ಉಪ್ಪಳ: ಬಾಯಾರು ಸಮೀಪ ಹಿರಣ್ಯದಲ್ಲಿ ನಶಿಸಿದ ಸ್ಥಿತಿಯಲ್ಲಿ ಕಂಡುಬಂದಿದ್ದ ಅತಿ ಪುರಾತನ ಶ್ರೀವನದುರ್ಗಾಪರಮೇಶ್ವರಿ ದೇವಾಲಯದ ಜೀರ್ಣೋದ್ದಾರ ಪ್ರಕ್ರಿಯೆಗಳು ಸ್ಥಳೀಯ ಭಕ್ತರ ಅಹರ್ನಿಶಿ ಸೇವಾ ತತ್ಪರತೆಯಿಂದ ಪೂರ್ಣಗೊಂಡಿದ್ದು, ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮೇ.14 ರಿಂದ 17ರವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ಆಮಂತ್ರಣ ಪತ್ರಿಕೆಯನ್ನು ಮಂಗಳವಾರ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿದರು.
ಈ ಸಂದರ್ಭ ಮಾತನಾಡಿದ ಪೂಜ್ಯ ಖಾವಂದರು ವಿಶಾಲ ತುಳುನಾಡಿನಾದ್ಯಂತ ಹಿರಿಮೆಯನ್ನು ತಂದಿರುವ ವಿವಿಧ ಆಚರಣೆ, ನಂಬಿಕೆಗಳಿಂದ ನೆಮ್ಮದಿ ನೆಲೆಗೊಂಡಿದೆ. ಆರಾಧನಾ ಕೇಂದ್ರಗಳ ಪುನರುತ್ಥಾನವು ಒಟ್ಟು ಸಾಮಾಜಿಕ ಉತ್ಕರ್ಷಕ್ಕೆ ಕಾರಣವಾಗಿ ಸತ್ಪಥದಲ್ಲಿ ಜನರನ್ನು ಮುನ್ನಡೆಸುತ್ತದೆ. ಒಗ್ಗಟ್ಟು, ಅಚಲ ಶ್ರದ್ದೆಗಳಿಂದ ದೇವಾಲಯಗಳು ಪುನರುದ್ದಾರಗೊಳ್ಳುತ್ತಿರುವುದು ಶ್ರೇಯಸ್ಕರ ಎಂದು ತಿಳಿಸಿದರು.
ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ನಾರಾಯಣ ಭಟ್ ಮಾಣಿಪ್ಪಾಡಿ, ಕಾರ್ಯಾಧ್ಯಕ್ಷ ಮೋನಪ್ಪ ಶೆಟ್ಟಿ ಕಟ್ನಬೆಟ್ಟು, ಉಪಾಧ್ಯಕ್ಷರುಗಳಾದ ಈಶ್ವರ ಭಟ್ ಸಿ.ಎಚ್, ಪ್ರೊ.ಎ.ಶ್ರೀನಾಥ್, ಜೊತೆಕಾರ್ಯದರ್ಶಿ ರಘು ಪೂಜಾರಿ, ಕೊಸಾಧಿಕಾರಿ ತಿರುಮಲೇಶ್ವರ ಭಟ್ ಹಿರಣ್ಯ ಉಪಸ್ಥಿತರಿದ್ದರು.