ಕುಂಬಳೆ: ಕಾವ್ಯಕ್ಕೆ ಅದರದ್ದೇ ಆದ ಮಹತ್ವ ಸಮಾಜ ವ್ಯವಸ್ಥೆಯಲ್ಲಿದ್ದು, ಉತ್ತಮ ರಚನೆಗಳಿಗೆ ಪೂರ್ವ ತಯಾರಿ ಅಗತ್ಯವಾಗಿರಬೇಕು. ಕವಿತೆಗಳನ್ನು ಓದುವುದು ಕಣ್ಣಿನಿಂದಾಗಿರದೆ ಕಿವಿಗಳಿಂದಾಗಿರುತ್ತದೆ ಎಂದು ಹಿರಿಯ ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ ಅವರು ತಿಳಿಸಿದರು.
ಸಿರಿಗನ್ನಡ ವೇದಿಕೆ ಬೆಂಗಳೂರು, ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ ನಾರಾಯಣಮಂಗಲದ ಕುಳಮರ್ವ ಶ್ರೀನಿಧಿಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ವಸಂತ ಸಾಹಿತ್ಯೋತ್ಸವವದ ಅಂಗವಾಗಿ ನಡೆದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಕಾಲಾಘಟ್ಟದಲ್ಲಿ ಯಾವುದೇ ತಲೆಬರಹಗಳನ್ನು ಅಂಟಿಕೊಳ್ಳದ ಕವಿತೆಗಳ ಆಂತರಂಗಿಕ ಚಿಂತನೆಗಳ ವಿಸ್ತಾರತೆ ವಿಶಾಲವಾಗಿದೆ. ಕವಿತೆಗಳ ಇತಿ-ಮಿತಿಗಳನ್ನು ಅರಿತು ಬರಹಗಳು ಮೂಡಿಬರಬೇಕು ಎಂದು ತಿಳಿಸಿದ ಅವರು, ನಯ-ವಿನಯಗಳು ಕವಿಯ ಸಾಮಥ್ರ್ಯ ಎತ್ತರಕ್ಕೇರುವಲ್ಲಿ ನೆರವಾಗುತ್ತದೆ ಎಂದು ತಿಳಿಸಿದರು. ಬಾಲಿಶವಲ್ಲದ ಅಂತರಂಗದ ಧ್ವನಿಗಳಿಗೆ ದನಿಯಾಗುವ ಕವಿತೆಗಳು ಮೂಡಿಬಂದು ಮನಸ್ಸನ್ನು ಹಸನುಗೊಳಿಸುವ ಸಾರಸ್ವತ ಸುಂದರ ಪ್ರಪಂಚ ನಿರ್ಮಾಣವೇ ಸಾಹಿತ್ಯಗಳ ಮೂಲ ಆಶಯ ಎಂದು ಅವರು ಈ ಸಂದರ್ಭ ತಿಳಿಸಿದರು.
ಕವಿಗೋಷ್ಠಿಯನ್ನು ಉದ್ಘಾಟಿಸಿದಸಾಹಿತಿ, ವೈದ್ಯ ಡಾ.ಸುರೇಶ್ ನೆಗಲಗುಳಿ ಅವರು ಮಾತನಾಡಿ, ಇಂದು ಕನ್ನಡ ಸಾರಸ್ವತ ಲೋಕದಲ್ಲಿ ವಿಸ್ತಾರತೆಯನ್ನು ಪಡೆದಿರುವ ವಿವಿಧ ಸಾಹಿತ್ಯ ಪ್ರಕಾರಗಳ ವೈವಿಧ್ಯತೆಗಳನ್ನು ಕಾಣಬಹುದಾಗಿದೆ. ಆದರೆ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಗುಣಾತ್ಮಕ ಕೃತಿಗಳನ್ನು ರಚಿಸುವ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನ-ಅಧ್ಯಯನಗಳು ಯುವ ಸಮೂಹದಿಂದ ಆಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಸರ್ವಾಧ್ಯಕ್ಷತೆ ವಹಿಸಿದ್ದ ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷ ವಿ.ಬಿ.ಕುಳಮರ್ವ ಅವರು ಮಾತನಾಡಿ, ಎಳೆಯ ಮನಸ್ಸುಗಳಲ್ಲಿ ಭಾಷಾಭಿಮಾನವನ್ನು ಬಿತ್ತುವ ಕೆಲಸಗಳಾಗಬೇಕು. ಈ ನಿಟ್ಟಿನಲ್ಲಿ ಸಿರಿಗನ್ನಡ ವೇದಿಕೆ ಗಡಿನಾಡ ಘಟಕ ಪ್ರತಿವರ್ಷ 200ಕ್ಕಿಂತಲೂ ಮಿಕ್ಕಿದ ವಿದ್ಯಾರ್ಥಿಗಳನ್ನು ವಿವಿಧ ಆಯಾಮಗಳಲ್ಲಿ ತರಬೇತುಗೊಳಿಸಿ ಮಾರ್ಗದರ್ಶನೀಡಲಾಗುತ್ತಿದೆ ಎಂದರು. ವ್ಯಾಪಕ ಪ್ರತಿಭಾನ್ವಿತರಾಗಿರುವ ಬಾಲಕರ ಸಾಂಥ್ರ್ಯಕ್ಕನುಗುಣವಾಗಿ ಸ್ಪಷ್ಟ ಮಾರ್ಗದರ್ಶನದೊಂದಿಗೆ ಮುನ್ನಡೆಸುವಲ್ಲಿ ಮಕ್ಕಳ ಹೆತ್ತವರು ಆಸಕ್ತರಾಗಬೇಕು ಎಂದು ಕರೆನೀಡಿದರು.
ಬಳಿಕ ನಡೆದ ಕವಿಗೋಷ್ಠಿಯಲ್ಲಿ ಅನ್ನಪೂರ್ಣ ಬೆಜಪ್ಪೆ, ನಿರ್ಮಲಾ ಶೇಷಪ್ಪ ಖಂಡಿಗೆ, ಪ್ರಭಾವತಿ ಕೆದಿಲಾಯ ಪುಂಡೂರು, ಶಶಿಕಲಾ ಟೀಚರ್ ಕುಂಬಳೆ, ರಿತೇಶ್ ಕಿರಣ್ ಕಾಟುಕುಕ್ಕೆ, ಶ್ವೇತಾ ಕಜೆ, ಪಂಕಜ ಕೆ.ಮುಡಿಪು, ನರಸಿಂಹ ಭಟ್ ಏತಡ್ಕ, ಶಾಂತಾ ಪುತ್ತೂರು, ವಿರಾಜ ಅಡುರು, ಜಯಾನಂದ ಪೆರಾಜೆ, ಜ್ಯೋಸ್ಸ್ನಾ ಎಂ.ಕಡಂದೇಲು, ಗೋಪಾಲಕೃಷ್ಣ ಭಟ್ ಕಟ್ಟತ್ತಿಲ, ಸತ್ಯವತಿ ಭಟ್ ಕೊಳಚಪ್ಪು,ಕೆ.ಕೃಷ್ಣ ಭಟ್, ಶಂಕರನಾರಾಯಣ ಭಟ್ ಕಕ್ಕೆಪ್ಪಾಡಿ, ಶಶಾಂಕ್ ಕುಳಮರ್ವ ಸ್ವರಚಿತ ಕವನಗಳನ್ನು ವಾಚಿಸಿದರು. ಬಾಲಪ್ರತಿಭೆ ಆದ್ಯಂತ್ ಅಡೂರು ಅವರು ವಿ.ಬಿ.ಕುಳಮರ್ವ ರಚಿಸಿದ ರಾಮಕೀರ್ತಿ ಕಥಾ ಕಾವ್ಯ ವಾಚನ ನಡೆಸಿದರು. ವಸಂತಿ ಕುಳಮರ್ವ ಗೋಷ್ಠಿ ನಿರ್ವಹಿಸಿದರು. ವಿ.ಬಿ.ಕುಳಮರ್ವ ವಂದಿಸಿದರು.ನಿವೃತ್ತ ಉಪಜಿಲ್ಲಾದಿಕಾರಿ ಬಿ.ಬಾಲಕೃಷ್ಣ ಅಗ್ಗಿತ್ತಾಯ ಕವಿಗಳಿಗೆ ನೆನಪಿನ ಸ್ಮರಣಿಕೆಗಳನ್ನು ವಿತರಿಸಿದರು. ಲಲಿತಾಲಕ್ಷ್ಮೀ ಕುಳಮರ್ವ ಉಪಸ್ಥಿತರಿದ್ದರು.