ನವದೆಹಲಿ: ಫೋನಿ ಚಂಡಮಾರುತ ಒಡಿಶಾದ ಬಳಿಕ ಪಶ್ಚಿಮ ಬಂಗಾಳದಲ್ಲೂ ಭಾರೀ ಅನಾಹುತ ಸೃಷ್ಟಿಸಿದ್ದು ಈ ಹಿನ್ನೆಲೆಯಲ್ಲಿ ಚಂಡಮಾರುತದ ಹಾನಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ಮಮತಾ ಬ್ಯಾನರ್ಜಿಗೆ ಕರೆ ಮಾಡಿದ್ದರೂ ಮಮತಾ ಕರೆಯನ್ನು ಸ್ವೀಕರಿಸಿಲ್ಲ ಅಲ್ಲದೆ ಮರು ಕರೆಯನ್ನೂ ಮಾಡಿಲ್ಲವೆಂದು ತಿಳಿದುಬಂದಿದೆ.
ನಂತರ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡರು ಎಂದು ಉನ್ನತ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಎಂ ಮಮತಾ ಬ್ಯಾನರ್ಜಿಯನ್ನು ಸಂಪರ್ಕಿಸಲು ಪ್ರಧಾನಿ ಮೋದಿ ಅವರ ಸಿಬ್ಬಂದಿ ಎರಡು ಬಾರಿ ಪ್ರಯತ್ನಿಸಿದರು. ಎರಡೂ ಬಾರಿ ಮರು ಕರೆ ಮಾಡಲಾಗುವುದು ಎಂದು ಹೇಳಿದರು. ಮತ್ತೊಂದು ಸಲ ಕರೆ ಮಾಡಿದಾಗ ಮುಖ್ಯಮಂತ್ರಿಗಳು ಪ್ರವಾಸದಲ್ಲಿದ್ದಾರೆ ಎಂದು ತಿಳಿಸಿದರು ಎಂದು ಅಧಿಕಾರಿ ಹೇಳಿದರು.
ತೃಣಮೂಲ ಕಾಂಗ್ರೆಸ್ ಚಂಡಮಾರುತ ಹಾವಳಿಯಿಂದ ಉಂಟಾದ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ಮಾತನಾಡುತ್ತಿಲ್ಲ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಈ ಹೇಳಿಕೆ ಹೊರಬಿದ್ದಿದೆ.