ಕುಂಬಳೆ: ಸಾರ್ವಜನಿಕ ಶಿಕ್ಷಣ ಸಂರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಜಾರಿಗೊಳಿಸಿರುವ ಶಿಕ್ಷಣ ಯಜ್ಞದಲ್ಲಿ ಶೇ 100 ಫಲಿತಾಂಶ ಕಂಡಿರುವ ಕುಂಬಳೆ ಗ್ರಾಮಪಂಚಾಯತಿಯ ಪೇರಾಲ್ ಸರಕಾರಿ ಕಿರಿಯ ಬುನಾದಿ ಶಾಲೆಯಲ್ಲಿ ಗುರುವಾರ ನಡೆದ ಈ ವರ್ಷದ ಶಾಲಾ ಪ್ರವೇಶೋತ್ಸವ ನಾಡಿನ ಉತ್ಸವವಾಗಿ ಮಾರ್ಪಟ್ಟಿತು.
ಹಿಂದೆ ಒಂದುಕಾಲದಲ್ಲಿ ಶಾಲಾ ಪ್ರವೇಶಾತಿಗೆ ಮಕ್ಕಳ ಕೊರತೆ ತೀವ್ರವಾಗಿ ಕಾಡುತ್ತಿದ್ದ ಈ ಶಾಲೆಯಲ್ಲಿ ಇಂದು ಒಂದನೇ ತರಗತಿಯಲ್ಲಿ 4 ಡಿವಿಝನ್ ಗಳನ್ನು ಹೊಂದಿ, ನಾಡಿಗೆ ಅಭಿಮಾನ ಮೂಡಿಸಿದೆ.
4ನೇ ತರಗತಿ ವರೆಗೆ ಕಲಿಕೆಗೆ ಅವಕಾಶ ಈ ಶಾಲೆಯಲ್ಲಿದ್ದು, ಈ ಬಾರಿ ಶಾಲೆಯ ಇತಿಹಾಸದಲ್ಲೇ ಪ್ರಥಮಬಾರಿಗೆ ಒಂದನೇ ತರಗತಿಗೆ 4 ಡಿವಿಝನ್ ತೆರೆಯಬೇಕಾಗಿ ಬಂದಿದೆ. ಶಾಲೆಗೆ ಸೇರ್ಪಡೆಗೊಳ್ಳುವ ಮಕ್ಕಳ ಸಂಖ್ಯೆ ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ಪ್ರವೇಶೋತ್ಸವದ ಸಂಭ್ರಮವೂ ಹೆಚ್ಚಿದೆ. 4 ಮಂದಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಸಹಿತ 66 ಮಕ್ಕಳು ಇಲ್ಲಿ ಪ್ರವೇಶಾತಿ ಪಡೆದಿದ್ದಾರೆ.
2017-18 ಶೈಕ್ಷಣಿಕ ವರ್ಷದಲ್ಲಿ ನಡೆದಿದ್ದ ಈ ಶಾಲೆಯ 70ನೇ ವಾರ್ಷಿಕೋತ್ಸವದ ವೇಳೆ ಇಲ್ಲಿ ಶಿಕ್ಷಣ ಯಜ್ಞ ಯೋಜನೆಗೆ ಚಾಲನೆ ನೀಡಲಾಗಿತ್ತು. ಶಿಕ್ಷಣಾಲಯದ ಅಭಿವೃದ್ಧಿಗೆ ಮುಖ್ಯಶಿಕ್ಷಕ, ಶಿಕ್ಷಕರು, ಇತರ ಸಿಬ್ಬಂದಿ, ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು,ಸಾರ್ವಜನಿಕರು ಜೊತೆಗೂಡಿ ನಡೆಸಿದ ಚಟುವಟಿಕೆಗಳು ಇಂದಿನ ಏಳಿಗೆಗೆ ಪ್ರಧಾನ ಕಾರಣ. ಹೆತ್ತವರು, ಶಾಲೆಯ ಅಭಿವೃದ್ಧಿ ಸಮಿತಿ, ಸ್ಥಳೀಯ ಸಂಘ-ಸಂಸ್ಥೆಗಳು ನೀಡಿದ ಬೆಂಬಲ ಈ ನಿಟ್ಟಿನಲ್ಲಿ ದೊಡ್ಡ ಹೆಚ್ಚು ಪರಿಣಾಮಕಾರಿಯಾಗಿ ಮೂಡಿಬಂದಿದೆ.
ಕಲಿಕೆಯ ಗುಣಮಟ್ಟ ಹೆಚ್ಚಳಕ್ಕೆ ರಾಜ್ಯ ಶಿಕ್ಷಣ ಇಲಾಖೆ ಜಾರಿಗೊಳಿಸುವ ಅನೇಕ ಯೋಜನೆಗಳು ಇಲ್ಲಿ ಪರಿಣಾಮಕಾರಿಯಾಗಿ ಅನುಷ್ಟಾನಗೊಂಡಿವೆ. ಮಾತೃಭಾಷೆಯ ಕಲಿಕೆಗಾಗಿಯೇ ಮೂರನೇ, ನಾಲ್ಕನೇ ತರಗತಿಗಳಲ್ಲಿ "ಮಧುರ ಕನ್ನಡ"ದಂಥಾ ಪಠ್ಯಪದ್ಧತಿಗಳಿವೆ. ಜೊತೆಗೆ "ಹಲೋ ಇಂಗ್ಲಿಷ್" ನಂಥಾ ಪೂರಕ ಪದ್ಧತಿಗಳೂ ಇವೆ. ಗಣಿತ-ವಿಜ್ಞಾನ ಪಾಠಗಳ ಸರಳೀಕರಣಕ್ಕೆ "ಶ್ರದ್ಧಾ ಕಲಿಕೆ ಯೋಜನೆ" ಪೂರಕವಾಗಿದೆ.
ಶಾಲೆಯ ಮಾದರಿ ಅಭಿವೃದ್ಧಿಯ ಅಂಗೀಕಾರ ರೂಪದಲ್ಲಿ ಶಾಸಕರ ನಿಧಿಯಿಂದ ಒಂದುಕೋಟಿ ರೂ. ಮಂಜೂರಾಗಿದೆ. ಇದರ ಪ್ರಕಾರ 4 ತರಗತಿ ಕೊಠಡಿಗಳು, ಮಕ್ಕಳ ಉದ್ಯಾನ, ಆವರಣ ಗೋಡೆ, ಅಡುಗೆ ಮನೆ, ಉಗ್ರಾಣ ಕೊಠಡಿಗಳನ್ನು ನಿರ್ಮಾಣ ನಡೆಯುತ್ತಿದೆ.
ಶಿಕ್ಷಣಾಲಯದ ಪ್ರಗತಿಗೆ ಸಾರ್ವಜನಿಕರು ನೀಡುತ್ತಿರುವ ಕ್ರಿಯಾತ್ಮಕ ಹೆಗಲುಗಾರಿಕೆ ಫಲ ನೀಡಿದೆ. ಇದರ ಅಂಗವಾಗಿ ಅನೇಕ ದಿನಾಚರಣೆಗಳು, ವಿವಿಧ ಮೇಳಗಳು, ವಾರ್ಷಿಕೋತ್ಸವ ಇತ್ಯಾದಿ ವೈಭವಯುತವಾಗಿ ನಡೆಯುತ್ತಿವೆ.
ಇಂಥಾ ವಿಶೇಷ ಹಿನ್ನೆಲೆಯಿರುವ ಶಾಲೆಯಲ್ಲಿ ಪಂಚಾಯತಿ ಮಟ್ಟದ ಶಾಲಾ ಪ್ರವೇಶೋತ್ಸವ ಗುರುವಾರ ಜರುಗಿತು. ಗ್ರಾಮಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ.ಆರಿಫ್ ಉದ್ಘಾಟಿಸಿದರು. ಮುಖ್ಯಶಿಕ್ಷಕ ಎಂ.ಗುರುಮೂರ್ತಿ ನಾಯ್ಕಾಪು, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಬಿ.ಎ.ಮಹಮ್ಮದ್ ಪೇರಾಲ್, ಮಾತೃಸಂಘದ ಅಧ್ಯಕ್ಷೆ ಹಸೀನಾ ಪೇರಾಲ್, ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಎಸ್.ಅಝೀಝ್, ಶಿಕ್ಷಕರಾದ ವಿನುಕುಮಾರ್, ಅನಿತಾಕುಮಾರಿ ಮೊದಲಾದವರು ಉಪಸ್ಥಿತರಿದ್ದರು.