ಮುಳ್ಳೇರಿಯ: ದೇವಾಲಯವು ಆತ್ಮದ ಸಂಕೇತವಾಗಿದ್ದು, ಶರೀರ ಹಾಗೂ ದೇವಾಲಯವು ಒಂದೇ ಆಗಿದೆ. ಶರೀರವೆಂಬ ಆಲಯದ ಹೃದಯಕಲಶದಲ್ಲಿ ಶ್ರೀ ದೇವರ ಪೀಠವಿದೆ. ಆ ಹೃದಯ ಪೀಠದಲ್ಲಿ ಧೃಢವಾಗಿ ನೆಲೆನಿಂತ ಭಗವಂತನನ್ನು ಆರಾಧಿಸುವ ಮೂಲಕ ಸಾರ್ಥಕತೆಯನ್ನು ಪಡೆದುಕೊಳ್ಳಬೇಕು ಎಂದು ಉಡುಪಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಗಳು ಆಶೀರ್ವಚನವನ್ನು ನೀಡಿದರು.
ಅವರು ಶುಕ್ರವಾರ ಸಂಜೆ ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದ ದ್ರವ್ಯಕಲಶ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅನುಗ್ರಹ ಆಶೀರ್ವಚಗೈದು ಮಾತನಾಡಿದರು.
ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಸಮನ್ವಯದ ಸಂಕೇತ. ಆರು ಮುಖದ ಷಣ್ಮುಖನು ಹಿಂದು, ಶೈವ, ವೈಷ್ಣವ, ಸಿಖ್, ಜೈನ, ಬೌದ್ಧ ಧರ್ಮದ ಪ್ರತೀಕವಾಗಿದ್ದಾನೆ. ಆರೂ ಧರ್ಮಗಳಿಂದ ಪೂಜಿಸಲ್ಪಡುವ ಆತ ಏಕತೆಯ ಸಂದೇಶವನ್ನು ನೀಡಿದ್ದಾನೆ. ಸುಬ್ರಹ್ಮಣ್ಯನ ಆರಾಧನೆಯಿಂದ ಮನುಕುಲಕ್ಕೆ ಕಲ್ಯಾಣವಾಗಲಿ, ಇಲ್ಲಿನ ಮುಂದಿನ ಕಾರ್ಯಗಳುಸಾಂಗವಾಗಿ ನೆರವೇರಲಿ ಎಂದು ತಿಳಿಸಿದರು.
ವೇದಘೋಷ ಮಂತ್ರದೊಂದಿಗೆ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತವನ್ನು ನೀಡಲಾಯಿತು.ಶ್ರೀಕ್ಷೇತ್ರದ ಪಾರಂಪರ್ಯ ಟ್ರಸ್ಟಿ ಸುಬ್ರಾಯ ಬಳ್ಳುಳ್ಳಾಯ ಉಪಸ್ಥಿತರಿದ್ದರು. ಸೀತಾರಾಮ ಬಳ್ಳುಳ್ಳಾಯ ಕಾರ್ಯಕ್ರಮ ಸಂಯೋಜನೆ ಮಾಡಿದರು.
ಬ್ರಹ್ಮಶ್ರೀ ರಾಘವೇಂದ್ರ ಉಡುಪುಮೂಲೆ ಕಾರ್ಯಕ್ರಮ ನಿರೂಪಿಸಿದರು. ದ್ರವ್ಯ ಕಲಶ ಸಮಿತಿ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಆಶೀರ್ವಚನದ ಬಳಿಕ ಶ್ರೀಗಳು ಭಕ್ತರಿಗೆ ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು.