ಬದಿಯಡ್ಕ: ಕಾಸರಗೋಡು ಕನ್ನಡಿಗರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದ ಕಯ್ಯಾರರು ಬಹುಭಾಷಾ ಪರಿಣಿತರು. ತಮ್ಮ ಭಾಷಾ ಸಂರಕ್ಷಣೆಯ ಹೋರಾಟದ ಕತೆಗಳ ಮೂಲಕ ಅಲ್ಪ ಸಂಖ್ಯಾತರ ಹಿತರಕ್ಷಣೆಗಾಗಿ ಕೈಗೊಳ್ಳುವ ಕಾರ್ಯಗಳಿಗೆ ಸ್ಪೂರ್ತಿ ನೀಡಿದವರು. ಸ್ಪಷ್ಟವಾಗಿ ಸರಳವಾಗಿ ಪರಿಸ್ಥಿತಿಯನ್ನು ಮನನ ಮಾಡಿಕೊಡುತ್ತಿದ್ದ ಕಯ್ಯಾರರ ಮಾರ್ಗದರ್ಶನ ಮತ್ತು ಅನುಗ್ರಹದಿಂದ ಕನ್ನಡಿಗರಿಗೆ ಆಗುವ ಅನ್ಯಾಯದೆದುರು ಸಿಡಿದೇಳಲು ಧೈರ್ಯ ಮತ್ತು ಮನೋಬಲವನ್ನು ನೀಡುತ್ತದೆ. ಹಳ್ಳಿಯಲ್ಲಿ ಹುಟ್ಟಿ ದೇಶದ ಕವಿಯಾದ ಈ ಹಿರಿಯ ಚೇತನ ಶಿಕ್ಷಕನಾಗಿ, ಸಾಹಿತಿಯಾಗಿ, ಬಹುಭಾಷಾ ಪಂಡಿತನಾಗಿ ಬದುಕಿದವರು. ಅವರ ನೆನಪುಗಳು, ನೀಡಿದ ಕೊಡುಗೆಗಳನ್ನು ಮುಂದಿನ ಜನಾಂಗವೂ ನೆನಪಿಸುವಂತೆ ದಿನನಿತ್ಯ ಸ್ಮರಿಸುವಂತೆ ಮಾಡಲು ಹಾಗೂ ಕಯ್ಯಾರರ ಹೆಸರಲ್ಲಿ ಚಟುವಟಿಕಾ ನಿರತರಾಗುವಂತೆ ಮಾಡುವ ನಿಟ್ಟಿನಲ್ಲಿ ಕಯ್ಯಾರ ಸ್ಮಾರಕ ಭವನವನ್ನು ನಿರ್ಮಿಸಲು ಜಿಲ್ಲಾ ಪಂಚಾಯತಿಗೆ ಬೇಡಿಕೆ ಸಲ್ಲಿಸಿದ್ದು ಈಗಾಗಲೇ ಕಾರ್ಯರಂಭವಾಗಿದೆ ಎಂದು ಜಿಲ್ಲಾ ಪಂಚಾಯತಿ ಸದಸ್ಯ ನ್ಯಾಯವಾದಿ. ಕೆ. ಶ್ರೀಕಾಂತ್ ಅಭಿಪ್ರಾಯ ಪಟ್ಟರು.
ಅವರು ಬದಿಯಡ್ಕ ಕವಿತಾ ಕುಟೀರದಲ್ಲಿ ಇತ್ತೀಚೆಗೆ ಜರುಗಿದ ಕಯ್ಯಾರ ಕಿಂಞಣ್ಣ ರೈಯವರ 104ನೇ ಜನ್ಮದಿನಾಚರಣೆಯನ್ನು ದೀಪ ಬೆಳಗಿಸಿ ಕಯ್ಯಾರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಯ್ಯಾರರ ಕುಟುಂಬದ ಸಂಪೂರ್ಣ ಸಹಕಾರ ಮತ್ತು ಬೆಂಬಲ ಸ್ಮಾರಕ ನಿರ್ಮಾಣಕ್ಕಿದ್ದು ಈಗಾಗಲೇ 30ಸೆಂಟ್ಸ್ ಸ್ಥಳವನ್ನು ಅದಕ್ಕಾಗಿ ಮೀಸಲಿಟ್ಟಿದ್ದಾರೆ. ಭಾಷೆ ಮತ್ತು ಸಂಸ್ಕøತಿಗೆ ಅವರು ನೀಡಿದ ಅಪ್ರತಿಮ ಕೊಡುಗೆ ಮತ್ತು ಮಾಡಿದ ಸಾಧನೆ ಸದಾ ಸ್ಮರನೀಯ. ಅವರ ಎಲ್ಲಾ ಭಾಷೆಗಳ ಸಾಹಿತ್ಯದ ಅಧ್ಯಯನ, ಸಂಶೋಧನೆಗೆ ಸಹಕಾರಿಯಾಗುವಂತಹ ಸ್ಮಾರಕ ಇದಾಗಿರುತ್ತದೆ. ಕಿರಿಯರನ್ನು ಹಿರಿಯರನ್ನು ಸಮಾನಾಗಿ ಪ್ರೀತಿಯಿಂದ ನೋಡುತ್ತಿದ್ದ ಕಯ್ಯಾರರು ತನ್ನ ನೂರನೇ ವಯಸ್ಸಿನಲ್ಲಿಯೂ ಮಿಠಾಯಿ ಸವಿಯುತ್ತಿದ್ದರು ಎಂದು ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು.
ಹಿರಿಯ ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರ ಅಧ್ಯಕ್ಷತೆ ವಹಿಸಿ ಮಾತಾನಾಡಿ, ಕಯ್ಯಾರರು ಸದಾ ಸ್ಮರಣೀಯರು. ಅವರ ಕವನಗಳಿಲ್ಲಿನ ಹಿರಿದಾದ ಆಶಯ ಮತ್ತು ಗಟ್ಟಿತನ ಊಹಾತೀತ ಎಂದು ಅಭಿಪ್ರಾಯಪಟ್ಟರು. ಕಯ್ಯಾರರ ಕವನಗಳನ್ನು ಹಾಡುವ ಮೂಲಕ ಅವರಿಗೆ ನುಡಿನಮನ ಸಲ್ಲಿಸಿದರು.
ಕರ್ನಾಟಕ ಇತಿಹಾಸ ಅಕಾಡೆಮಿ ಬೆಂಗಳೂರು ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಟಿ.ಎಚ್.ಎಂ.ಬಸವರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕದ ಉಪಾಧ್ಯಕ್ಷ ಪ್ರೊ.ಎ.ಶ್ರೀನಾಥ್, ಬ್ಲಾಕ್ ಪಂಚಾಯತಿ ಸದಸ್ಯ ಅವಿನಾಶ್ ರೈ, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ, ಶ್ರೀಕಾಂತ್ ಮೀಡಿಯಾ ಕ್ಲಾಸಿಕಲ್, ಅಶ್ರಫ್ ಮುನಿಯೂರು, ಸುಧಾಮ ಗೋಸಾಡ, ಆನಂದ ಚೆನ್ನಕೋಡ್, ನವೀನ್ ನೆಟ್ಟಣಿಗೆ, ಉದಯ ಕಾರ್ತಿಕ ಬದಿಯಡ್ಕ ಮುಂತಾದವರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಸವರಾಜು ಅವರು ನ್ಯಾಯವಾದಿ ಕೆ.ಶ್ರೀಕಾಂತ್ ಅವರನ್ನು ಶಾಲು ಹೊದಿಸಿ ಅಭಿನಂದಿಸಿದರು. ಕಯ್ಯಾರರ ಪುತ್ರ ಡಾ.ಪ್ರಸನ್ನ ರೈ ಕಯ್ಯಾರರ ಪುಸ್ತಕಗಳನ್ನು ಅತಿಥಿಗೆ ನೀಡಿ ಗೌರವಿಸಿದರು.
ದುರ್ಗಾಪ್ರಸಾದ್ ರೈ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜ್ಯೋತ್ಸ್ನಾ ಎಂ.ಕಡಂದೇಲು ಪ್ರಾರ್ಥನೆ ಹಾಡಿದರು. ಡಾ.ಪ್ರಸನ್ನ ರೈ ಸ್ವಾಗತಿಸಿ, ನಿರಂಜನ್ ರೈ ವಂದಿಸಿದರು. ಪ್ರಭಾವತಿ ಕೆದಿಲಾಯ ಕಾರ್ಯಕ್ರಮ ನಿರೂಪಿಸಿದರು.