ಕುಂಬಳೆ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ಕುಂಬಳೆ ಘಟಕದ ಅಧ್ಯಕ್ಷರ ಆಯ್ಕೆಗಾಗಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ವಿಕ್ರಂ ಪೈ ಭಾರೀ ಬಹುಮತದೊಂದಿಗೆ ಎರಡನೇ ಅವಧಿಗೆ ಅಧ್ಯಕ್ಷರಾಗಿ ಗೆಲುವು ದಾಖಲಿಸಿದ್ದಾರೆ. ಇವರಿಗೆ ಪ್ರತಿಸ್ಪರ್ಧಿಯಾಗಿದ್ದ ಪಿ.ಕೆ.ಎಸ್.ಹಮೀದ್‍ರಿಗೆ ವಿಕ್ರಂ ಪೈಗೆ ಲಭಿಸಿದ ಮತಗಳ ಅರ್ಧದಷ್ಟು ಮತಗಳನ್ನು ಪಡೆಯಲಾಗಲಿಲ್ಲ. ದೀರ್ಘಕಾಲದಿಂದ ಅಧ್ಯಕ್ಷರಾಗಿದ್ದ ಹಮೀದ್ ಕಳೆದ ಚುನಾವಣೆ ವೇಳೆ ಕೊನೆ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.
ಚುನಾವಣೆಯಲ್ಲಿ ವಿಕ್ರಂ ಪೈಗೆ 169 ಮತಗಳು ಮತ್ತು ಪಿ.ಕೆ.ಎಸ್.ಹಮೀದ್ ಅವರಿಗೆ 71 ಮತಗಳು ಲಭಿಸಿದ್ದವು. ಹಮೀದ್ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ರಾಜ್ಯ ಘಟಕದ ಸದಸ್ಯರೂ, ವಲಯ ಅಧ್ಯಕ್ಷರೂ ಆಗಿದ್ದಾರೆ. ಕುಂಬಳೆ ಘಟಕದ ಕಾರ್ಯದರ್ಶಿಯಾಗಿ ಕೆ.ಪಿ.ಸತ್ತಾರ್ ಹಾಗೂ ಕೋಶಾಧಿಕಾರಿಯಾಗಿ ಅನ್ವರ್ ಅವರನ್ನು ಘಟಕದ ಅಧ್ಯಕ್ಷ ವಿಕ್ರಂ ಪೈ ನೇಮಕಗೊಳಿಸಿದರು. 31 ಸದಸ್ಯರುಳ್ಳ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು. ಇತರ ಪದಾಧಿಕಾರಿಗಳನ್ನು ಮುಂದಿನ ಸಭೆಯಲ್ಲಿ ಆಯ್ಕೆ ಮಾಡಲು ನಿರ್ಧರಿಸಲಾಯಿತು.