ಕಾಸರಗೋಡು: ಪೆರಿಯ ಕಲ್ಯೋಟ್ ನಲ್ಲಿ ಜೋಡಿಕೊಲೆ ನಡೆದಿರುವ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಶಾಂತಿಯುತ ವಾತಾವರಣ ಪುನಃ ನಿರ್ಮಾಣ ನಡೆಸಲು ಸರ್ವಪಕ್ಷ ಶಾಂತಿ ಸಭೆ ಬೆಂಬಲ ಸೂಚಿಸಿದೆ.
ಸೋಮವಾರ ಜಿಲ್ಲಾಧಿಕಾರಿ ಅವರ ಛೇಂಬರ್ ನಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಅಧ್ಯಕ್ಷತೆ ವಹಿಸಿದ್ದರು. ಈ ಪ್ರಕರಣದಲ್ಲಿ ಸರ್ವಪಕ್ಷಗಳು ಏಕಕಂಠದಿಂದ ಖಂಡನೆ ವ್ಯಕ್ತಡಿಸಿದುವು. ಮುಂದೆ ಯಾವ ರೀತಿಯ ಅಕ್ರಮ ಘಟನೆಗಳೂ ನಡೆಯದಂತೆ, ಶಾಂತಿಭಂಗವಾಗದಂತೆ ಒಗ್ಗಟ್ಟಿನ ತೀರ್ಮಾನ ಕೈಗೊಳ್ಳಲಾಯಿತು.
ಜೋಡಿಕೊಲೆ ಹಿನ್ನೆಲೆಯಲ್ಲಿ ಫೆ.26ರಂದು ನಡೆದಿದ್ದ ಸರ್ವಪಕ್ಷ ಶಾಂತಿ ಸಭೆ ಮತ್ತು ಬಳಿಕ ನಡೆದಿದ್ದ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ, ಉಪ ಜಿಲ್ಲಾಧಿಕಾರಿ, ಡಿ.ವೈ.ಎಸ್.ಪಿ. ಸಹಿತ ಹಿರಿಯ ಅಧಿಕಾರಿಗಳ ಸಭೆಗಳ ನಿರ್ಧಾರದಂತೆ ಈ ಸಭೆ ನಡೆಸಲಾಗಿತ್ತು. ಜಿಲ್ಲಾಡಳಿತೆಯ ನೇತೃತ್ವದಲ್ಲಿ ಕಲ್ಯೋಟ್ ಪ್ರದೇಶ ಸೇರಿರುವ ಪುಲ್ಲೂರು-ಪೆರಿಯ ಪಂಚಾಯತ್ ಪ್ರದೇಶದಲ್ಲಿ ರಾಜಕೀಯ ಪಕ್ಷಗಳ ನೇತಾರರನ್ನು ಮಾತ್ರ ಸೇರಿಸಿ ಪ್ರತ್ಯೇಕ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಪರಸ್ಪರ ವಿಶ್ವಾಸ ಹೆಚ್ಚಿಕೊಳ್ಳಲು, ಇದಕ್ಕೆ ಪೂರಕವಾಗಿ ಜಿಲ್ಲಾಧಿಕಾರಿ ಮಂಡಿಸಿರುವ ಕೆಲವು ಸಲಹೆಗಳನ್ನು ಪಕ್ಷಗಳು ತಮ್ಮ ಮಟ್ಟದಲ್ಲಿ ಚರ್ಚಿಸಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಇದು ಪೂರಕ ಎಂದು ತಿಳಿಸಲಾಗಿದೆ.
ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಲ್ಲಿ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನೇರವಾಗಿ ಮಾಹಿತಿ ನೀಡುವಂತೆ ರಾಜಕೀಯ ಪಕ್ಷಗಳ ಸ್ಥಳೀಯ ಮಟ್ಟದ ತಲಾ ಮೂವರು ನೇತಾರರನ್ನು ಸೇರಿಸಿ ಆರು ಮಂದಿಯ ಸಮಿತಿಯೊಂದನ್ನು ರಚಿಸಲಾಗುವುದು. ಕಲ್ಯೋಟ್ ನಲ್ಲಿ ಉಪಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ಪೊಲೀಸ್ ಏಡ್ ಪೋಸ್ಟ್ ಒಂದನ್ನು ಸ್ಥಾಪಿಸಲಾಗುವುದು. ಈ ಪ್ರದೇಶದಲ್ಲಿ ಶಾಂತಿಭಂಗ ಉಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಸಹಿತ ವಿವಿಧ ವಿಚಾರಗಳ ಬಗ್ಗೆ ನಿಗಾ ಇರಿಸುವ ನಿಟ್ಟಿನಲಿ ಪೊಲೀಸರಿಗೆ ಆದೇಶ ನೀಡಲಾಗಿದೆ. ಕ್ರಿಮಿನಲ್ ಪ್ರಕರಣಗಳಲ್ಲಿ ಶಾಮೀಲಾಗಿರುವವರನ್ನು ಬೆಂಬಲಿಸುವ ಕ್ರಮವನ್ನು ರಾಜಕೀಯ ಪಕ್ಷಗಳು ಕೈಬಿಡುವಂತೆ ಜಿಲ್ಲಾಧಿಕಾರಿ ಆದೇಶಿಸಿದರು.
ಉಪಜಿಲ್ಲಾಧಿಕಾರಿ ಅರುಣದ ಕೆ. ವಿಜಯನ್, ಸಹಾಯಕ ಜಿಲ್ಲಾಧಿಕಾರಿ ಕೆ.ಜಯಲಕ್ಷ್ಮಿ, ಸಹಾಯಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿ.ಪ್ರಷೋಬ್, ಸಂಸದ ಪಿ.ಕರುಣಾಕರನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎಂ.ವಿ.ಬಾಲಕೃಷ್ಣನ್, ಕೆ.ಪಿ.ಸತೀಶ್ಚಂದ್ರನ್, ಹಕೀಂ ಕುನ್ನಿಲ್, ಎ.ಗೋವಿಂದನ್ ನಾಯರ್, ಕೆ.ಪಿ.ಕುಂಞÂಕಣ್ಣನ್ ಮೊದಲಾದವರು ಉಪಸ್ಥಿತರಿದ್ದರು.