ಬದಿಯಡ್ಕ: ಕರ್ನಾಟಕ ಪಿಯುಸಿ ವಾಣಿಜ್ಯ ವಿಭಾಗದ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದ ಬದಿಯಡ್ಕ ಪೆರಡಾಲ ಸಮೀಪ ಕಡಪ್ಪು ಸುಬ್ರಹ್ಮಣ್ಯ ಭಟ್ ಅವರ ಪುತ್ರ ಶ್ರೀಕೃಷ್ಣ ಶರ್ಮನನ್ನು ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಆಶೀರ್ವದಿಸಿದರು.
ಇತ್ತೀಚೆಗೆ ಬಾನ್ಕುಳಿಯ ಗೋಸ್ವರ್ಗದಲ್ಲಿ ನಡೆದ ಹವ್ಯಕ ಮಹಾಮಂಡಲ ಮಕ್ಕಳ ಮಹಾಸಮ್ಮೇಳನದಲ್ಲಿ ನಡೆದ ಸಮಾರಂಭದಲ್ಲಿ ಶ್ರೀಗಳವರು ಪ್ರಶಸ್ತಿ ಪತ್ರದೊಂದಿಗೆ ವಿಶೇಷ ಮಂತ್ರಾಕ್ಷತೆಯನ್ನು ಹರಸಿದರು. ಮುಳ್ಳೇರಿಯ ಮಂಡಲದ ಪೆರಡಾಲ ವಲಯದ ಈತ ಅಳಿಕೆ ಸತ್ಯಸಾಯಿ ವಿದ್ಯಾಕೇಂದ್ರದಲ್ಲಿ ಪಿಯುಸಿ ಶಿಕ್ಷಣವನ್ನು ಪಡೆದು ರಾಜ್ಯಕ್ಕೆ ಅಗ್ರಜನೆನಿಸಿದ್ದನು. ಒಂದನೇ ತರಗತಿಯಿಂದ ಹತ್ತನೇ ತರಗತಿಯ ತನಕ ತನ್ನ ಪ್ರಾಥಮಿಕ ವಿದ್ಯಾಬ್ಯಾಸವನ್ನು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಪೂರೈಸಿದ್ದಾನೆ.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗೋಕರ್ಣಮಂಡಲಾಧ್ಯಕ್ಷೆ ಈಶ್ವರಿ ಬೇರ್ಕಡವು, ಮುಳ್ಳೇರಿಯ ಮಂಡಲ ವಿದ್ಯಾರ್ಥಿ ವಾಹಿನಿ ಸಂಚಾಲಕ ಕೇಶವ ಪ್ರಸಾದ ಎಡೆಕ್ಕಾನ, ಪೆರಡಾಲ ವಲಯ ಅಧ್ಯಕ್ಷ ಹರಿಪ್ರಸಾದ ಪೆರ್ಮುಖ, ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಕಡಪ್ಪು ಸುಬ್ರಹ್ಮಣ್ಯ ಭಟ್ ಜೊತೆಗಿದ್ದರು.