ಕೊಚ್ಚಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ತಿರುವನಂತಪುರ ಮತ್ತು ಪತ್ತನಂತಿಟ್ಟ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಮೆತ್ರಿಕೂಟವು ಗೆಲುವು ಸಾಧಿಸಲಿದೆ ಎಂದು ಬಿಜೆಪಿ ಕೇರಳ ರಾಜ್ಯ ಸಮಿತಿಯ ಸಭೆಯಲ್ಲಿ ಲೆಕ್ಕಹಾಕಲಾಗಿದೆ.
ಮಾತ್ರವಲ್ಲದೆ ತೃಶ್ಶೂರು ಲೋಕಸಭಾ ಕ್ಷೇತ್ರದಲ್ಲಿ ಭಾರೀ ಪವಾಡ ನಡೆಯುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ. ಲೋಕಸಭಾ ಚುನಾವಣೆಯ ಬಳಿಕ ಕೊಚ್ಚಿಯಲ್ಲಿ ಇತ್ತೀಚೆಗೆ ಜರಗಿದ ಬಿಜೆಪಿ ರಾಜ್ಯ ನೇತೃತ್ವ ಕಾರ್ಯಕಾರಿಣಿ ಸಭೆಯಲ್ಲಿ ಈ ಲೆಕ್ಕಾಚಾರ ಮಾಡಲಾಗಿದೆ.
ಕೇರಳದಲ್ಲಿ ಎನ್‍ಡಿಎ ಭಾರೀ ಬೆಳವಣಿಗೆ ಕಂಡಿದೆ. ಇದರಲ್ಲಿ ಬಿಜೆಪಿಗೆ ಶೇಕಡಾ 20ರಷ್ಟು ಮತಗಳು ಲಭಿಸಲಿವೆ. ಅದರಲ್ಲೂ ಶೇಕಡಾ 18ಕ್ಕಿಂತ ಕಡಿಮೆ ಮತ ಬಿಜೆಪಿಗೆ ಖಂಡಿತಾ ದೊರಕದು ಎಂದು ಅಂದಾಜಿಸಲಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಎನ್‍ಡಿಎ ಒಕ್ಕೂಟಕ್ಕೆ ಶೇಕಡಾ 15ರಷ್ಟು ಮತ ದೊರಕಿತ್ತು. ಒಟ್ಟು 20 ಲೋಕಸಭಾ ಕ್ಷೇತ್ರಗಳ ಪೈಕಿ ಎರಡರಲ್ಲಿ ಬಿಜೆಪಿ ಗೆಲುವಿನತ್ತ ಅತೀ ನಿಕಟವಾಗಿತ್ತು ಎಂಬುದನ್ನು ಸಭೆಯಲ್ಲಿ ಉಲ್ಲೇಖಿಸಲಾಯಿತು.
ಶಬರಿಮಲೆ ವಿಷಯದಲ್ಲಿ ಎಲ್‍ಡಿಎಫ್‍ಗೆ ಲಭಿಸುವ ಬಹುಸಂಖ್ಯೆಯ ಮತಗಳು ಕುಸಿದು ಅದು ಬಿಜೆಪಿಗೆ ಅನುಕೂಲಕರವಾಗಿ ಪರಿಣಮಿಸಿದೆ. ಈ ಚುನಾವಣೆಯಲ್ಲಿ ಯುಡಿಎಫ್ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಎಲ್‍ಡಿಎಫ್‍ಗೆ ಭಾರೀ ಮುಖಭಂಗ ಉಂಟಾಗಲಿದೆ.
ತಿರುವನಂತಪುರ ಮತ್ತು ಪತ್ತನಂತಿಟ್ಟ ಕ್ಷೇತ್ರಗಳಲ್ಲಿ ಎನ್‍ಡಿಎ ಮೈತ್ರಿಕೂಟವು 10,000 ದಿಂದ 20,000 ಮತಗಳ ತನಕದ ಅಂತರದಿಂದ ಗೆಲುವು ಸಾಧಿಸಲಿದೆ ಎಂಬ ಲೆಕ್ಕಾಚಾರವನ್ನು ಬಿಜೆಪಿ ಹಾಕಿದೆ. ತೃಶ್ಶೂರಿನಲ್ಲಿ ನಟ ಸುರೇಶ್ ಗೋಪಿ ಭಾರೀ ಜನಾಕರ್ಷಣೆ ಸೃಷ್ಟಿಸಿರುವುದು ಎನ್‍ಡಿಎಗೆ ಅನುಕೂಲಕರ ವಾಗಲಿದೆ ಎಂದು ಅಂದಾಜಿಸಲಾಗಿದೆ. ತಿರುವನಂತಪುರದಲ್ಲಿ ಎನ್‍ಡಿಎ ಅಭ್ಯರ್ಥಿಯಾಗಿ ಕುಮ್ಮನಂ ರಾಜಶೇಖರನ್ ಮತ್ತು ಪತ್ತನಂತಿಟ್ಟದಲ್ಲಿ ಕೆ.ಸುರೇಂದ್ರನ್ ಸ್ಪರ್ಧಿಸಿದ್ದರು.