ಬೆಂಗಳೂರು: ಲಿಂಗ ತಾರತಮ್ಯದ ಬಗ್ಗೆ ನಾವೆಲ್ಲಾ ಮಾತನಾಡುತ್ತೇವೆ. ಆದರೆ ವಾಸ್ತವವಾಗಿ ಜೀವನದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳನ್ನು ಸಮಾನವಾಗಿ ಕಾಣುವವರು ಕಡಿಮೆ ಮಂದಿ. ಬೆಂಗಳೂರಿನ ವಕೀಲೆಯೊಬ್ಬರು ಸಮಾಜದ ಎಲ್ಲಾ ಸಂಪ್ರದಾಯಗಳನ್ನು ಬದಿಗೊತ್ತಿ ತಮ್ಮ ಅವಳಿ ಮಕ್ಕಳಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರಿಗೂ ಬ್ರಹ್ಮೋಪದೇಶ ಮಾಡಿಸಿದ್ದಾರೆ.
ಬ್ರಾಹ್ಮಣರಲ್ಲಿ ಗಂಡು ಮಕ್ಕಳಿಗೆ ಉಪನಯನ ಸಂಸ್ಕಾರ ಮಾಡುವ ಪದ್ಧತಿಯಿದೆ. ಅಡ್ವೊಕೇಟ್ ಕ್ಷಮ ನರಗುಂದ ಮತ್ತು ಅವರ ಪತಿ ಉದ್ಯಮಿ ವೈವಸ್ವತ ತಮ್ಮ ಅವಳಿ ಮಕ್ಕಳಾದ ಸಂವಿತಾ ಬಾನಾವತಿ ಮತ್ತು ಅಸ್ಮಿತಾ ಬಾಲಾವತಿಯವರಿಗೆ ಒಟ್ಟಿಗೆ ಬ್ರಹ್ಮೋಪದೇಶ ಮಾಡಿದ್ದಾರೆ. ಈ ಮಕ್ಕಳಿಗೆ ಇನ್ನೊಂದೆರಡು ವಾರ ಕಳೆದರೆ 8 ವರ್ಷ ತುಂಬುತ್ತದೆ.
ಹೆಣ್ಣು ಮಕ್ಕಳಿಗೆ ಸಹ ಉಪನಯನ ಮಾಡುವುದು ಹಿಂದೂ ಧರ್ಮದ ಶಾಸ್ತ್ರದಲ್ಲಿದೆ. ಆ ಬಗ್ಗೆ ನಾನು ಓದಿದ್ದೇನೆ. ನಾವು ವೇದ, ಶಾಸ್ತ್ರಗಳ ತಜ್ಞರು, ಪಂಡಿತರ ಸಲಹೆ ಪಡೆದು ನಮ್ಮ ಮಗಳಿಗೆ ಸಹ ಜನಿವಾರ ಹಾಕಲು ನಿರ್ಧರಿಸಿದೆವು. ಈ ಸಂಪ್ರದಾಯ ಪುರಾಣಗಳಲ್ಲಿತ್ತು. ಅದರ ಪ್ರಕಾರ ನಾವು ಈ ಆಚರಣೆ ಮಾಡಿದೆವು ಎನ್ನುತ್ತಾರೆ ಅಡ್ವೊಕೇಟ್ ಕ್ಷಮಾ.
ಈ ಸಂಪ್ರದಾಯ ಮಾಡಿದಾಗ ಸಹಜವಾಗಿ ಸಂಬಂಧಿಕರು ಮತ್ತು ಸ್ನೇಹಿತರಿಂದ ದಂಪತಿಗೆ ಪ್ರಶ್ನೆಗಳು ಎದುರಾಗಿದ್ದವಂತೆ. ಯಾಕಿದು, ಹೇಗೆ ಮಗಳಿಗೆ ಉಪನಯನ ಮಾಡುತ್ತೀರಿ ಎಂದು ಕೇಳಿದ್ದರಂತೆ. ಹೇಗೆ ಕಾರ್ಯಕ್ರಮ ಮಾಡುತ್ತಾರೆ ಎಂದು ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೆ ಸಹ ಕುತೂಹಲವಿತ್ತು.
ಹಲವು ವರ್ಷಗಳ ಹಿಂದೆ ಹೆಣ್ಣು-ಗಂಡು ಇಬ್ಬರಿಗೂ ಜನಿವಾರ ಹಾಕುತ್ತಿದ್ದರು. ಅದು ನಮ್ಮ ವೇದ ಮತ್ತು ಉಪನಿಷತ್ತುಗಳಲ್ಲಿ ಕೂಡ ಇದೆ. ಆದರೆ ವರ್ಷಗಳು ಉರುಳುತ್ತಾ ಹೋದಂತೆ ಈ ಪದ್ಧತಿ ಹಲವು ಕಾರಣಗಳಿಂದ ನಿಂತುಹೋಯಿತು. ತಂದೆ-ತಾಯಿಯ ಅಂತ್ಯಕ್ರಿಯೆ ಮಾಡಲು ಹೆಣ್ಣು ಮಕ್ಕಳಿಗೆ ಅಧಿಕಾರವಿಲ್ಲ ಎಂದು ನಿಷೇಧ ಹೇರಲಾಯಿತು. ಆದರೆ ದೇವರ ಮುಂದೆ ಹೆಣ್ಣು-ಗಂಡು ಎಲ್ಲಾ ಒಂದೇ ಎಂದು ಜನರು ಯಾಕೆ ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ಕೇಳುತ್ತಾರೆ ಕ್ಷಮಾ.