HEALTH TIPS

ಕನ್ನಡ ಪತ್ರಿಕೋದ್ಯಮ-ಇಣುಕು ನೋಟ-01

     
          ಕರ್ನಾಟಕದ ಪತ್ರಿಕೋದ್ಯಮಕ್ಕೆ 176 ವರ್ಷಗಳ ದೀರ್ಘ ಇತಿಹಾಸವಿದೆ. ಈ ಇತಿಹಾಸ ವಾರ್ತಾಪತ್ರಿಕೆ ಮತ್ತು ನಿಯತ ಕಾಲಿಕೆಗಳ ಬರೆವಣಿಗೆ, ಸಂಪಾದನೆ ಮತ್ತು ಪ್ರಕಟಣೆ ಅಲ್ಲದೆ, ಸುದ್ದಿ ಸಂಗ್ರಹಣ, ಪ್ರಸಾರಣ, ಪತ್ರಿಕೆಗಳ ನಿರ್ವಹಣ, ಜಾಹೀರಾತು ಮುಂತಾದ ಚಟುವಟಿಕೆಗಳನ್ನೆಲ್ಲ ಒಳಗೊಂಡಿದೆ. ಪ್ರಥಮದಲ್ಲಿ ಧರ್ಮಪ್ರಚಾರ, ಅನಂತರ ಕನ್ನಡ ನಾಡು ಮತ್ತು ನುಡಿಯ ಏಳ್ಗೆ-ಈ ಉದ್ದೇಶಗಳನ್ನಿಟ್ಟುಕೊಂಡು ಪತ್ರಿಕೆಗಳು ಪ್ರಾರಂಭವಾದುವು. ಬಹುತೇಕ ಪತ್ರಿಕೆಗಳು ಕನ್ನಡ ನವೋದಯದ ಕಾಲದಲ್ಲಿ ಊರ್ಜಿತಗೊಂಡು, ರಾಷ್ಟ್ರಬಿಡುಗಡೆಯ ಮತ್ತು ಜವಾಬ್ದಾರಿ ಸರ್ಕಾರದ ಸ್ಥಾಪನೆಯ ಕಾಲದಲ್ಲಿ ಜನರಲ್ಲಿ ರಾಷ್ಟ್ರಪ್ರ ಜ್ಞೆ ಯನ್ನು ಜಾಗೃತಗೊಳಿಸಲು ಚಲದಿಂದ ನಡೆದು ಹೋರಾಟದ ಬದುಕನ್ನು ನಡೆಸಿದುವು. ಎರಡನೆಯ ಮಹಾಯುದ್ಧಾನಂತರ ಕಾಲದಲ್ಲಿ ಕರ್ನಾಟಕದ ಪತ್ರಿಕೋದ್ಯಮ ಬೃಹತ್ತಾಗಿ ಬೆಳೆದಿದೆ. ಕರ್ನಾಟಕದ ಪತ್ರಿಕೆಗಳು ಭಾರತದ ಇತರ ಭಾಷೆಗಳ ಪತ್ರಿಕೆಗಳಂತೆಯೇ ಇಲ್ಲಿಯ ಜನಜೀವನದ ವಿವಿಧ ಮುಖಗಳ ಪ್ರತಿಬಿಂಬವಾಗಿವೆ. ಈಗ ನಮಗಿರುವ ಆಧಾರಗಳ ಪ್ರಕಾರ ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ. ಇದು ಪ್ರಕಟವಾದುದು 1843 ಜುಲೈ 1ರಂದು. ಮಂಗಳೂರಿನಲ್ಲಿ ಜನಸೇವೆಯಲ್ಲಿ ತೊಡಗಿದ್ದ ಬಾಸೆಲ್ ಮಿಶನ್ನಿನ ಪಾದ್ರಿ ಹರ್ಮನ್ ಮೋಗ್ಲಿಂಗ್ ಈ ಪತ್ರಿಕೆಯ ಸಂಪಾದಕ ಹಾಗೂ ಕನ್ನಡ ಪತ್ರಿಕೋದ್ಯಮದ ಆದ್ಯ ಪ್ರವರ್ತಕ. ಈತ ಭಾರತಕ್ಕೆ ಬಂದುದು 1836ರಲ್ಲಿ ಮಂಗಳೂರಿಗೆ ಬಂದ ಬಳಿಕ ಮಂಗಳೂರು ಸಮಾಚಾರ 1844ರ ಹೊತ್ತಿಗೆ ಬಳ್ಳಾರಿಗೆ ವರ್ಗಾವಣೆಗೊಂಡಿತು. ಅಲ್ಲಿ ಕನ್ನಡ ಸಮಾಚಾರ (ನೋಡಿ) ಎಂದು ಹೆಸರು ಬದಲಿಸಿಕೊಂಡಿತು. ಎರಡು ವರ್ಷಗಳ ಬಳಿಕ ವಾಪಸ್ಸು ಮಂಗಳೂರಿಗೇ ಬಂದು ಕೆಲಕಾಲ ಮುಂದುವರಿಯಿತು.
      ಮಂಗಳೂರ ಸಮಾಚಾರ ಕಲ್ಲಚ್ಚಿನಲ್ಲಿ ಮುದ್ರಣಗೊಳ್ಳುತ್ತಿತ್ತು. ನಾಲ್ಕು ಪುಟಗಳ ಈ ಪತ್ರಿಕೆಯ ಬೆಲೆ ಕೇವಲ ಒಂದು ದುಡ್ಡು. ಅದರಲ್ಲಿ ಅಂಚೆ ವೆಚ್ಚವೂ ಸೇರಿತ್ತು. ಪತ್ರಿಕೆಯ ಒಡೆತನ ಬಾಸೆಲ್ ಮಿಸಶನ್ನಿಗೆ ಸೇರಿದ್ದೆಂದು ಹೇಳಲಾಗಿದೆ. ಆದರೆ ಎಲ್ಲಿಯೂ ಅದರ ಉಲ್ಲೇಖವಿಲ್ಲ. ಹಾಗೆಯೇ ಕ್ರೈಸ್ತಧರ್ಮ ಪ್ರಸಾರಕ್ಕಾಗಿ ಈ ಪತ್ರಿಕೆಯನ್ನು ಮೋಗ್ಲಿಂಗ್ ಬಳಸಿಕೊಳ್ಳಲಿಲ್ಲ ಎಂಬುದು ಗಮನಿಸಬೇಕಾದ ವಿಚಾರ. ಹೀಗೆ ಆರಂಭವಾದ ಕನ್ನಡ ಪತ್ರಿಕೋದ್ಯಮ ದೇಶದ ಇತರ ಭಾಷಾ ಪತ್ರಿಕೆಗಳಲ್ಲಿ ಆದಂತೆ ಕನ್ನಡ ಪತ್ರಿಕೋದ್ಯಮವೂ ಆರಂಭಿಕ ತೊಂದರೆಗಳನ್ನು ದಾಟಿ ಬಂದು ಈಗ ಪ್ರೌಢಾವಸ್ಥೆ ತಲಪಿದೆ. ಪತ್ರಿಕೋದ್ಯಮದ ಮುಖ್ಯ ಕವಲಾದ ದಿನಪತ್ರಿಕೆಗಳೂ ನಿಯತಕಾಲಿಕೆಗಳೂ ಈ ಅವಧಿಯಲ್ಲಿ ಕನ್ನಡದಲ್ಲಿ ಹುಲುಸಾಗಿ ಬೆಳೆದಿವೆ. ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ ಪಾಕ್ಷಿಕವಾಗಿದ್ದರೆ 1849ರಲ್ಲಿ ಆರಂಭಗೊಂಡಿದ್ದ ಸುಬುದ್ಧಿ ಪ್ರಕಾಶವನ್ನು ಮೊದಲ ವಾರ ಪತ್ರಿಕೆಯೆಂದು ಗುರುತಿಸಲಾಗಿದೆ. ಅದು ಬೆಳಗಾಂವಿಯಿಂದ ಪ್ರಕಟವಾಗುತ್ತಿತ್ತು. ಕಲ್ಲಚ್ಚಿನಲ್ಲಿ ಮುದ್ರಿಸಲಾಗುತ್ತಿತ್ತು. ಕಾನರೀಸ್ ವರ್ನಾಕ್ಯುಲರ್ ಸೊಸೈಟಿಯ ಆಶ್ರಯದಲ್ಲಿ ವೆಂಕಟರಂಗೋ ಕಟ್ಟಿಯವರು 1861ರ ನವೆಂಬರ್ ತಿಂಗಳಿನಲ್ಲಿ ಹೊರಡಿಸಿದ ಕನ್ನಡ ಜ್ಞಾ ನಬೋಧಕ ಮೊದಲು ವಾರಪತ್ರಿಕೆಯೂ ಅನಂತರ ಮಾಸಿಕವೂ ಆಗಿತ್ತು. 1862ರಲ್ಲಿ ಬಿ.ಎಚ್.ರೈಸ್ ಬೆಂಗಳೂರಿನಲ್ಲಿ ಆರಂಭಿಸಿ 1868ರ ವರೆಗೆ ನಡೆಸಿದ ಅರುಣೋದಯ ಕನ್ನಡದ ಆದ್ಯ ಮಾಸಪತ್ರಿಕೆಗಳಲ್ಲಿ ಒಂದು.
      19ನೆಯ ಶತಮಾನದಲ್ಲಿ ಪ್ರಕಟಗೊಂಡ ಕನ್ನಡ ಪತ್ರಿಕೆಗಳು ನೂರಕ್ಕಿಂತ ಕಡಿಮೆ. ಅವುಗಳಲ್ಲಿ ಮೂರ್ನಾಲ್ಕು ದಿನಪತ್ರಿಕೆಗಳನ್ನು ಬಿಟ್ಟರೆ ಉಳಿದವುಗಳೆಲ್ಲ ನಿಯತಕಾಲಿಕೆಗಳು. ಧಾರ್ಮಿಕ ವಿಷಯಗಳು, ಕನ್ನಡ ಕಾವ್ಯಗಳು, ರಾಜಕಾರಣ, ಸೃಜನಶೀಲ ಸಾಹಿತ್ಯ ಅಂದಿನ ಪತ್ರಿಕೆಗಳ ಆಸಕ್ತಿಯ ಕ್ಷೇತ್ರಗಳಾಗಿದ್ದುವು.
     19ನೆಯ ಶತಮಾನದಲ್ಲಿ ಪ್ರಕಟಗೊಂಡ ಶೈಕ್ಷಣಿಕ ಆಸಕ್ತಿಯ ಪತ್ರಿಕೆಗಳ ಪೈಕಿ ಹೆಸರಿಸಬೇಕಾದುದು ಕನ್ನಡ ಶಾಲಾ ಪತ್ರಿಕೆ. 1865ರಲ್ಲಿ ಬೆಳಗಾಂವಿಯಲ್ಲಿ ಮಠಪತ್ರಿಕೆ ಎಂಬ ಹೆಸರಿನಿಂದ ಈ ಪತ್ರಿಕೆ ಹೊರಟಿತು. 1867ರ ಏಪ್ರಿಲ್ನಲ್ಲಿ ಅದು ಶಾಲಾ ಪತ್ರಿಕೆ ಎಂದು ಪುನರ್ನಾಮಕರಣಗೊಂಡಿತು. ಬೆಳಗಾಂವಿಯಿಂದ ಧಾರವಾಡದ ಟೀಚರ್ಸ್ ಟ್ರೇನಿಂಗ್ ಕಾಲೇಜಿಗೆ ಅದರ ಒಡೆತನ ವರ್ಗಾವಣೆಗೊಂಡಿತು. 1871ರಲ್ಲಿ ಅದನ್ನು ಕನ್ನಡ ಶಾಲಾಪತ್ರಿಕೆ ಎಂದು ಕರೆಯಲಾಯಿತು. ಜೀವನ ಶಿಕ್ಷಣ ಎಂಬ ಹೆಸರಿನಿಂದ ಮುಂದುವರಿದ ಈ ಪತ್ರಿಕೆಗೆ 136 ವರ್ಷಗಳ ಇತಿಹಾಸವಿದೆ. ಕನ್ನಡದಲ್ಲಿ ಪ್ರಕಟಗೊಳ್ಳುತ್ತಿರುವ ಪತ್ರಿಕೆಗಳಲ್ಲೆಲ್ಲ ಇದು ಹಿರಿಯದಾಗಿದೆ. ಶಿಕ್ಷಣಾಧಿಕಾರಿಯಾಗಿದ್ದ ಡೆಪ್ಯುಟಿ ಚನ್ನಬಸಪ್ಪ ಆರಂಭ ಕಾಲದಲ್ಲಿ ಈ ಪತ್ರಿಕೆಯ ಬೆನ್ನೆಲುಬಾಗಿ ಬೆಳೆಸಿದರು.
    ರಾಜ್ಯಪತ್ರವಾಗಿ ಪ್ರಕಟಗೊಳ್ಳುತ್ತಿರುವ ಕರ್ನಾಟಕ ಸರ್ಕಾರದ ಗೆಜೆಟ್ 19ನೆಯ ಶತಮಾನದಲ್ಲೇ ಆರಂಭಗೊಂಡು ಇನ್ನೂ ಮುಂದುವರೆದಿರುವ ಮತ್ತೊಂದು ಪತ್ರಿಕೆ. ಈಗ ರಾಜ್ಯ ಪತ್ರ ಸರ್ಕಾರದ ಅಧಿಕೃತ ಸೂಚನಾ ಪತ್ರಗಳನ್ನು ಪ್ರಕಟಿಸುವುದಕ್ಕಷ್ಟೇ ಸೀಮಿತವಾಗಿದೆ. ಈಗಿನ ರಾಜ್ಯಪತ್ರದ ಪುರ್ವರೂಪ ಮೈಸೂರು ಗೆಜೆಟ್, 1866 ಏಪ್ರಿಲ್ 7ರಂದು ಮೊದಲು ಪ್ರಕಟಗೊಂಡಿತು.
    ವೃತ್ತಿಯಲ್ಲಿ ಶಿಕ್ಷಕರಾಗಿದ್ದ ವೆಂಕಟರಂಗೋಕಟ್ಟಿಯವರ ಪತ್ರಿಕಾ ಸಾಧನೆಯೂ ವಿಶೇಷ ಉಲ್ಲೇಖನೀಯ. ಜನರಲ್ಲಿ, ಮುಖ್ಯವಾಗಿ ಮಕ್ಕಳಲ್ಲಿ ????ನ ಪ್ರಸಾರ ಮಾಡುವುದು, ಓದುವ ಹವ್ಯಾಸ ಹೆಚ್ಚಿಸುವುದು ಇವರ ಉದ್ದೇಶವಾಗಿತ್ತು. ಶೋಧಕ ಎಂಬ ಮಾಸಪತ್ರಿಕೆಯನ್ನು ಇವರು 1875-78ರ ವರೆಗೆ ನಡೆಸಿದರು. ಮೊದಲು ಬೆಳಗಾಂವಿಯಿಂದ ಪತ್ರಿಕೆ ಪ್ರಕಟವಾಗುತ್ತಿತ್ತು. ಅನಂತರ ಧಾರವಾಡದಿಂದ ಲೋಕಶಿಕ್ಷಕ ಎಂಬ ಇನ್ನೊಂದು ಪತ್ರಿಕೆಯನ್ನೂ ಪ್ರಾರಂಭಿಸಿದರು (1888).
                                            ಮುಂದುವರಿಯುವುದು..............

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries