ನವದೆಹಲಿ: ರಾಫೆಲ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ವಿರುದ್ದ ಚೌಕಿದಾರ್ ಚೋರ್ ಹೈ ಎಂಬ ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಸುಪ್ರೀಂ ಕೋರ್ಟ್ ನಲ್ಲಿ ಭೇಷರತ್ ಕ್ಷಮೆ ಯಾಚಿಸಿದ್ದಾರೆ.
ರಫೆಲ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ನೀಡಿದ್ದ 'ಚೌಕಿದಾರ್ ಚೋರ್' ಹೇಳಿಕೆ ಇದೀಗ ಅವರನ್ನು ಬಿಟ್ಟೂ ಬಿಡದಂತೆ ಕಾಡುತ್ತಿದ್ದು, ಈ ಹಿಂದೆ ರಾಹುಲ್ ಗಾಂಧಿ ಸಲ್ಲಿಕೆ ಮಾಡಿದ್ದ ಅಫಿಡವಿಟ್ ಗೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ ಹಿನ್ನಲೆಯಲ್ಲಿ ಇಂದು ಮತ್ತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೊಸದಾಗಿ ಪ್ರಮಾಣ ಪತ್ರ ಸಲ್ಲಿಕೆ ಮಾಡಿ ಸುಪ್ರೀಂ ಕೋರ್ಟ್ ಗೆ ಭೇಷರತ್ ಕ್ಷಮೆ ಯಾಚಿಸಿದ್ದಾರೆ. ಅಲ್ಲದೆ ಪ್ರಮಾಣ ಪತ್ರದಲ್ಲಿ ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ರಾಹುಲ್ ಗಾಂಧಿ, 'ಚೌಕಿದಾರ್ ಚೋರ್ ಹೈ ಎಂದು ಸುಪ್ರೀಂ ಕೋರ್ಟ್ ಹೇಳಿದೆ' ಎಂಬ ಹೇಳಿಕೆ ಉದ್ದೇಶ ಪೂರ್ವಕವಲ್ಲದ ಮತ್ತು ಅಜಾಗರೂಕ ಹೇಳಿಕೆಯಾಗಿದೆ. ಹೀಗಾಗಿ ನಾನು ಘನ ನ್ಯಾಯಾಲಯವನ್ನು ಬೇಷರತ್ ಕ್ಷಮೆ ಯಾಚಿಸುತ್ತಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಹಿಂದೆ ಅಂದರೆ ಕಳೆದ ಏಪ್ರಿಲ್ 30ರಂದು ನಡೆದಿದ್ದ ವಿಚಾರಣೆಯಲ್ಲಿ 'ಚೌಕಿದಾರ್ ಚೋರ್' ಹೇಳಿಕೆ ಸಂಬಂಧ ಸುಪ್ರೀಂಕೋರ್ಟ್ ನಲ್ಲಿ ನಡೆದ ವಿಚಾರಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ನ್ಯಾಯಪೀಠದ ಮುಂದೆ ಕ್ಷಮೆ ಕೋರಿದ್ದರು. ಆದರೆ ತಮ್ಮ ಹೇಳಿಕೆ ಕುರಿತು ನೇರವಾಗಿ ತಪ್ಪೊಪ್ಪಿಕೊಳ್ಳದ ರಾಹುಲ್ ಗಾಂಧಿ ಅವರ ನಡೆ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಈ ವೇಳೆ, ಸಿಜೆಐ ರಂಜನ್ ಗೊಗೊಯಿ ನೇತೃತ್ವದ ಪೀಠವು, 'ನೀವು ತಪ್ಪು ಮಾಡಿದ್ದರೆ, ಒಪ್ಪಿಕೊಳ್ಳಬೇಕು.. ಪ್ರಮಾಣಪತ್ರದಲ್ಲಿನ ನಿಮ್ಮ ಸಮರ್ಥನೆಗಳನ್ನು ಅರ್ಥ ಮಾಡಿಕೊಳ್ಳುವುದು ನಮಗೆ ಕಷ್ಟವಾಗುತ್ತಿದೆ. ಪ್ರಮಾಣಪತ್ರದಲ್ಲಿ ಉಲ್ಲೇಖಿಸಿರುವ ರಾಜಕೀಯ ನಿಲುವುಗಳು ನಮಗೆ ಸಂಬಂಧವಿಲ್ಲದ್ದು.. ನಮ್ಮ ತೀರ್ಪಿನಲ್ಲಿ ಚೌಕಿದಾರ್ ಚೋರ್ ಎಂದು ಎಲ್ಲಿ ಹೇಳಿದ್ದೇವೆ? ಎಲ್ಲ ಹೇಳಿಕೆಗಳನ್ನು ಪೀಠವೇ ಹೇಳಿದೆ ಎಂದು ನೀವು ಹೇಗೆ ಹೇಳುತ್ತೀರಿ.. ಎಂದು ಪ್ರಶ್ನಿಸಿದ್ದರು. ಅಲ್ಲದೆ ರಾಹುಲ್ ಗಾಂಧಿ ಅವರು ಸಲ್ಲಿಕೆ ಮಾಡಿರುವ ಪ್ರಮಾಣಪತ್ರದ ಕುರಿತೂ ಅಸಮಾಧಾನ ವ್ಯಕ್ತಪಡಿಸಿರುವ ಕೋರ್ಟ್, 'ಪ್ರಮಾಣಪತ್ರದಲ್ಲಿ ಬಳಸಿರುವ 'ವಿಷಾದ' ಪದದ ಅರ್ಥವೇನು?.. ಕಾಂಗ್ರೆಸ್ ಅಧ್ಯಕ್ಷರು ಒಂದು ಹಂತದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, ಇನ್ನೊಂದೆಡೆ ನಿಂದನೆಯ ಹೇಳಿಕೆ ನೀಡಿಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.
ಅಂತೆಯೇ 'ಈ ವಿಷಯವನ್ನು ಇನ್ನೆಷ್ಟು ದಿನಗಳವರೆಗೂ ಕೊಂಡೊಯ್ಯುತ್ತೀರಿ ಎಂದು ಪ್ರಶ್ನಿಸಿದ್ದ ಕೋರ್ಟ್ ಈಗಿರುವ ಪ್ರಮಾಣಪತ್ರದಲ್ಲಿನ ಗೊಂದಲಗಳನ್ನು ನಿವಾರಿಸಲು ಇನ್ನೊಂದು ಸ್ಪಷ್ಟವಾದ ಪ್ರಮಾಣಪತ್ರ ಸಲ್ಲಿಸುವಂತೆ ರಾಹುಲ್ ಗಾಂಧಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರಿಗೆ ಸೂಚಿಸಿತ್ತು.
ಅದರಂತೆ ಸಿಂಘ್ವಿ ಅವರು ಇಂದು ರಾಹುಲ್ ಗಾಂಧಿ ಪರವಾಗಿ ಹೊಸದಾಗಿ ಪ್ರಮಾಣ ಪತ್ರ ಸಲ್ಲಿಕೆ ಮಾಡಿದ್ದಾರೆ.