ಕಾಸರಗೋಡು: ಜಿಲ್ಲೆಯ ಜಲಾಶಯಗಳನ್ನು ಮತ್ತು ಕಿರು ಜಲಾಶಯಗಳನ್ನು ಮಣ್ಣುಹಾಕಿ ಮುಚ್ಚಲಾಗುತ್ತಿರುವುದನ್ನು ಪತ್ತೆಮಾಡುವ ನಿಟ್ಟಿನಲ್ಲಿ ಆರನೇ ಕಿರು ನೀರಾವರಿ ಗಣತಿ ಮತ್ತು ವಾಟರ್ ಬಾಡಿ ಸೆನ್ಸಸ್(ಜಲಮೂಲಗಳ ಗಣತಿ) ಜಾರಿಗೊಳ್ಳಲಿದೆ.
ಕೇಂದ್ರ ನೀರಾವರಿ ಮಂತ್ರಾಲಯದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ನಡೆಸುವ ಗಣತಿಯನ್ನು ರಾಜ್ಯದಲ್ಲಿ ಕಿರು ನೀರಾವರಿ ಇಲಾಖೆ ನಡೆಸುತ್ತಿದೆ. 5 ವರ್ಷಗಳಿಗೊಮ್ಮೆ ನಡೆಸಲಾಗುವ ಈ ಗಣತಿ ಮೂಲಕ ಬಾವಿ,ಕೆರೆ,ಕಿರುಜಲಾಶಯಗಳು ಇತ್ಯಾದಿಗಳನ್ನು ಪತ್ತೆಮಾಡಿ ಗಣನೆ ಮಾಡಲಾಗುವುದು. ಜಿಲ್ಲೆಯಲ್ಲಿ ಸುಮಾರು 75 ಮಂದಿಯನ್ನು ಗಣತಿ ಕಾಯಕಕ್ಕಾಗಿ ನೇಮಿಸಲಾಗಿದೆ.
ಜಿ.ಪಿ.ಎಸ್.ತಾಂತ್ರಿಕತೆಯ ಮೊಬೈಲ್ ಆಪ್ ಬಳಸಿ ಜಲಾಶಯಗಳ ಚಿತ್ರ ಪಡೆದು, ಜಾಗವನ್ನೂ ದಾಖಲಿಸಲಾಗುವುದು. ಏಪ್ರಿಲ್ ತಿಂಗಳಲ್ಲಿ ಆರಂಭಗೊಳ್ಳಬೇಕಿದ್ದ ಈ ಗಣನತಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಗ ಆರಂಭಗೊಳ್ಳುತ್ತಿದೆ.
ಈ ನಿಟ್ಟಿನಲ್ಲಿ ಜಿಲ್ಲೆಯ ಗ್ರಾಮಪಂಚಾಯತಿಗಳ ಮತ್ತು ನಗರಸಭೆಗಳ ಮೇಲ್ವಿಚಾರಕರಿಗೆ, ಎನ್ಯುಮರೇಟರ್(ಗಣತಿ ನಿರ್ವಹಿಸುವವರು) ಗಳಿಗೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮ ಸಿವಿಲ್ ಸ್ಟೇಷನ್ ನ ಡಿ.ಪಿ.ಸಿ.ಸಭಾಂಗಣದಲ್ಲಿ ಸೋಮವಾರ ನಡೆಯಿತು. ಕಿರು ನೀರಾವರಿ ವಿಭಾಗ ಕಾರ್ಯಕಾರಿ ಅಭಿಯಂತರ ವರ್ಗೀಸ್ ಕೆ.ವರ್ಗೀಸ್ ಅಧ್ಯಕ್ಷತೆ ವಹಿಸಿದ್ದರು. ಸ್ಟಾಟಿಸ್ಟಿಕಲ್ ಅಧಿಕಾರಿ ಎಂ.ನಿಝಾಮುದ್ದೀನ್, ಸ್ಟಾಟಿಸ್ಟಿಕಲ್ ಸಹಾಯಕಿ ಅಂಜನಾ ಕೃಷ್ಣನ್ ತರಗತಿ ನಡೆಸಿದರು. ಇಂದು(ಮೇ 14) ಆಯ್ದ ಪ್ರದೇಶಗಳಿಗೆ ತೆರಳಿ ಪ್ರಾಯೋಗಿಕ ತರಬೇತಿ ನೀಡಲಾಗುವುದು ಎಂದು ತಿಳಿಸಲಾಗಿದೆ.