ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಕುರಿತು ಲಘುವಾಗಿ ಮಾತನಾಡಿದ್ದ ಕಾಂಗ್ರೆಸ್ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ತಮ್ಮ ವಿವಾದಾತ್ಮಕ ಹೇಳಿಕೆಗೆ ಶುಕ್ರವಾರ ಕ್ಷಮೆಯಾಚಿಸಿದ್ದಾರೆ.
ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ. ನಾನು ಆ ಕಹಿ ಘಟನೆಯನ್ನು ಮರೆತು ಭವಿಷ್ಯದೆಡೆಗೆ ಮುನ್ನಡೆಯಬೇಕಿದೆ ಎಂಬರ್ಥದಲ್ಲಿ ಹೇಳಿದ್ದೇನೆ. ತಮಗೆ ಹಿಂದಿ ಭಾಷೆ ಮೇಲೆ ಹಿಡಿತವಿಲ್ಲದ ಕಾರಣ ಉದ್ದೇಶಪೂರ್ವಕವಾಗಿ ನೀಡದ ಹೇಳಿಕೆಯಿಂದ ಸಿಖ್ ಸುಮುದಾಯಕ್ಕೆ ನೋವಾಗಿದ್ದರೆ ಬೇಷರತ್ ಕ್ಷಮೆ ಕೋರುತ್ತೇನೆ ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.
ಇದಕ್ಕೂ ಮೊದಲು ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಅವರ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿತ್ತು. ಅಲ್ಲದೇ ಸಿಖ್ ನರಮೇಧದ ಕುರಿತು ಸ್ಯಾಮ್ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಎಂದು ಹೇಳಿತ್ತು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸ್ಯಾಮ್ ಪಿತ್ರೋಡಾ ಅವರು, ಸಿಖ್ ನರಮೇಧದ ಕುರಿತು ಕೇಳಿದ ಪ್ರಶ್ನೆಗೆ ಆಗಿದ್ದು ಆಗಿ ಹೋಯಿತು ಏನು ಮಾಡಲು ಸಾಧ್ಯ. ಈಗ ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಮಾಡಿರುವ ಅಭಿವೃದ್ಧಿ ಕೆಲಸಗಳ ಕುರಿತು ಮಾತನಾಡಿ ಎಂದಿದ್ದರು.
ಪಿತ್ರೋಡಾ ಅವರ ಹೇಳಿಕೆ ವಿರುದ್ಧ ಕಿಡಿಕಾರಿದ ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕರ ಹೇಳಿಕೆ ಅವರ ಸೊಕ್ಕಿನ ಪರಮಾವಧಿಯಾಗಿದ್ದು, ಗಾಂಧಿ ಕುಟುಂಬದ ಆಪ್ತರ ಈ ಹೇಳಿಕೆ ಕಾಂಗ್ರೆಸ್ ಜನ ಸಾಮಾನ್ಯರ ಮೇಲಿರುವ ಕಾಳಜಿಯನ್ನು ಮತ್ತು ಮಾನವೀಯತೆಯನ್ನು ತೋರಿಸುತ್ತದೆ ಎಂದಿದ್ದರು.