ನವದೆಹಲಿ: ದೇಶದ ಏಳು ರಾಜ್ಯಗಳ 51 ಲೋಕಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯುತ್ತಿದ್ದು, ಯುಪಿಎ ಮುಖ್ಯಸ್ಥೆ ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಗೃಹ ಸಚಿವ ರಾಜನಾಥ್ ಸಿಂಗ್, ಸ್ಮೃತಿ ಇರಾನಿ ಮತ್ತಿತರ ನಾಯಕರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
ಉತ್ತರ ಪ್ರದೇಶದ 14 ಕ್ಷೇತ್ರ, ರಾಜಸ್ತಾನದ 12, ಪಶ್ಚಿಮ ಬಂಗಾಳ , ಮಧ್ಯಪ್ರದೇಶದಲ್ಲಿ ತಲಾ ಏಳು ಹಾಗೂ ಬಿಹಾರದಲ್ಲಿನ ಐದು, ಜಾಖರ್ಂಡ್ ನಲ್ಲಿನ ನಾಲ್ಕು ಹಾಗೂ ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಹಾಗೂ ಲಡಾಖ್ ಕ್ಷೇತ್ರದಲ್ಲಿ ನಾಳೆ ಚುನಾವಣೆ ಆರಂಭಗೊಂಡಿದೆ.
ಸುಮಾರು 8.75 ಕೋಟಿ ಮತದಾರರು ಮತ ಚಲಾಯಿಸಲು ಅರ್ಹತೆ ಹೊಂದಿದ್ದು, 674 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. 96 ಸಾವಿರ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗಾಗಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಅಮೇಥಿಯಲ್ಲಿ ರಾಹುಲ್ ಗಾಂಧಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದರೆ, ರಾಯಬರೇಲಿ ಕ್ಷೇತ್ರದಿಂದ ಸೋನಿಯಾಗಾಂಧಿ ಪುನರ್ ಆಯ್ಕೆ ಬಯಸಿದ್ದಾರೆ. ಇಲ್ಲಿ ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ಮತ್ತಿತರರು ಸೋನಿಯಾಗೆ ಎದುರಾಳಿಯಾಗಿದ್ದಾರೆ.
ಬಿಜೆಪಿಯ ರಾಜನಾಥ್ ಸಿಂಗ್ ಲಖನೌ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಕೇಂದ್ರ ಸಚಿವರಾದ ರಾಜ್ಯ ವರ್ಧನ್ ಸಿಂಗ್ ರಾಥೋಡ್, ಅರ್ಜುನ್ ರಾಮ್ ಮೇಘ್ ವಾಲ್, ಮತ್ತು ಜಯಂತ್ ಸಿನ್ಹಾ ಕ್ರಮವಾಗಿ ಜೈಪುರ ಗ್ರಾಮಾಂತರ, ಬಿಕನೇರ್ ಹಾಗೂ ಜಾಖರ್ಂಡ್ ನ ಹಜಾರಿಬಾಗ್ ಕ್ಷೇತ್ರದಿಂದ ಕಣದಲ್ಲಿದ್ದಾರೆ.
ಈಗಾಗಲೇ ನಾಲ್ಕು ಹಂತಗಳ ಚುನಾವಣೆ ಮುಗಿದಿದ್ದು, ಇಂದು ಐದನೇ ಹಂತ, ಮೇ 12 ರಂದು 6 ಹಾಗೂ ಮೇ 19 ರಂದು ಏಳನೇ ಹಂತದ ಚುನಾವಣೆ ನಡೆಯಲಿದೆ. ಮೇ 23 ರಂದು ಮತ ಎಣಿಕೆ ಘೋಷಣೆಯಾಗಲಿದೆ.