ವಿಶ್ವಸಂಸ್ಥೆ: ಶ್ರೀಲಂಕಾದಲ್ಲಿನ ಅಲ್ಪಸಂಖ್ಯಾತರ ಮೇಲಿನ 'ದ್ವೇಷಮಯ ದಾಳಿ' ನಿಲ್ಲಿಸಿ, ಶಾಂತಿ ಸ್ಥಾಪನೆಗೆ ಸಹಕರಿಸಿ ಎಂದು ವಿಶ್ವಸಂಸ್ಥೆ ಹೇಳಿದೆ.
ಕಳೆದ ಈಸ್ಟರ್ ಸಂಡೇ ಉಗ್ರ ದಾಳಿ ಬಳಿಕ ಶ್ರೀಲಂಕಾದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಕೋಮು ಸಂಘರ್ಷವಾಗಿ ಮಾರ್ಪಟ್ಟಿದ್ದು, ಲಂಕಾದಲ್ಲಿ ಅಲ್ಪ ಸಂಖ್ಯಾತರ ಮೇಲೆ ದಾಳಿ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದ್ದು, ಧರ್ಮಾಧಾರಿತ ಹಿಂಸಾಚಾರ 'ದ್ವೇಷಮಯ ದಾಳಿ' ಗಳನ್ನು ಕೊನೆಗೊಳಿಸಬೇಕು ಎಂದು ಹೇಳಿದೆ.
ಈ ಬಗ್ಗೆ ಸಮೂಹ ಹತ್ಯೆ ತಡೆ ಕುರಿತ ವಿಶ್ವಸಂಸ್ಥೆಯ ಸಲಹೆಗಾರರಾದ ಆಡಮ್ ಡೈಂಗ್ ಮತ್ತು ರಕ್ಷಣೆಯ ಜವಾಬ್ದಾರಿ ಕುರಿತ ವಿಶ್ವಸಂಸ್ಥೆಯ ವಿಶೇಷ ಸಲಹೆಗಾರರಾದ ಕರನ್ ಸ್ಮಿತ್ ಅವರು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, 'ಶ್ರೀಲಂಕಾದ ವಾಯವ್ಯ ಪ್ರಾಂತ್ಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ನಡೆಯುತ್ತಿರುವ ಧರ್ಮಾಧಾರಿತ ಹಿಂಸಾಚಾರ ದ್ವೇಷಮಯ ದಾಳಿಗಳನ್ನು ಕೊನೆಗೊಳಿಸಬೇಕು' ಎಂದು ವಿಶ್ವಸಂಸ್ಥೆಯ ಇಬ್ಬರು ವಿಶೇಷ ಸಲಹೆಗಾರರು ಶ್ರೀಲಂಕಾ ಸರ್ಕಾರಕ್ಕೆ ಕರೆ ನೀಡಿದ್ದಾರೆ. "ಶ್ರೀಲಂಕಾದ ಎಲ್ಲಾ ಜನಾಂಗೀಯ ಮತ್ತು ಧಾರ್ಮಿಕ ಗುಂಪುಗಳ ಜೊತೆಗೆ, ಸರ್ಕಾರ, ವಿರೋಧ ಪಕ್ಷ, ನಾಗರಿಕ ಸಮಾಜ ಮತ್ತು ಭದ್ರತಾ ಸಿಬ್ಬಂದಿ ಕೂಡ ಈ ದ್ವೇಷದ ದಾಳಿಗಳನ್ನು ತಕ್ಷಣ ನಿಲ್ಲಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈಸ್ಟರ್ ಸಂಡೇ ದಿನ ದೇಶದ ರಾಜಧಾನಿ ಕೊಲಂಬೋದ ಕ್ರಿಶ್ಚಿಯನ್ ಚರ್ಚ್ ಮತ್ತು ಹೋಟೆಲ್ ಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 200ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಕ್ಕೆ ಪ್ರತೀಕಾರವಾಗಿ ಕೆಲವು ಮಸೀದಿ ಹಾಗೂ ಮುಸ್ಲಿಮರ ಮನೆಗಳ ಮೇಲೆ ದಾಳಿ ನಡೆಸಲಾಗಿತ್ತು.