ಕುಂಬಳೆ: ಕುಂಬಳೆಯ ಜಿ.ಯಸ್.ಬಿ ಮಹಿಳಾ ಮಂಡಳಿ ಹಾಗು ಜಿ.ಯಸ್.ಬಿ ಯುವಕ್ ಸಂಘದ ಜಂಟಿ ಆಶ್ರಯದಲ್ಲಿ ಶುಕ್ರವಾರದಿಂದ ಹಮ್ಮಿಕೊಳ್ಳಲಾಗಿದ್ದ ಎರಡನೇ ವರ್ಷದ ತ್ರಿದಿನ ವಸಂತ ಶಿಬಿರದ ಸಮಾರೋಪ ಸಮಾರಂಭವು ಕುಂಬಳೆ ಶ್ರೀ ವೀರ ವಿಠ್ಠಲ ದೇವಸ್ಥಾನದ ಸುಧೀಂದ್ರ ತೀರ್ಥ ಕಲಾ ಮಂದಿರದಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿ.ಯಸ್.ಬಿ ಓಲ್ ಟೆಂಪಲ್ ಅಸೋಸಿಯೇಷನ್ ಅಧ್ಯಕ್ಷ ಕೆ.ಜಗನ್ನಾಥ ಕಾಮತ್ ಅವರು ಮಾತನಾಡಿ, ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಕಲಿಸಿದ ವಿಷಯಗಳನ್ನು ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮಹತ್ವವನ್ನು ಅರಿತಿರಬೇಕು. ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಗುರುತಿಸಿಕೊಳ್ಳುವಲ್ಲಿ ಆದರ್ಶ ಜೀವನ ಕ್ರಮಗಳನ್ನು ಮೈಗೂಡಿಸಿ ಪರಂಪರೆ, ಸಂಪ್ರದಾಯಗಳನ್ನು ಅನುಸರಿಸುವ ಅಗತ್ಯವನ್ನು ಅಥ್ರ್ಯಸಿಕೊಳ್ಳುವ ಅಗತ್ಯ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಳದ ಆಡಳಿತ ಮಂಡಳಿಯ ಕಾರ್ಯದರ್ಶಿ ಬಿ.ವಿಕ್ರಂ ಪೈ ವಹಿಸಿದ್ದರು. ಹೇಮಪ್ರಕಾಶ್ ಶೆಣೈ ಮುಲ್ಕಿ, ಜಿ.ಯಸ್.ಬಿ ಯುವಕ್ ಸಂಘದ ಅಧ್ಯಕ್ಷ ಕೆ.ಪ್ರಸಾದ ಜೋಶಿ, ಮಹಿಳಾ ಮಂಡಳಿ ಅಧ್ಯಕ್ಷೆ ಕೆ.ಶಾಂತ ಭಟ್, ಪುಂಡಲೀಕ ಭಟ್ ಉಪಸ್ಥಿತರಿದ್ದರು. ಯುವಕ್ ಸಂಘದ ಪ್ರಧಾನ್ ಕಾರ್ಯದರ್ಶಿ ಕೆ.ಸುಧಾಕರ ಕಾಮತ್ ಸ್ವಾಗತಿಸಿ, ಪಲ್ಲವಿ ಜೋಶಿ ವಂದಿಸಿದರು. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಕಲಿಕೋಪರಣ ಮತ್ತು ಸ್ಮರಣಿಕೆ ನೀಡಲಾಯಿತು.