HEALTH TIPS

ಯಾವುದೇ ಶೀರ್ಷಿಕೆಯಿಲ್ಲ

 ಹಾಲಿ ಶೈಕ್ಷಣಿಕ ವರ್ಷದಿಂದಲೇ ಹೈಸ್ಕೂಲ್ ಹೈಯರ್ ಸೆಕೆಂಡರಿ ವಿಲೀನ-ಮತ್ತೆ ಕನ್ನಡ ಅವಗಣಿಸುವ ಯತ್ನ-ಎಚ್ ಎಂಗಳಿಗೆ ಭೀತಿ!
     ಕಾಸರಗೋಡು: ಖಾದರ್ ಕಮೀಷನ್ ವರದಿಯ ಆಧಾರದಲ್ಲಿ ಹೈಸ್ಕೂಲ್-ಹೈಯರ್ ಸೆಕೆಂಡರಿ ವಿಲೀನ್ ಈ ಶೆಕ್ಷಣಿಕ ವರ್ಷದಿಂದಲೇ ಆರಂಭಿಸುವ ಸಿದ್ಧತೆಯನ್ನು ಶಿಕ್ಷಣ ಇಲಾಖೆ ಮಾಡಿಕೊಂಡಿದೆ.
  ಇದರ ಮೊದಲ ಹಂತವಾಗಿ ಪ್ರಸ್ತುತ ಡಿಪಿಐ, ಹೈಯರ್ ಸೆಕೆಂಡರಿ ನಿರ್ದೇಶನಾಲಯ, ವಿಎಚ್‍ಎಸ್‍ಇಗಳನ್ನು ವಿಲೀನಗೊಳಿಸಿ ಸಾರ್ವಜನಿಕ ನಿರ್ದೇಶನಾಲಯದ ಅಡಿಯಲ್ಲಿ ತರುವ ಕ್ರಮ ಪೂರ್ತಿಯಾಗಿದೆ.
    ಪ್ರಸ್ತುತ ಇರುವ ವಿಎಚ್‍ಎಸ್‍ಇ ಹೈಯರ್ ಸೆಕೆಂಡರಿ ವಲಯ ಕಚೇರಿಗಳು ಇಲ್ಲದಾಗುವುದು, ಬದಲು ಹೈಯರ್ ಸೆಕೆಂಡರಿ ವಿಭಾಗ ಸಹಿತ ಶಾಲೆಗಳಲ್ಲಿರುವ ಡಿಡಿಇ ಕಚೇರಿಯ ಅಡಿಯಲ್ಲಿ ಬರುವುದು. ಇದಕ್ಕಾಗಿ ವಲಯ ಕಚೇರಿಗಳನ್ನು ಮುಚ್ಚಿ ಅವುಗಳನ್ನು ಡಿಡಿಇ ಕಚೇರಿಗೆ ಬದಲಾಯಿಸಲಾಗುವುದು. ಆದರೆ ಡಿಇಒ ಕಚೇರಿಗಳನ್ನು ತಾತ್ಕಾಲಿಕವಾಗಿ ಬದಲಾವಣೆ ಮಾಡುವುದಿಲ್ಲ. ಇಲ್ಲಿ ಹೈಸ್ಕೂಲ್ ಸಂಬಂಧಪಟ್ಟ ಕೆಲಸಗಳಲ್ಲದೇ ಹೈಯರ್ ಸೆಕೆಂಡರಿ ವಿಭಾಗಗಳನ್ನು ಸಹ ಆರಂಭಿಸುವುದು. ರಾಜ್ಯದಲ್ಲಿ ಶೇ. 7.25ರಷ್ಟು ಇಡಿಒ ಹುದ್ದೆಗಳನ್ನು ತಾತ್ಕಾಲಿಕವಾಗಿ ಪ್ರಾಂಶುಪಾಲರಿಗೆ ನೀಡಲಾಗುವುದು. ಇದರಲ್ಲಿ ಶೇ.10 ಹುದ್ದೆಯನ್ನು ತಾತ್ಕಾಲಿಕವಾಗಿ ಸೃಷ್ಟಿಸಲಾಗುತ್ತದೆ. ಇನ್ನು ಮುಂದೆ ಹೈಯರ್ ಸೆಕೆಂಡರಿಯ ಪ್ರಾಂಶುಪಾಲರು ಹೈಸ್ಕೂಲ್‍ಗಳ ಮುಖ್ಯಸ್ಥರೂ ಆಗಿರುತ್ತಾರೆ. ಮುಖ್ಯಶಿಕ್ಷ ಕರ ಹುದ್ದೆ ಇಲ್ಲದಾಗುವುದು. ಶಾಲಾ ಕಟ್ಟಡಗಳು, ಇತರ ಭೌತಿಕ ಸೌಲಭ್ಯಗಳು ಪ್ರಾಂಶುಪಾಲರ ಅನುಪಸ್ಥಿತಿಯಲ್ಲಿ ಅಕಾಡೆಮಿಕ್ ಮುಖ್ಯಸ್ಥರ ಹೊರತು ಪಡಿಸಿದ ಅಧಿಕಾರವು ಉಪಪ್ರಾಂಶುಪಾಲರಿಗೆ ಆಗಿರುತ್ತದೆ. ಅಲ್ಲದೇ ಹೈಸ್ಕೂಲ್ ಅಕಾಡೆಮಿ, ಮಧ್ಯಾಹ್ನದೂಟ ಸಹಿತ ಎಲ್ಲ ಅಧಿಕಾರಗಳು ಉಪ ಪ್ರಾಂಶುಪಾಲರಿಗೆ ಆಗಿರುತ್ತದೆ.
   ನೌಕರ ನೇಮಕಾತಿ ಪ್ರಾಂಶುಪಾಲರ ಅಧಿಕಾರವಾದರೆ, ಹಾಜರಿ, ರಜೆ ಮುಂತಾದವುಗಳ ನಿಯಂತ್ರಣ ಉಪ ಪ್ರಾಂಶುಪಾಲರ ವ್ಯಾಪ್ತಿಗೆ ಬರುತ್ತದೆ. ಇದರ ಬಗ್ಗೆ ಅಂತಿಮ ಚರ್ಚೆ ಇನ್ನೂ ನಡೆಯುತ್ತದೆ.
     ಕ್ಲರ್ಕ್, ಗುಮಾಸ್ತ ಮುಂತಾದವು ನೌಕರ ನಿಯಂತ್ರಣ ಪ್ರಾಂಶುಪಾಲರಿಗೆ ನೀಡಿದರೂ, ಅವರು ಈಗಲು ಮಾಡುತ್ತಿದ್ದ ಕೆಲಸ ಮಾತ್ರ ಮಾಡಿದರೆ ಸಾಕಾಗುವುದು. ಮುಂದಿನ ದಿನಗಳಲ್ಲಿ ಶಾಲೆಗಳ ಅಸೆಂಬ್ಲಿಗಳು ಜೊತೆಯಾಗಿ ನಡೆಯುವುದು. ಹೈಸ್ಕೂಲ್ ಮತ್ತು ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳನ್ನು ಜೊತೆಯಾಗಿ ಸಾಮರಸ್ಯದಿಂದ ನಡೆಸಿಕೊಂಡು ಬರುವುದೇ ಇದರ ಲಕ್ಷ್ಯವಾಗಿದೆ. ಉಳಿದಂತೆ ವಿದ್ಯಾರ್ಥಿ ಪೊಲೀಸ್ ಕೆಡೆಟ್, ಎನ್ನೆಸ್ಸೆಸ್, ಇತರ ಕ್ಲಬ್‍ಗಳಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ.
     ಇದಕ್ಕೆ ಅಂತಿಮ ರೂಪ ನೀಡುವುದಕ್ಕಾಗಿ ಅಧ್ಯಾಪಕರ ಸಂಘಟನೆಗಳ ಸಭೆಯು ಮುಖ್ಯಮಂತ್ರಿಗಳ ಅಧ್ಯಕ್ಷ ತೆಯಲ್ಲಿ ನಡೆಯಲಿದೆ. ಆ ಬಳಿಕವಷ್ಟೆ ಆದೇಶ ಹೊರಡಿಸುವುದು.
       ಕನ್ನಡ ಮಾಧ್ಯಮ ಅಧ್ಯಾಪಕರ ಭಡ್ತಿಗೆ ಅಡ್ಡಿ:
   ನೂತನವಾಗಿ ಹೈಸ್ಕೂಲ್ ಮತ್ತು ಹೈಯರ್ ಸೆಕೆಂಡರಿ ವಿಭಾಗಗಳನ್ನು ವಿಲೀನಗೊಳಿಸುವ ಸಂದರ್ಭದಲ್ಲಿ ಜಿಲ್ಲೆಯ ಭಾಷಾ ಅಲ್ಪಸಂಖ್ಯಾತರಾದ ಕನ್ನಡ ಬಲ್ಲ ಅಧ್ಯಾಪಕರ ಭಡ್ತಿಗೆ ಅಡ್ಡಿಯಾಗಲಿದೆ. ಪ್ರಸ್ತುತ ಕನ್ನಡ ಶಾಲೆಗಳಲ್ಲಿ ಮುಖ್ಯ ಶಿಕ್ಷಕರಾಗಿ ಕನ್ನಡ ಅಧ್ಯಾಪಕರಿಗೆ ಭಡ್ತಿ ನೀಡಬೇಕೆಂಬ ಆದೇಶವಿದೆ. ಅಲ್ಲದೇ ಸಹಾಯಕ ಶಿಕ್ಷಣಾಧಿಕಾರಿ, ಜಿಲ್ಲಾ ಶಿಕ್ಷಣಾಧಿಕಾರಿಗಳಾಗಿ ಕನ್ನಡಿಗರನ್ನೆ ನೇಮಿಸುವ ಭಡ್ತಿ ಆದೇಶಕ್ಕೆ ಪೆಟ್ಟು ಬೀಳಲಿದೆ. ಮುಂದೆ ಹೈಸ್ಕೂಲ್-ಹೈಯರ್ ಸೆಕೆಂಡರಿ ವಿಲೀನಗೊಳ್ಳುವ ಸಂದರ್ಭದಲ್ಲಿ ಕನ್ನಡ ಬಲ್ಲ ಅಧ್ಯಾಪಕರಿಗೆ ಲಭಿಸುತ್ತಿರುವ ಹುದ್ದೆಗಳು ಇಲ್ಲದಾಗಿ ಮುಂದೆ ಅದು ಸಾಮಾನ್ಯ ಆಯ್ಕೆ ನಡೆಯುವುದರಿಂದ ಕನ್ನಡಿಗರಿಗೆ ಕೈತಪ್ಪುವುದು. ಇದೀಗ ಕೇವಲ 10 ವರ್ಷದ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದವರಿಗೂ ಮುಖ್ಯ ಶಿಕ್ಷಕರಾಗಿ ಭಡ್ತಿ ಲಭಿಸುತ್ತಿತ್ತು. ಮುಂದಿನ ದಿನಗಳಲ್ಲಿ ಪ್ರಾಂಶುಪಾಲ ಹುದ್ದೆಗೆ ಯಾವುದೇ ಮೀಸಲಾತಿ ಇರುವುದಿಲ್ಲ. ಕನ್ನಡ ಮಾಧ್ಯಮ ಅಧ್ಯಾಪಕರ ವಿಶೇಷ ಭಡ್ತಿ ಅವಕಾಶಗಳು ಇಲ್ಲದಾಗುವುದು. ಇದೀಗ ಕಾಸರಗೋಡು ಜಿಲ್ಲೆಯ ಅನುದಾನಿತ ಹಾಗೂ ಸರಕಾರಿ ಶಾಲೆಗಳಲ್ಲಿನ ಅಧಿಕ ಪ್ರಾಂಶುಪಾಲರು ಮಲಯಾಳಿಗಳೇ ಆಗಿರುತ್ತಾರೆ. ಇಲ್ಲಿ ಮಾಧ್ಯಮಗಳ ಪ್ರಶ್ನೆಯೇ ಬರುವುದಿಲ್ಲ. ಕಾಮನ್‍ಪೂಲ್‍ನಿಂದ ಆಯ್ಕೆಯಾಗುವ ಸಂದರ್ಭದಲ್ಲಿ ಕನ್ನಡ ಮಾಧ್ಯಮ ಅಧ್ಯಾಪಕರ ವಿಶೇಷ ಭಡ್ತಿ ಇದರೊಂದಿಗೆ ಕೊನೆಗೊಳ್ಳಲಿದೆ. ಈಗಾಗಲೇ ಕನ್ನಡಿಗರೇ ಆಡಳಿತ ಹೊಂದಿರುವ ಅನುದಾನಿತ ಶಾಲೆಗಳ ಹೈಯರ್‍ಸೆಕೆಂಡರಿಯಲ್ಲಿ ಮಲೆಯಾಳ ಬಲ್ಲ ಅಧ್ಯಾಪಕರೇ ಹೆಚ್ಚಾಗಿ ನೇಮಕಗೊಂಡಿರುವುದರಿಂದ ಕನ್ನಡಿಗರ ಅಧ್ಯಾಪಕರಿಗೆ ಅಲ್ಲೂ ಭಡ್ತಿಗೆ ಅವಕಾಶವಿರುವುದಿಲ್ಲ. ಇದು ಕನ್ನಡ ಅಧ್ಯಾಪಕರ ಮೇಲೆ ಮತ್ರವಲ್ಲ, ಕನ್ನಡ ಶಾಲೆಗಳ, ಕನ್ನಡ ವಿದ್ಯಾರ್ಥಿಗಳ ಮೇಲೂ ಪರಿಣಾಮ ಬೀರುವುದು.
       ಈಗಾಗಲೇ ಹೈಸ್ಕೂಲ್-ಹೈಯರ್‍ಸೆಕೆಂಡರಿ ವಿಲೀನ ಪ್ರಕ್ರಿಯೆ ನಡೆಯುತ್ತಿರುವಾಗ ಕನ್ನಡ ಮಾಧ್ಯಮ ಅಧ್ಯಾಪಕರ ಬೇಡಿಕೆಗಳನ್ನು ಸರಕಾರದ ಮುಂದಿಡಬೇಕಾದ ಅನಿವಾರ್ಯತೆ ಇದೆ. ಇದಕ್ಕೆ ತುರ್ತು ಸ್ಪಂದಿಸಬೇಕು. ಹೈಯರ್ ಸೆಕೆಂಡರಿ ತನಕ ಕನ್ನಡ ಕಲಿತ ಅಧ್ಯಾಪಕರನ್ನೆ ನೇಮಿಸಬೇಕೆಂಬ ಬೇಡಿಕೆಯನ್ನು ಮುಂದಿಡಬೇಕು. ಭಾಷಾ ಅಲ್ಪಸಂಖ್ಯಾತ ಪ್ರದೇಶದ ಕನ್ನಡ ಶಾಲೆಗಳ ಪರಾಂಶುಪಾಲರು, ಉಪ ಪ್ರಾಂಶುಪಾಲರು, ಡಿಡಿಇ ಕನ್ನಡಿಗರಾಗಿರಬೇಕು ಎಂಬ ಬಗ್ಗೆಯೂ ಬೇಡಿಕೆಯನ್ನು ಮುಂದಿಡಬೇಕು. ಈ ಮೂಲಕ ಕನ್ನಡ ಯುವಜನತೆ, ಉದ್ಯೋಗಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಅಧ್ಯಾಪಕರಾಗುವರಿಗೆ, ಇದೀಗ ಅಧ್ಯಾಪಕರಾಗಿರುವರಿಗೆ ಪ್ರಯೋಜನವಾಗು ರೀತಿಯಲ್ಲಿ ಸಾಧ್ಯತೆಗಳನ್ನು ಬಳಸಿಕೊಳ್ಳಬೇಕು. ಇದಕ್ಕೆ ಕನ್ನಡ ಮಾಧ್ಯಮ ಅಧ್ಯಾಪಕ ಸಂಘಟನೆಗಳು, ಕನ್ನಡ ಹೋರಾಟ ಸಮಿತಿಗಳ ನೇತೃತ್ವದಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಬೇಕಾಗಿದೆ.
          ಏನಂತಾರೆ: 
     *ಹೈಸ್ಕೂಲ್ ಹಾಗೂ ಹೈಯರ್‍ಸೆಕೆಂಡರಿ ನಿರ್ದೇಶನಾಲಯಗಳ ವಿಲೀನದೊಂದಿಗೆ ಜಿಲ್ಲೆಯಲ್ಲಿ ಕನ್ನಡ ಮಾಧ್ಯಮ ಅಧ್ಯಾಪಕರಿಗೆ ಲಭಿಸುತ್ತಿದ್ದ ಮುಖ್ಯ ಶಿಕ್ಷಕರ ಭಡ್ತಿ ಹುದ್ದೆ, ಎಇಒ, ಡಿಇಒ ಭಡ್ತಿ ಹುದ್ದೆಗಳು ಇಲ್ಲದಾಗುವುದು.ಇದರಿಂದ ಜಿಲ್ಲೆಯ 49 ಕನ್ನಡ ಮಾಧ್ಯಮ ಸರಕಾರಿ ಹೈಸ್ಕೂಲುಗಳ ಮುಖ್ಯೋಪಾಧ್ಯಾಯರ ಸ್ಥಾನ ಇಲ್ಲವಾಗಿ ಕನ್ನಡ  ಪ್ರಾಂಶುಪಾಲರ ಹುದ್ದೆಗಳು ಕಾಮನ್‍ಪೂಲ್‍ನಿಂದ ನಡೆಯುವುದರಿಂದ ಇದು ಸಹ ಕನ್ನಡಿಗರಿಗೆ ಕೈ ತಪ್ಪುವುದು ಈ ನಿಟ್ಟಿನಲ್ಲಿ ಶೀಘ್ರ ಕಾರ್ಯಪ್ರವೃತರಾಗಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ನಿಯೋಗವೊಂದು ಮುಂದಿನ ಸೋಮವಾರ ತಿರುವನಂತಪುರಕ್ಕೆ ತೆರಳಿ ಸಂಬಂಧಪಟ್ಟವರೊಂದಿಗೆ ಸುಧೀರ್ಘ ಸಮಾಲೋಚನೆ ನಡೆಸಿ ಅಗತ್ಯ ನ್ಯಾಯಕ್ಕಾಗಿ ಮನವಿ ನೀಡಲಾಗುತ್ತದೆ. 
              -ಎಂ.ಮಹಾಲಿಂಗೇಶ್ವರ ಭಟ್, ನಿವೃತ್ತ ಮುಖ್ಯಶಿಕ್ಷಕರು, ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ನಿಕಟಪೂರ್ವ ರಾಜ್ಯ ಪ್ರಮುಖರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries