟ್ರಪತಿ ಭವನದ ಮುಂಭಾಗದ ಆವರಣದಲ್ಲಿ ನಡೆದ ಅದ್ದೂರಿ ಸಮಾರಂಭಕ್ಕೆ ಸುಮಾರು 6,500ಕ್ಕೂ ಅಧಿಕ ಗಣ್ಯರು ಸಾಕ್ಷಿಯಾದರು. ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್, ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಷಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಸದ್ಗುರು ಜಗ್ಗಿ ವಾಸುದೇವ್, ಪೇಜಾವರ ಶ್ರೀ, ಮುಖೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ ಸಹಿತ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದರು.