ತಿರುವನಂತಪುರ: ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಪೊಲೀಸರ ದಶಕಗಳ ಹಳೆಯ ಕ್ಯಾಪ್ ಬದಲಾಗಿ ಇನ್ನು ಕೇರಳದ ಪೊಲೀಸರ ಕ್ಯಾಪ್‍ನ ವಿನ್ಯಾಸದಲ್ಲಿ ಬದಲಾವಣೆ ಬರಲಿದೆ.
ಉನ್ನತ ಪೊಲೀಸ್ ಅಧಿಕಾರಿಗಳು ಮಾತ್ರ ಉಪಯೋಗಿಸಲು ಅನುಮತಿಯಿರುವ ಬೆರೆಟ್ಸ್ ಕ್ಯಾಪ್‍ಗಳ ಮಾದರಿಯಲ್ಲಿರುವ ಕ್ಯಾಪ್‍ಗಳನ್ನು ಎಲ್ಲಾ ಪೊಲೀಸರಿಗೆ ನೀಡಲು ತೀರ್ಮಾನಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಪೊಲೀಸರು ಧರಿಸುವ ದಶಕಗಳ ಹಳೆಯ ಸ್ಕೌಚ್ ಕ್ಯಾಪ್ ಬದಲು ಪಿ-ಕ್ಯಾಪ್ ಬಳಕೆ ಕುರಿತು ಚಿಂತನೆ ನಡೆಸುತ್ತಿರುವಾಗಲೇ, ಕೇರಳ ಪೊಲೀಸರು ಈಗಾಗಲೇ ಉಪಯೋಗಿಸುತ್ತಿರುವ ಪಿ-ಕ್ಯಾಪ್‍ನಿಂದ ಬೆರೆಟ್ಸ್ ಕ್ಯಾಪ್ ಬಳಕೆಗೆ ಉತ್ಸುಕರಾಗಿದ್ದಾರೆ.
ಕೇರಳ ಪೊಲೀಸರು ಪಿ-ಕ್ಯಾಪ್ ಉಪಯೋಗಿಸಲು ಉಂಟಾಗುವ ತೊಂದರೆಗಳ ಕುರಿತು ಪೊಲೀಸ್ ಸಂಘಟನೆಗಳ ಮೂಲಕ ಡಿಜಿಪಿಗೆ ಮನವರಿಕೆ ಮಾಡಲಾಗಿತ್ತು. ಈ ಬೇಡಿಕೆ ಪರಿಗಣಿಸಿ ಎಲ್ಲ ಪೊಲೀಸರಿಗೂ ಸುಲಭವಾಗಿ ಧರಿಸಲು ಅನುಕೂಲವಾಗುವ ಬೆರೆಟ್ಸ್ ಕ್ಯಾಪ್‍ಗಳನ್ನು ನೀಡಲು ತೀರ್ಮಾನಿಸಲಾಗಿದೆ.
ಯಾಕೆ ಬದಲಾವಣೆ :
ಪಿ-ಕ್ಯಾಪ್ ಧರಿಸಿ ಕಾನೂನು ಸುವ್ಯವಸ್ಥೆ ಪಾಲನೆ ಸಂದರ್ಭದಲ್ಲಿ ಮತ್ತು ಪೊಲೀಸ್ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಇದೀಗ ಧರಿಸುವ ಪಿ-ಕ್ಯಾಪ್ ತಲೆಯಲ್ಲಿ ಇಟ್ಟುಕೊಳ್ಳಲು ಕಷ್ಟವಾಗುತ್ತದೆ. ಅಲ್ಲದೆ ಇಂತಹ ಕ್ಯಾಪ್ ಧರಿಸುವುದರಿಂದ ಪೊಲೀಸರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಬೇಸಿಗೆ ಸಂದರ್ಭದಲ್ಲೂ ಪಿ-ಕ್ಯಾಪ್ ಧರಿಸುವುದು ಸಮಸ್ಯೆ ಸೃಷ್ಟಿಸುತ್ತಿದೆ. ಪ್ರಯಾಣದ ಸಂದರ್ಭದಲ್ಲೂ, ವಾಹನ ಚಾಲನೆ ಸಂದರ್ಭದಲ್ಲೂ ಸಮಸ್ಯೆಯಾಗುತ್ತಿರುವ ಬಗ್ಗೆ ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಬೆರೆಟ್ಸ್ ಕ್ಯಾಪ್‍ಗಳನ್ನು ಒದಗಿಸಬೇಕೆಂದು ಪೊಲೀಸ್ ಆಫೀಸರ್ಸ್ ಆಸೋಸಿಯೇಶನ್‍ನ ಬೇಡಿಕೆಯಾಗಿತ್ತು.
ಈ ಮಧ್ಯೆ ಡಿವೈಎಸ್ಪಿಯಿಂದ ಹಿಡಿದು ಮೇಲಿನ ಉನ್ನತ ಪೊಲೀಸ್ ಅಧಿಕಾರಿಗಳು ಉಪಯೋಗಿಸುವ ಬೆರೆಟ್ಸ್ ಕ್ಯಾಪ್‍ಗಳನ್ನು ಇನ್ನು ಸಿವಿಲ್ ಪೊಲೀಸ್ ಅಫೀಸರ್‍ನಿಂದ ಹಿಡಿದು ಡಿವೈಎಸ್ಪಿ ತನಕ ಉಪಯೋಗಿಸುವುದಕ್ಕಾಗಿ ಡಿಜಿಪಿ ಅನುಮತಿ ನೀಡಿದ್ದಾರೆ. ಪ್ರಸಕ್ತ ಸರ್ಕಲ್ ಇನ್ಸ್‍ಪೆಕ್ಟರ್ ರ್ಯಾಂಕ್‍ಗಿಂತ ಮೇಲಿನ ಅಧಿಕಾರಿಗಳು ಧರಿಸುವ ಕ್ಯಾಪ್‍ಗಳ ಬಣ್ಣ ನೀಲಿ. ಕೆಳಗಿನ ರ್ಯಾಂಕ್‍ನಲ್ಲಿರುವ ಪೊಲೀಸರು ಉಪಯೋಗಿಸುವ ಕ್ಯಾಪ್‍ನ ಬಣ್ಣ ಕಪ್ಪು. ಹಿರಿಯ ಅಧಿಕಾರಿಗಳಿಗೆ ಪ್ರಸ್ತುತ ರಾಯಲ್ ಬ್ಲೂ ಬಣ್ಣದ ಬೆರೆಟ್ಸ್ ಕ್ಯಾಪ್‍ಗಳಿವೆ. ಆದರೆ ಪಾಸಿಂಗ್ ಔಟ್, ವಿಐಪಿ ಭೇಟಿ, ಔದ್ಯೋಗಿಕ ಕಾರ್ಯಕ್ರಮಗಳಲ್ಲಿ ಹಳೆಯ ರೀತಿಯ ಕ್ಯಾಪ್‍ಗಳನ್ನೆ ಉಪಯೋಗಿಸಬೇಕು.
ಹೈ ಅಧಿಕಾರಿಗಳಿಗೆ ಅತೃಪ್ತಿ :
ನೂತನ ಪೊಲೀಸ್ ಕ್ಯಾಪ್ ಬದಲಾವಣೆಗೆ ಸಂಬಂಧಿಸಿದಂತೆ ಆದೇಶ ಶೀಘ್ರ ಹೊರಬೀಳಲಿದೆ. ಆದರೆ ಉನ್ನತ ಅಧಿಕಾರಿಗಳ ಮಾದರಿಯ ಕ್ಯಾಪ್‍ಗಳನ್ನು ಎಲ್ಲಾ ಪೊಲೀಸರಿಗೆ ಜಾರಿಗೊಳಿಸುವುದರಲ್ಲಿ ಹಲವು ಹಿರಿಯ ರ್ಯಾಂಕ್‍ನ ಅಧಿಕಾರಿಗಳ ಸಂಘಟನೆಗಳು ತಮ್ಮ ಅತೃಪ್ತಿಯನ್ನು ತಿಳಿಸಿದೆ. ಪೊಲೀಸ್ ಕ್ಯಾಪ್ ಬದಲಾವಣೆಯ ಅಂತಿಮ ತೀರ್ಮಾನವನ್ನು ಡಿಜಿಪಿಯ ಅಧ್ಯಕ್ಷತೆಯಲ್ಲಿ ನಡೆದ ಸ್ಟಾಫ್ ಕೌನ್ಸಿಲ್ ಸಭೆಯಲ್ಲಿ ಕೈಗೊಳ್ಳಲಾಗಿದೆ. ಇದಕ್ಕೆ ಶೀಘ್ರವೇ ರಾಜ್ಯ ಗೃಹ ಇಲಾಖೆಯ ಅನುಮತಿ ಲಭಿಸುವ ಸಾಧ್ಯತೆಯಿದೆ.