ಉಪ್ಪಳ: ರಾಜ್ಯಾದ್ಯಂತ ತ್ವರಿತ ಗತಿಯ ಶುಚೀಕರಣ ಪ್ರಕ್ರಿಯೆಗೆ ಸರಕಾರ ಚಾಲನೆ ನೀಡಿ ವ್ಯಾಪಕ ಪ್ರಮಾಣದ ಪ್ರಚಾರದ ಮೂಲಕ ನೈರ್ಮಲ್ಯದ ಪಣ ತೊಟ್ಟಿರುವಂತೆ ಮತ್ತೊಂದೆಡೆ ತ್ಯಾಜ್ಯಗಳ ರಾಶಿಯಿಂದ ಗಬ್ಬೆದ್ದು ನಾರುತ್ತಿರುವುದು ನಾಗರಿಕ ಪ್ರಜ್ಞೆಯ ಸಂಕೇತವೆಂಬಂತೆ ಅಣಕವಾಡುತ್ತಿದೆ.
ಇತಿಹಾಸ ಪ್ರಸಿದ್ಧವಾದ ಪೊಸಡಿ ಗುಂಪೆ ಕಾಸರಗೋಡು ಜಿಲ್ಲೆಯ ಪುರಾಣ ಐತಿಹ್ಯ ಇರುವ ಸ್ಥಳ. ಕೇರಳ ಸರಕಾರ ಇದನ್ನು ಪ್ರವಾಸಿ ಕೇಂದ್ರ ಎಂದು ಗುರುತಿಸಿದ್ದರೂ ಕೇವಲ ನಾಮ ಫಲಕಕ್ಕೆ ಮಾತ್ರ ಸೀಮಿತವೇ ಹೊರತು ಯಾವುದೇ ಪ್ರಾಥಮಿಕ ಸೌಲಭ್ಯಗಳು ಇಲ್ಲಿಲ್ಲ. ಪ್ರವಾಸಿಗರು ಅನ್ನುವ ಹೆಸರಿನಲ್ಲಿ ಜನರು ಇಲ್ಲಿಗೆ ಬಂದು ಸಾಕಷ್ಟು ರೀತಿಯ ತೊಂದರೆಗಳನ್ನು ಕೊಡುವ ಘಟನೆಗಳು ಇಲ್ಲಿ ಆಗಾಗ ನಡೆಯುವ ಮಾಹಿತಿ ಬರುತ್ತಿದೆ.
ಕೆಲವು ದಿನಗಳ ಹಿಂದೆ ಪ್ರವಾಸದ ಹೆಸರಲ್ಲಿ ಬಂದ ಕೆಲವರು ನೂರಾರು ಪ್ಲಾಸ್ಟಿಕ್ ನೀರಿನ ಬಾಟಲ್, ತಟ್ಟೆಗಳು, ಮದ್ಯದ ಬಾಟಲುಗಳನ್ನು ಎಸೆದು ತಾವು ಅನಾಗರಿಕರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ತಿಂದು ಕುಡಿದು ಉಳಿದ ವಸ್ತುಗಳನ್ನು ಅಲ್ಲೇ ಎಸೆಯದೆ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕೆಂಬ ಕನಿಷ್ಠ ಜ್ಞಾನವೂ ಹೆಚ್ಚಿನವರಿಗೆ ಇಲ್ಲದಿರುವುದು ನಮ್ಮ ದುರಂತ.
ಪೊಸಡಿ ಗುಂಪೆ ಜಿಲ್ಲೆಯಲ್ಲೇ ಅತಿ ಎತ್ತರದ ಗುಡ್ಡವಾಗಿದ್ದು,ಈ ಭಾಗದಲ್ಲಿ ಕೆಲವಷ್ಟೇ ಮನೆಗಳಿವೆ. ಗುಡ್ಡದ ಬಹುತೇಕ ಪ್ರದೇಶ ಸರಕಾರದ ಭೂಮಿಯಾಗಿದ್ದು, ಅಲ್ಲಲ್ಲಿ ಖಾಸಗೀ ಭೂಮಿಗಳಿವೆ. ಗುಡ್ಡ ಅತಿ ಎತ್ತರವಾಗಿ, ಗುಡ್ಡದ ಮೇಲ್ಬದಿಯಲ್ಲಿ ನಿಂತು ನೋಡಿದರೆ ಕಾಣ ಸಿಗುವ ವಿಹಂಗಮ ನೋಟಗಳನ್ನು ಆಸ್ವಾದಿಸುವ ಹೆಸರಲ್ಲಿ ಆಗಮಿಸುವ ನೂರಾರು ಪ್ರವಾಸಿಗರು, ಚಾರಣ ಪ್ರಿಯರು ಮಳೆಗಾಲ ಹೊರತುಪಡಿಸಿ ಮಿಕ್ಕೆಲ್ಲ ಋತುಗಳಲ್ಲೂ ಇಲ್ಲಿ ಕಾಣಸಿಗುತ್ತಾರೆ. ಆದರೆ ಇಲ್ಲಿಗೆ ಯಾರು ಬರುತ್ತಾರೆ ಎಂದು ತಿಳಿಯಲು ಯಾವ ವ್ಯವಸ್ಥೆಗಳೂ ಇಲ್ಲಿಲ್ಲ. ಸರಕಾರ ಕೇವಲ ಪ್ರವಾಸೀ ತಾಣ ಎಂಬ ಫಲಕ ಹಾಕಿ ತನ್ನ ಕೆಲಸ ಅಷ್ಟೇ ಎಂಬಂತೆ ಕುಳಿತಿದೆ. ಹೀಗಿರುವಾಗ ಇದೇ ರೀತಿ ಪ್ರವಾಸದ ಹೆಸರಿನಲ್ಲಿ ಜನರು ಬಂದು ಪೊಸಡಿಗುಂಪೆಯನ್ನು ಕಸದ ಕೊಂಪೆಯಾಗಿ ಮಾಡುವ ದಿನ ದೂರವಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಈ ಭಾಗದ ಜನರು ಸರಕಾರವನ್ನು ಆಗ್ರಹಿಸಬೇಕಾಗಿದೆ.