ಬದಿಯಡ್ಕ: ನಿರಂತರ ಭಗವದ ಆರಾಧನೆಯಿಂದ ನಮ್ಮಲ್ಲಿ ಅಡಕವಾಗಿರುವ ನಾನು ಎಂಬುವಂತಹ ಅಹಂಕಾರ, ಸ್ವಾರ್ಥ ನಾಶವಾಗಿ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಏನೂ ಇಲ್ಲವೆಂಬ ಸ್ಥಿತಿಗೆ ನಮ್ಮ ಮನಸ್ಸನ್ನು ಕೊಂಡೊಯ್ದು, ನಮ್ಮೊಳಗಿರುವ ಪರಮಾತ್ಮನ ಚೈತನ್ಯವನ್ನು ನಾವು ದಿನನಿತ್ಯ ಪೂಜಿಸಬೇಕು ಎಂದು ವೇದಮೂರ್ತಿ ಡಾ.ಕೇಶವ ಕಿರಣ ಬಾಕಿಲಪದವು ಹೇಳಿದರು.
ಮಂಗಳವಾರ ರಾತ್ರಿ ಪಳ್ಳತ್ತಡ್ಕ ಮುದ್ದುಮಂದಿರದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳ ಮಂಗಲ ಮುಹೂರ್ತದ ಸಂದರ್ಭದಲ್ಲಿ ವಿಶೇಷೋಪನ್ಯಾಸಗೈದು ಅವರು ಮಾತನಾಡಿದರು. ಗುರುವಿನ ಅನುಗ್ರಹದೊಂದಿಗೆ ಕೈಗೊಂಡ ಕಾರ್ಯಗಳಿಗೆ ಜಯ ಸಿದ್ಧ. ನಿತ್ಯ ನೈಮಿತ್ತಿಕ ಕರ್ಮಗಳನ್ನು ಯಥಾವತ್ತಾಗಿ ಪ್ರತಿಯೊಬ್ಬರೂ ಮಾಡುವುದರಿಂದ ತಿಳಿದೋ ತಿಳಿಯದೆಯೋ ಮಾಡಿದ ಪಾಪಕ್ಕೆ ಪ್ರಾಯಶ್ಚಿತ ಲಭಿಸುತ್ತದೆ. ದೈವಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದಲೂ ಉತ್ತಮ ಫಲ ಸಿಗುತ್ತದೆ. ಶ್ರದ್ಧೆಯಿಂದ ಶುದ್ಧ ಮನಸ್ಸಿನಲ್ಲಿ ಭಗವಂತನ ಆರಾಧನೆಯನ್ನು ಮಾಡುವ ಮೂಲಕ ಸಾಫಲ್ಯತೆ ಲಭಿಸುತ್ತದೆ. ಮನದಲ್ಲಿರುವ ಅಜ್ಞಾನವೆಂಬ ಕತ್ತಲೆಯು ನಿವಾರಣೆಯಾಗಿ ಜ್ಞಾನದ ಬೆಳಕು ಸದಾ ಹರಿಯಲಿ ಎಂದು ಅವರು ಪ್ರಾರ್ಥಿಸಿದರು.
ಪಳ್ಳತ್ತಡ್ಕದಲ್ಲಿ ಶ್ರೀ ದುರ್ಗಾಪರಮೇಶ್ವರಿ ಸಾನ್ನಿಧ್ಯವಿರುವುದಾಗಿ ಹಲವು ಪ್ರಶ್ನೆಚಿಂತನೆಗಳಲ್ಲಿ ಕಂಡುಬಂದ ಪ್ರಕಾರ ಕೈಗೊಂಡ ಪರಿಹಾರ ಕಾರ್ಯಗಳ ಕೊನೆಯ ಭಾಗವಾಗಿ ಲೋಕಕಲ್ಯಾಣಾರ್ಥ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ದೀಪಾರಾಧನೆಯೊಂದಿಗೆ ತ್ರಿಕಾಲ ಪೂಜೆ ಆರಂಭಿಸಲಾಯಿತು. ನಂತರ 12 ಕಾಯಿಗಳ ಗಣಪತಿ ಹೋಮ, ಮಧ್ಯಾಹ್ನ ಶಿವಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಚಂಡಿಕಾ ಹವನ, ತ್ರಿಕಾಲ ಪೂಜೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.ವೇದಮೂರ್ತಿ ಶಿವಸುಬ್ರಹ್ಮಣ್ಯ ಭಟ್ ಶುಳುವಾಲಮೂಲೆ ವೈದಿಕ ವಿಧಿವಿಧಾನಗಳನ್ನು ನಿರ್ವಹಿಸಿದರು. ಊರಪರವೂರ ಭಕ್ತಾದಿಗಳು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.