ಕಾಸರಗೋಡು: "ತೆಂಗಿಗೆ ಬರುವ ಕೀಟಬಾಧೆ ನಿಯಂತ್ರಣ ಮತ್ತು ಆರೋಗ್ಯ ಸಂರಕ್ಷಣೆ" ಎಂಬ ವಿಷಯದಲ್ಲಿ ಕಾರ್ಯಾಗಾರ ಮತ್ತು ತರಬೇತಿ ಕಾರ್ಯಕ್ರಮ ಕಾಸರಗೋಡು ಕೇಂದ್ರೀಯ ತೋಟಗಾರಿಕೆ ಮತ್ತು ಬೆಳೆ ಸಂಶೋಧನೆ ಕೇಂದ್ರ(ಸಿಪಿಸಿಆರ್‍ಐ) ದಲ್ಲಿ ಬುಧವಾರ ಜರುಗಿತು.
ಜಿಲ್ಲೆಯ ವಿವಿಧ ಗ್ರಾಮಪಂಚಾಯತಿಗಳಿಂದ ಆಯ್ದ ತೆಂಗು ಕೃಷಿಕರಿಗೆ ಮತ್ತು ಕೃಷಿ ಇಲಾಖೆ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪ್ರಧಾನ ಕೃಷಿ ಅಧಿಕಾರಿ ಟೀಸಮ್ಮ ಥಾಮಸ್ ಸಮಾರಂಭ ಉದ್ಘಾಟಿಸಿದರು. ಸಿ.ಪಿ.ಸಿ.ಆರ್.ಐ. ಪ್ರಭಾರ ನಿರ್ದೇಶಕ ಡಾ.ಕೆ.ಬಿ.ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು.
ಈ ಸಮಾರಂಭ ಕುರಿತು ಸಿದ್ಧಪಡಿಸಿದ ಹೊತ್ತಗೆಯನ್ನು ಮೊಗ್ರಾಲ್ ಪುತ್ತೂರು ಗ್ರಾಮಪಂಚಾಯತಿ ಅಧ್ಯಕ್ಷ ಎ.ಎ.ಜಲೀಲ್ ಬಿಡುಗಡೆಗೊಳಿಸಿದರು. ಕಾಸರಗೋಡು ಆತ್ಮ ಸಂಘಟನೆಯ ಯೋಜನಾ ನಿರ್ದೇಶಕ ಸ್ಟೆಲ್ಲಜೇಕಬ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಸೇವೆಯಿಂದ ನಿವೃತ್ತರಾಗುತ್ತಿರುವ ಕೃಷಿ ವಿಜ್ಞಾನ ಕೇಂದ್ರದ ಪ್ರಧಾನ ತಾಂತ್ರಿಕ ಅಧಿಕಾರಿ ಡಾ.ಎಸ್.ಲೀನಾ, ಪ್ರಧಾನ ಕೃಷಿ ಅಧಿಕಾರಿ ಟೀಸಮ್ಮ ಥಾಮಸ್ ಅವರನ್ನು ಅಭಿನಂದಿಸಲಾಯಿತು. ಪ್ರಧಾನ ವಿಜ್ಞಾನಿ ಡಾ.ಸಿ.ತಂಬಾನ್, ವಿಜ್ಞಾನಿ ಡಾ.ಪಿ.ಎಸ್.ಪ್ರತಿಭಾ ವಿವಿಧ ವಿಷಯಗಳನ್ನು ಮಂಡಿಸಿದರು. ತೆಂಗಿನ ಕೀಟಬಾಧೆ ನಿಯಂತ್ರಣ ಇತ್ಯಾದಿ ವಿಷಯಗಳಲ್ಲಿ ಸಂವಾದ ನಡೆಯಿತು. ಪ್ರಧಾನ ವಿಜ್ಞಾನಿ ಡಾ.ಸಿ.ತಂಬಾನ್ ಸ್ವಾಗತಿಸಿ, ವಿಜ್ಞಾನಿ ಡಾ.ಕೆ.ಪಿ.ಚಂದ್ರನ್ ವಂದಿಸಿದರು.