ಕಾಸರಗೋಡು: ಜಿಲ್ಲೆಯ ಬಲುದೊಡ್ಡ ಪಿಡುಗುಗಳಲ್ಲಿ ಒಂದಾಗಿರುವ ತ್ಯಾಜ್ಯಯುಕ್ತ ಪರಿಸರಕ್ಕೆ ಕೊನೆಯಾಗಿದೆ. ರಾಜ್ಯ ಸರಕಾರದ ಶುಚೀಕರಣ ಯಜ್ಞವನ್ನು ಗಂಭೀರವಾಗಿ ಪರಿಶೀಲಿಸಿ ನಾಡು-ನಗರಗಳ ಜನ ಕೈಜೋಡಿಸಿರುವ ಪರಿಣಾಮ ಜಿಲ್ಲೆಯ ತ್ಯಾಜ್ಯದಿಂದ ವಿಮುಕ್ತಿ ಪಡೆದಿದೆ.
ಅನೇಕ ವರ್ಷಗಳಿಂದ ನಗರ-ಗ್ರಾಮೀಣ ಪ್ರದೇಶಗಳಲ್ಲಿ ತ್ಯಾಜ್ಯ ರಾಶಿ ಬಿದ್ದಿರುವುದು ಸಾರ್ವಜನಿಕ ಬದುಕಿಗೆ ಬಲುದೊಡ್ಡ ತಲೆನೋವಾಗಿತ್ತು. ಈ ಬಗ್ಗೆ ಒಟ್ಟಂದದ ಗಂಭೀರ ಚಿಂತನೆಗಳು ನಡೆದ ಪರಿಣಾಮ ಶನಿವಾರ,ಭಾನುವಾರ ನಡೆದ ಶುಚೀಕರಣ ಯಜ್ಞ ಎಂಬ ಹೆಸರಿನ ಶುಚಿತ್ವ ಚಟುವಟಿಕೆಗಳು ನಾಡನ್ನು ಶುದ್ಧ-ಸುಂದರಗೊಳಿಸುವಲ್ಲಿ ಬಲುದೊಡ್ಡ ಕೊಡುಗೆ ನೀಡಿವೆ. ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಸಿಬ್ಬಂದಿ, ಸಂಘಟನೆಗಳ ಪ್ರತಿನಿಧಿಗಳು ನಡೆಸಿದ ಈ ಚಟುವಟಿಕೆಗೆ ಪುಟ್ಟ ಮಕ್ಕಳಿಂದ ತೊಡಗಿ ವಯೋವೃದ್ಧರ ವರೆಗಿನ ಮಂದಿ ಹೆಗಲು ನೀಡಿದುದು ಹೆಚ್ಚುವರಿಪರಿಣಾಮಕ್ಕೆ ಕಾರಣವಾಗಿದೆ.
ಸುಡುವ ಬಿಸಿಲಿನಲ್ಲೂ ಏಕಮನಸ್ಸಿನಲ್ಲಿ ಶುಚೀಕರಣ ನಡೆಸಿದರು. ಮಳೆಗಾಲಕ್ಕೆ ಮುನ್ನ ನಡೆಸುವ ಶುಚೀಕರಣಮತ್ತು ಅಂಟುರೋಗ ಪ್ರತಿರೋಧ ಕ್ರಮಗಳ ಅಂಗವಾಗಿ ರಾಜ್ಯಾದ್ಯಂತ ಎರಡುದಿನಗಳ ಕಾಲ ನಡೆದ ಶುಚೀಕರಣ ಕಾರ್ಯಕ್ರಮ ಅಂಗವಾಗಿ ಜಿಲ್ಲೆಯಲ್ಲೂ ಈ ಚಟುವಟಿಕೆ ನಡೆದಿದೆ. ರಾಜ್ಯ ಸರಕಾರ ಸಿದ್ಧಪಡಿಸಿದ ರೂಪುರೇಷೆಯ ಅನುಗುಣವಾಗಿ ಗ್ರಾಮಪಂಚಾಯತ್ ಗಳು, ನಗರಸಭೆಗಳು ತೀವ್ರ ಶುಚಿತ್ವ ಯಜ್ಞ ಅನುಷ್ಠಾನಗೊಳಿಸಿವೆ. ಕೆರೆ, ತೋಡು ಇತ್ಯಾದಿಗಳನ್ನು ಶುಚಿಗೊಳಿಸುವುದು ಇತ್ಯಾದಿ ಈ ಕಾರ್ಯಕ್ರಮ ಅಂಗವಾಗಿ ನಡೆದಿವೆ. ಆಯಾ ಪಂಚಾಯತ್ ಗಳಲ್ಲಿ ಅಧ್ಯಕ್ಷರ ಮತ್ತು ವಾರ್ಡ್ ಮಟ್ಟದಲ್ಲಿ ವಾರ್ಡ್ ಸದಸ್ಯರ ಉಸ್ತುವಾರಿಯಲ್ಲಿ ಶುಚೀಕರಣ ನಡೆಸಲಾಗಿದೆ. ಜೊತೆಗೆ ಮನೆಮನೆಗೆ ತೆರಳಿ ಜಾಗೃತಿ ಮೂಡಿಸುವ ಕಾಯಕವೂ ನಡೆದಿವೆ.