ಕುಂಬಳೆ: ಆರಾಧನಾಲಯಗಳು ಹಾಗು ಜನವಾಸವುಳ್ಳ ಪ್ರಸಿದ್ದ ಪ್ರವಾಸೀ ಯಾತ್ರಾ ಕೇಂದ್ರ ಅನಂತಪುರದಲ್ಲಿ ತ್ಯಾಜ್ಯವನ್ನು ರಾಶಿ ಹಾಕುವ ಅಧಿಕಾರಿಗಳ ಪ್ರಯತ್ನದ ವಿರುದ್ಧ ಸ್ಥಳೀಯರು ಗುರುವಾರ ಒಗ್ಗೂಡಿ ಪ್ರತಿಭಟನೆ ನಡೆಸಿದರು. ಅನಂತಪುರದಲ್ಲಿರುವ ರಸ್ತೆ ಬದಿ ಹಾಗು ಅನಂತಪುರ ಕೇತ್ರದ ಮುಂಭಾಗದಲ್ಲಿ ವಿವಿಧ ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ನೂರಾರು ಮಂದಿ ಒಗ್ಗೂಡಿ ತೀವ್ರ ಪ್ರತಿಭಟನೆ ಸೂಚಿಸಿದ್ದಾರೆ.
ಗುರುವಾರ ನಡೆದಿತ್ತು ಶುಚಿತ್ವ ಯಜ್ಞ:
ಜಿಲ್ಲಾಡಳಿತದ ನೇತೃತ್ವದಲ್ಲಿ ಗುರುವಾರ ತ್ವರಿತಗತಿಯ ಶುಚಿತ್ವ ಯಜ್ಞ ಜಿಲ್ಲೆಯಾದ್ಯಂತ ರಾ.ಹೆದ್ದಾರಿ ಕೇಂದ್ರೀಕರಿಸಿ ಆಯೋಜಿಸಲಾಗಿತ್ತು. ಹೀಗೆ ಸಮಗ್ರಹಿಸಿದ ತ್ಯಾಜ್ಯಗಳನ್ನು ಅನಂತಪುರದ ಕ್ಷೇತ್ರ ಸಮೀಪದ ಸರಕಾರಿ ಖಾಲಿ ನಿವೇಶನದಲ್ಲಿ ಶೇಖರಿಸಲು ಅಧಿಕಾರಿಗಳು ನಿರ್ಧರಿಸಿದ್ದರು.
ಮಳೆಗಾಲಕ್ಕೆ ಮೊದಲು ಜಿಲ್ಲೆಯನ್ನು ಸಂಪೂರ್ಣ ಶುಚಿತ್ವ ಜಿಲ್ಲೆಯಾಗಿ ಪರಿವರ್ತಿಸುವ ಅಂಗವಾಗಿ ಕಾಸರಗೋಡು ನಗರಸಭೆ, ಮಂಜೇಶ್ವರ, ಕಾಸರಗೋಡು, ಕಾರಡ್ಕ ಬ್ಲಾಕ್ ಪಂಚಾಯತಿ ಹಾಗು ಹದಿನೇಳು ಗ್ರಾಮ ಪಂಚಾಯತಿಗಳ ತ್ಯಾಜ್ಯವನ್ನು ಅನಂತಪುರದ ಕಿನ್ರಾ ಪಾರ್ಕ್ ಬಳಿ ಸರಕಾರದ ಅಧೀನದಲ್ಲಿರುವ ಗುಡ್ಡೆಯ ಮೇಲೆ ಉಪೇಕ್ಷಿಸಲು ನಿರ್ಧರಿಸಲಾಗಿತ್ತು. ಆರು ತಿಂಗಳೊಳಗೆ ಇದನ್ನು ತೆರವುಗೊಳಿಸುವುದಾಗಿ ಜಿಲ್ಲಾಧಿಕಾರಿ ಹಾಗು ಜಿಲ್ಲಾ ಅಪರ ದಂಡಾಧಿಕಾರಿ(ಎಡಿಎಂ) ಭರವಸೆ ನೀಡಿದ್ದರೂ, ಮುಂದಿನ ಮಳೆಗೆ ಪ್ಲಾಸ್ಟಿಕ್ ಸಹಿತ ಜೈವಿಕ ತ್ಯಾಜ್ಯಗಳು ಗುಡ್ಡೆ ಮೇಲಿಂದ ನೀರಿನ ಜೊತೆಗೆ ತೇಲಿ ಬಂದು ನಾಡಿನಾದ್ಯಂತ ಹರಡುತ್ತದೆ. ಗುಡ್ಡೆಯ ಕೆಳಭಾಗದ ಕುಡಿಯುವ ನೀರಿನ ಮೂಲಗಳಲ್ಲಿ ತ್ಯಾಜ್ಯ ಬೆರೆತುಕೊಳ್ಳಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಪುತ್ತಿಗೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಅರುಣ ಜೆ., ಉಪಾಧ್ಯಕ್ಷ ಪಿ.ವಿ.ಮೊಹಮ್ಮದ್, ಸ್ಥಾಯೀ ಸಮಿತಿ ಸದಸ್ಯ ಚನಿಯ, ಬಿಜೆಪಿ ನೇತಾರರಾದ ಸತ್ಯಶಂಕರ ಭಟ್, ಜಯಂತ ಪಾಟಾಳಿ, ಇ.ಕೆ.ಮೊಹಮ್ಮದ್, ಪಿ.ಇಬ್ರಾಹಿಂ, ಪಿ.ಸುಬ್ಬಣ್ಣ ಆಳ್ವ, ಕೃಷ್ಣ ಆಳ್ವ, ಅನಂತಪುರ ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ಎಂ.ವಿ.ಮಹಾಲಿಂಗೇಶ್ವರ ಭಟ್, ನಸೀರ್ ಸಹಿತ ವಿವಿಧ ರಾಜಕೀಯ ಪಕ್ಷಗಳ ನೇತಾರರು, ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ.
ಆಶ್ಚರ್ಯ ಮೂಡಿಸುವ ಜಿಲ್ಲಾಧಿಕಾರಿ ಸಹಿತ ಅಧಿಕಾರಿಗಳ ನಡೆ:
ಸಾರ್ವಜನಿಕ ಸೇವಕರಾಗಿರುವ ಸರಕಾರಿ ಅಧಿಕಾರಿಗಳೇ ಜನದ್ರೋಹಕ್ಕೆ ಮುಂದಾಗುತ್ತಿರುವುದು ಆಶ್ಚರ್ಯ ಮೂಡಿಸಿದೆ. ಸ್ವತಃ ಜಿಲ್ಲಾಧಿಕಾರಿಗಳ ನೇತೃತ್ವದ ಅಧಿಕಾರಿಗಳ ತಂಡ ಸಾರ್ವಜನಿಕರ ಗಮನಕ್ಕೆ ತಾರದೆ ಕೇವಲ ಸರಕಾರಿ ನಿವೇಶನ ಎಂಬ ಹೆಸರಲ್ಲಿ ಅತ್ಯಧಿಕ ಸಂಖ್ಯೆಯ ಯಾತ್ರಾರ್ಥಿಗಳು ಆಗಮಿಸುವ ಪವಿತ್ರ ಕ್ಷೇತ್ರ ಸಹಿತ ನೂರಾರು ಕುಟುಂಬಗಳು ವಾಸಿಸುವ ಪರಿಸರವೊಂದರಲ್ಲಿ ವಿದ್ರೋಹಕಾರಕ ವ್ಯವಸ್ಥೆ ನಿರ್ವಹಿಸಿದ್ದು ಗುರುವಾರ ಜಿಲ್ಲೆಯ ಜನತೆಯನ್ನು ಅಕ್ಷರಶಃ ಕಳವಳಕ್ಕೀಡುಮಾಡಿದೆ.
ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಎಂಡೋ ದುರಂತ ದಶಕಗಳ ಹಿಂದೆ ಘಟಿಸುವಲ್ಲಿ ಇಂತಹದೇ ಅಧಿಕಾರಿ ವರ್ಗದ ಬೇಜವಾಬ್ದಾರಿ ನಡೆ ಕಾರಣವಾಗಿತ್ತು ಎನ್ನುವುದು ಇಲ್ಲಿ ಗಮನಾರ್ಹವಾಗಿದೆ.