ಬದಿಯಡ್ಕ: ಭಾಷೆಯ ಶ್ರೇಷ್ಠತೆಯನ್ನು ಎತ್ತಿಹಿಡಿಯುವಲ್ಲಿ ಸಾಹಿತ್ಯಗಳು ಮಹತ್ವದ ಕೆಲಸ ನಿರ್ವಹಿಸಿ ಸಮೃದ್ದಗೊಳಿಸುತ್ತದೆ. ಪುರಾಣ, ಖುರಾನ್, ಗೀತೆ, ಬೈಬಲ್‍ಗಳಲ್ಲಿ ಮಾತ್ರವಾಗಿರದೆ ಪ್ರೀತಿ, ವಾತ್ಸಲ್ಯ ಸಹೋದರತೆ ಹಾಗೂ ಮಾನವೀಯತೆಗಳು ಹೃದಯದಲ್ಲಿ ಹುಟ್ಟಿಕೊಳ್ಳಬೇಕು. ಪರಸ್ಪರ ವೈಮನಸ್ಸು, ವೈರುಧ್ಯಗಳಿಲ್ಲದ ಒಳ್ಳೆಯ ಮನಸ್ಸುಗಳನ್ನು ಜೊಡಿಸಲು ಭಾಷೆ, ಸಾಹಿತ್ಯಗಳು ಬೆಳೆದುಬರಬೇಕು ಎಂದು ತೆಹ್ರೀ ಕೆ ಉರ್ದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಅಝೀಂ ಮಣಿಮುಂಡ ಅವರು ತಿಳಿಸಿದರು.
ಬದಿಯಡ್ಕದ ರಾಮಲೀಲಾ ಸಭಾಂಗಣದಲ್ಲಿ ಶನಿವಾರ ನಡೆದ ಯುವ ಕವಯಿತ್ರಿ, ವಿಮರ್ಶಕಿ ಚೇತನಾ ಕುಂಬಳೆ ಅವರ ಚೊಚ್ಚಲ ಕೃತಿ ಗಜûಲ್ ಸಂಕಲನ ನಸುಕಿನಲ್ಲಿ ಬಿರಿದ ಹೂಗಳು ಹಾಗೂ ಕನ್ನಡ ಸಾಹಿತ್ಯ ವಲಯದ ವಿವಿಧ ಕಥೆಗಾರ, ಲೇಖಕ, ಕವಿಗಳ ಸಾಹಿತ್ಯ ರಚನೆಗಳ ವಿಮರ್ಶಾ ಸಂಕಲನ ಪಡಿನೆಳಲು ಕೃತಿಯ ಬಿಡುಗಡೆ ಸಮಾರಂಭದಲ್ಲಿ ವಿಶೇಷವಾಗಿ ಆಯೋಜಿಸಲಾಗಿದ್ದ ಗಜóಲ್ ಸಾಹಿತ್ಯದ ಪರಂಪರೆಯ ಅವಲೋಕನ ವಿಶೇಷೋಪನ್ಯಾಸ ನೀಡಿ ಅವರು ಮಾತನಾಡಿದರು.
ಉರ್ದು ಭಾಷಾ ಮೂಲದ ಗಜóಲ್ ಸಾಹಿತ್ಯವು ಅಲ್ಲಾಮಾ ಇಕ್ಬಾಲ್ ನೆಂಬ ಸಂತ ಕವಿಯ ಮೂಲಕ ಹೆಚ್ಚು ಪ್ರಚುರಗೊಂಡು ಬೆಳವಣಿಗೆ ಪಡೆಯಿತು. ಪ್ರೇಮ ಕಾವ್ಯ ಸ್ವರೂಪದ ಗಜóಲ್ ಗಳಿಗೆ ಉರ್ದು ಭಾಷೆಯಲ್ಲಿ ವೈವಿಧ್ಯಮಯ ಪರಂಪರೆಯಿದ್ದು, ಹತ್ತಾರು ಜನರೊಂದಿಗೆ ಕಾವ್ಯ ಸ್ವರೂಪದ ಸಂಭಾಷಣೆ, ಪ್ರಶ್ನೋತ್ತರಗಳು, ನವಿರು ಹಾಸ್ಯಗಳೊಂದಿಗೆ ಮನಸ್ಸುಗಳನ್ನು ಪುಳಕಗೊಳಿಸುವ ಶಕ್ತಿಹೊಂದಿ ಪ್ರಸಿದ್ದವಾಗಿದೆ ಎಂದು ಅವರು ವಿವರಣೆ ನೀಡಿದರು. ಕನ್ನಡದಲ್ಲಿ ಕೆಲವು ದಶಕಗಳಿಂದ ಪ್ರಯೋಗಿಸಲ್ಪಡುತ್ತಿರುವ ಗಜóಲ್ ಸಾಹಿತ್ಯ ರಚನೆಗಳು ಇನ್ನಷ್ಟು ವಿಪುಲಗೊಂಡು ಉತ್ತಮ ಸಮಾಜ ನಿರ್ಮಾಣದಲ್ಲಿ ಕೊಡುಗೆಗಳನ್ನು ನೀಡಲಿ ಎಂದು ಅವರು ಹಾರೈಸಿದರು.
ಬಳಿಕ ಯುವ ಗಜóಲ್ ಗಾಯಕ ಮೊಹಮ್ಮದ್ ಅಶ್ವಾಕ್ ಮಣಿಮುಂಡ ಅವರಿಂದ ಸುಮಧುರ ಗಜóಲ್ ಗಾಯನ ನಡೆಯಿತು. ಕವಯಿತ್ರಿ ಶ್ವೇತಾ ಕಜೆ ಸ್ವರಚಿತ ಗಜóಲ್ ವಾಚನ ನಡೆಸಿದರು.
ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಖ್ಯಾತ ಚಿತ್ರ ಕಲಾವಿದ ಪಿ.ಎಸ್.ಪುಣಿಚಿತ್ತಾಯ ಉದ್ಘಾಟಿಸಿದರು. ಚೇತನಾ ಕುಂಬಳೆ ರಚಿಸಿರುವ ಗಜóಲ್ ಸಂಕಲನ ನಸುಕಿನಲ್ಲಿ ಬಿರಿದ ಹೂಗಳು ಕೃತಿಯನ್ನು ನಿವೃತ್ತ ಶಿಕ್ಷಕಿ ಸರಸ್ವತಿ ಎಚ್. ಹಾಗೂ ವಿವಿಧ ಲೇಖಕರ ಕೃತಿ ವಿಮರ್ಶಾ ಸಂಕಲನ ಪಡಿ ನೆಳಲನ್ನು ಕವಯಿತ್ರಿ, ರಂಗನಟಿ ಪೂರ್ಣಿಮಾ ಸುರೇಶ್ ಹಿರಿಯಡ್ಕ ಬಿಡುಗಡೆಗೊಳಿಸಿದರು. ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ, ಕವಿ ಡಾ.ವಸಂತಕುಮಾರ್ ಪೆರ್ಲ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನ ಉಪನ್ಯಾಸಕಿ ಲಕ್ಷ್ಮೀ ಕೆ., ರಾಜಗೋಪಾಲ ಓಕುಣ್ಣಾಯ ಮೊದಲಾದವರು ಉಪಸ್ಥಿತರಿದ್ದರು. ಕೃತಿಕರ್ತೆ ಚೇತನಾ ಕುಂಬಳೆ ತಮ್ಮ ಸಾಹಿತ್ಯ ಯಾನದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮೇಘನಾ ರಾಜಗೋಪಾಲ್ ವಂದಿಸಿದರು. ಪತ್ರಕರ್ತ, ಸಂಘಟಕ ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.