ಪುಸ್ತಕ: ನಿಷೇಧಕ್ಕೊಳಪಟ್ಟ ಒಂದು ನೋಟು
ಲೇಖಕರು: ವಿಲ್ಸನ್ ಕಟೀಲು
ಬರಹ:ಚೇತನಾ ಕುಂಬಳೆ:
*ಉಸಿರಾಡುವ ತಾಜಾತನದ ಕವಿತೆಗಳು*
ಇತ್ತೀಚೆಗೆ ಕಟೀಲಿಗೆ ಹೋದಾಗಲೆಲ್ಲ ನೆನಪಾಗುವ ವ್ಯಕ್ತಿ ವಿಲ್ಸನ್ ಕಟೀಲು. ಕಾವ್ಯಮನೆ ಪ್ರಕಾಶನ ವಾಟ್ಸಪ್ ಬಳಗದಲ್ಲಿ, ಮುಖ ಪುಸ್ತಕದಲ್ಲಿ ಬರುವ ಅವರ ಕವಿತೆಗಳನ್ನು ಗಮನಿಸುತ್ತೇನೆ, ಓದುತ್ತೇನೆ ಇಷ್ಟ ಪಡ್ತೇನೆ. ಅವರ ಕಾವ್ಯಗಳು ಇಬ್ಬನಿಗಳಂತೆ, ಹೊಳೆಯುತ್ತವೆ, ನವಿಲುಗರಿಯಂತೆ ಮನಸೆಳೆಯುತ್ತವೆ. ಅವರ ಕವಿತೆಗಳಲ್ಲಿ ಹೊಸತನವಿದೆ, ಬರವಣಿಗೆ ಶೈಲಿಯೂ ಸುಂದರ. ಕಳೆದ ವರ್ಷ ಅಕ್ಷರ ಇ ಮಾಗಜಿನ್ ನ ಸಂಪಾದಕರಾದ ಇಸ್ಮಯಿಲ್ ಬಿ.ಎಸ್ ಅವರ 'ಮಳೆಹನಿ' ಲೇಖನ ಸಂಕಲನದ ಬಿಡುಗಡೆ ಕಾರ್ಯಕ್ರಮದಲ್ಲಿ ಮೊದಲ ಬಾರಿ ಭೇಟಿಯಾಗಿದ್ದರೂ ಮಾತನಾಡಿಸಲಾಗಿರಲಿಲ್ಲ. ಅವರು ದ್ವಿಭಾಷಾ ಕವಿ. ಕನ್ನಡ ಹಾಗೂ ಕೊಂಕಣಿ ಎರಡೂ ಭಾಷೆಗಳಲ್ಲಿ ಕವಿತೆಗಳನ್ನು ಬರೆಯ ಬಲ್ಲರು. ವಿಲ್ಸನ್ ಅವರು ತಮ್ಮ ಕವಿತೆಗಳ ಮೂಲಕ ಹಲವು ಓದುಗರ ಮನವನ್ನು ಮುಟ್ಟಿದ್ದಾರೆ,ಗೆದ್ದಿದ್ದಾರೆ.ಅವರು ಉತ್ತಮ ಅನುವಾದಕರೂ ಹೌದು. ತಮ್ಮ ಕೊಂಕಣಿ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿ ಸಹೃದಯ ಓದುಗರಿಗೆ ಉಣಬಡಿಸುತ್ತಿದ್ಧಾರೆ.
ಅವುಗಳು ಅನುವಾದಿತ ಕವಿತೆಗಳೆಂದನಿಸುವುದೇ ಇಲ್ಲ. ಅಷ್ಟರ ಮಟ್ಟಿಗೆ ಅಲ್ಲಿ ಸ್ವಂತಿಕೆಯಿದೆ.
ಕೊಂಕಣಿಯಲ್ಲಿ 3 ಕವನ ಸಂಕಲನಗಳನ್ನು ಹೊರತಂದ ಅವರು ಇದೀಗ ಕನ್ನಡದಲ್ಲಿ *ನಿಷೇಧಕ್ಕೊಳಪಟ್ಟ ಒಂದು ನೋಟು* ಪ್ರಥಮ ಕವನ ಸಂಕಲನವನ್ನು ಸಾರಸ್ವತ ಲೋಕಕ್ಕೆ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.
ಈ ಸಂಕಲನದ ಮೊದಲ ಭಾಗದಲ್ಲಿ ಲೇಖಕರ ಕಿರು ಪರಿಚಯವಿದೆ. ಇದಕ್ಕೆ ಆರಿಫ್ ರಾಜಾ ಅವರು ಮುನ್ನುಡಿಯನ್ನು ಬರೆದಿದ್ದಾರೆ. ಅವರ ಬರಹವನ್ನು ಗಮನಿಸಿದಾಗ ಕಾವ್ಯದ ಬಗೆಗಿನ ಆಳವಾದ ಅರಿವಿನೊಂದಿಗೆ, ಅಲ್ಲಲ್ಲಿ ವಿದೇಶಿ ಕವಿಗಳ ಹೆಸರನ್ನು ಉಲ್ಲೇಖಿಸುತ್ತಾ ಕವನಗಳ ವಿಶ್ಲೇಷಣೆ ಮಾಡುತ್ತಾರೆ. ಮುಂದೆ ಲೇಖಕರ ಎದೆಯ ಮಾತುಗಳನ್ನಾಲಿಸಬಹುದು.
ಈ ಸಂಕಲನದಲ್ಲಿ ಒಟ್ಟು 48 ಕವಿತೆಗಳಿವೆ. ಅವರ ಕವಿತೆಗಳಲ್ಲಿ ಹೊಸತನವಿದೆ. ಮನಸಿಗನಿಸಿದ್ದನ್ನು ನೇರವಾಗಿ ಕಾವ್ಯದಲ್ಲಿ ಹೇಳುತ್ತಾರೆ. ಕವಿತೆಗಳಲ್ಲಿ ಒಂದು ಜೀವಂತಿಕೆ ಇದೆ.. ಲವಲವಿಕೆಯಿದೆ. ಇಲ್ಲಿನ ಹಲವು ಕವಿತೆಗಳು ಸದಾ ಉಸಿರಾಡುತ್ತವೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಕವಿತೆಗಳಲ್ಲಿ ಒಂದು ಕಥೆಯೂ ಅಡಗಿರುವುದನ್ನು ಕಾಣಬಹುದು. 'ಬೀಡಿ ಕಟ್ಟುವ ಹುಡುಗಿಗೆ' ಮೊದಲ ಕವಿತೆಯಲ್ಲಿ 'ಬದುಕು ಅರ್ಧ ಉರಿದ ಸಿಗರೇಟು' ಎಂಬ ಚಾಲ್ರ್ಸ್ ಬೋದಿಲೇರ್ ನ ಮಾತನ್ನು ಉಲ್ಲೇಖಿಸುತ್ತಾರೆ. ಬೀಡಿಯಿಂದಲೇ ಬದುಕು ಕಟ್ಟಿಕೊಳ್ಳುವ ಜನರು ನಮ್ಮ ಮಧ್ಯೆ ಇದ್ದಾರೆ. ದುಶ್ಚಟಗಳಿಗೆ ಬಲಿಯಾಗಿ ಬದುಕನ್ನು ಕಳೆದುಕೊಳ್ಳುವವರೂ ಇದ್ಧಾರೆ. 'ಬಲೂನು,ಮಕ್ಕಳು , ರಸ್ತೆ'ಕವನದಲ್ಲಿ ಬಲೂನು ಮಾರುವ ಹುಡುಗ ರಸ್ತೆ ಅಪಘಾತದಲ್ಲಿ ಜೀವ ಕಳೆದುಕೊಂಡರೂ ಆತನ ಉಸಿರು ಬಲೂನಿನಲ್ಲಿ ಈಗಲೂ ಬೆಚ್ಚಗಿದೆ. ಇಂತಹ ಹೃದಯ ವಿದ್ರಾವಕ ಚಿತ್ರವನ್ನು ನಮ್ಮ ಮುಂದಿಡುತ್ತಾರೆ. ಆದ್ದರಿಂದ
"ರಸ್ತೆ ಬದಿಯಲ್ಲಿ ಬಲೂನು ಮಾರಬೇಡಿ
ಮಾರಿದರೂ, ಅವಕ್ಕೆ
ಉಸಿರನ್ನು ಊದಬೇಡಿ" ಎನ್ನುತ್ತಾರೆ.
ಇನ್ನೊಂದು ಮಹತ್ವದ ಕವಿತೆ 'ನಿಷೇಧಕ್ಕೊಳಪಟ್ಟ ಒಂದು ನೋಟು'. ಇದರಲ್ಲಿ ಇತ್ತೀಚೆಗೆ ಸರಕಾರ ನೋಟನ್ನು ನಿಷೇಧಿಸಿದ ವಿಷಯವಿದೆ. ನಿಷೇಧಕ್ಕೊಳಪಟ್ಟ ನೋಟಿನಲ್ಲಿ ಮೀನು ಮಾರುವವಳ ಬೆವರ ಹನಿಯಿದೆ. ಮಾಂಸದಂಗಡಿಯವನ ರಕ್ತದ ಕೆಂಪಿದೆ ಎನ್ನುತ್ತಾ ಆ ನೋಟಿನ ಮೇಲೆ ಕವಿತೆ ಗೀಚಿ, ಅಮಾನ್ಯವಾಗುವುದನ್ನು ತಡೆಹಿಡಿಯುತ್ತಾರೆ. 'ಸಿಟಿ ಸರ್ಕಲ್'ನಲ್ಲಿ ಕಂಡ ದೃಷ್ಯಗಳನ್ನು ಕವಿತೆಯೊಳಗೆ ತರುತ್ತಾರೆ. ಕವಿತೆಗಳಿಗೂ ಒಂದು ಪ್ರವೇಶ ಪರೀಕ್ಷೆ ಇದೆ ಎನ್ನುತ್ತಾ, ವಿಧ್ವಾಂಸ ಮತ್ತು ಕವಿತೆಗಳ ನಡುವೆ ನಡೆವ ಪ್ರಶ್ನೋತ್ತರಗಳಿವೆ.ಕೊನೆಗೆ ಕವಿತೆಯನ್ನು ಶುದ್ಧ ಬಿಳಿ ಹಾಳೆಯಲ್ಲಿ ಬರೆದು ತರಲು ಹೇಳಿದಾಗ, ಚಿಟ್ಟೆಗಿಂತ ಹಗುರ ನನ್ನ ಕವಿತೆ ಎಂದು ಕಾಗದವನ್ನೇ ಒದ್ದು ಥಟ್ಟನೆ ಗಾಳಿಯಲ್ಲಿ ಹಾರಿಹೋಗುತ್ತವೆ.
ಹಳ್ಳಿ ದಾಟುವಾಗ ಒಣಬೇರು, ಮರದ ರೆಂಬೆ, ಹೂಗಳು ಮಾತಿಗಿಳಿಯುವುದನ್ನು ಕಾಣಬಹುದು. 'ಕಿತ್ತಳೆಯ ಅಚ್ಛೇ ದಿನ್' ಕವಿತೆಯಲ್ಲಿ
"ಸಪ್ಪೆಯಿರಲಿ, ಹುಳಿಯಿರಲಿ ಸಿಹಿಯೆಂದೇ ಹೇಳಬೇಕು ಸದಾಕಾಲ
ರುಚಿಯನ್ನು ಠೀಕಿಸಲು
ಯಾರಿಗೂ ಇಲ್ಲ ಅಧಿಕಾರ" ಎನ್ನುತ್ತಾ, ಕಿತ್ತಳೆಯನ್ನು 'ರಾಷ್ಟ್ರೀಯ ಫಲ' ಎಂದು ಕವಿ ಸ್ವತಃ ಘೋಷಿಸುತ್ತಾರೆ.
ಸವಾರಿ ಹೊರಡುವಾಗ ಹೆಲ್ಮೆಟ್ ಖಡ್ಡಾಯ, ಶಾಲಾ ಕಾಲೇಜಿನ ಹತ್ರ ತಂಬಾಕು ಮಾರಬೇಡಿ, ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಿಗೀರಬೇಡಿ ಹೀಗೆ ಕವಿತೆಯ ಮೂಲಕ ಹಲವು ಸೂಚನೆಗಳನ್ನು ಸಾರ್ವಜನಿಕರಿಗೆ ನೀಡುತ್ತಾರೆ.
"ಹಣೆಯ ಬೆವರ ಹನಿ- ನಕ್ಷತ್ರ
ಬೆಳಗ್ಗೆ ಅವ್ವ ಹಚ್ಚುತ್ತಿದ್ದ ಒಲೆ - ಸೂರ್ಯ
ಅವ್ವನ ಕೈಬಳೆ- ಚಂದಿರ
ಹೀಗೆ ಕವಿ ಕಂಡ ಮೊದಲ ವೀಕ್ಷಣೆಗಳನ್ನು ಕವಿತೆಯಲ್ಲಿ ಗಮನಿಸಬಹುದು. 'ರಾಮ ರಾಮ' ಕವಿತೆಯಲ್ಲಿ ಧರ್ಮಗಳ ನಡುವಿದ್ದ ಸೌಹಾರ್ದತೆ ಬಿರುಕು ಬಟ್ಟದ್ದು ಕಾಣುತ್ತದೆ. 'ಸಾಕ್ಷಿ' ಕವಿತೆಯಲ್ಲಿ ಮನುಷ್ಯನ ಜೀವಕ್ಕೆ ಬೆಲೆ ಕಲ್ಪಿಸದೆ ರೇಷನ್ ಕಾರ್ಡು, ವೋಟರ್ ಐಡಿ, ಆಧಾರ್ ಕಾರ್ಡ್ ಗ?ಳು ಪ್ರಾಧಾನ್ಯ ಪಡೆಯುವದನ್ನು ತಿಳಾಸುತ್ತಾರೆ.
ಅವರ ಕವಿತೆಗಳಲ್ಲಿ ಕಾಲಾನುಕಾಲಕ್ಕೆ ಬದಲಾಗುತ್ತಿರುವ ಆಸ್ಪತ್ರೆಗಳಿವೆ., ಸ್ವತಂತ್ರ ಸಾಲುಗಳಲ್ಲಿ ಮನಮುಟ್ಟುವ ಮುತ್ತಿನಂಥ ಮಾತುಗಳಿವೆ. ಖಗೋಳದ ರಸಪ್ರಶ್ನೆಗಳಿವೆ, ಮಳೆ ಬರುತ್ತದೆ, ಮೊಮ್ಮಗನನ್ನು ನೆನೆವ ಅಜ್ಜಿ ಬರುತ್ತಾಳೆ, ಹೂಗಳು ಅರಳುತ್ತವೆ ಕಂಪು ಬೀರುತ್ತವೆ, ಮರಳ ಮೇಲೆ ಗೀಚಿದ ಸಾಲುಗಳಿವೆ, ಅಕ್ಕನ ಪ್ರಾರ್ಥನೆಯಿದೆ, ರೇಖಾಗಣಿತ ವೃತ್ತ, ತ್ರಿಭುಜ ಕೈವಾರ ಜಾಮೆಟ್ರಿ ಬೋಕ್ಸ್ ಮೊದಲಾದ ದಿನ ಬಳಕೆಯ ವಸ್ತುಗಳನ್ನೂ ಕವತೆಯಾಗಿಸುತ್ತಾರೆ, ಸಂತೆಯೊಳಗಿನ ಒಂದು ನೋಟ ಇದೆ, ಶವ ಸಂಸ್ಕಾರದ ವಿಧಿ ವಿಧಾನಗಳನ್ನು ಹೇಳುತ್ತಾರೆ, ಮನೆಯ ಟಿವಿ ಕೆಟ್ಟಿದೆ..ಅದಕ್ಖೆ ಹುಚ್ಚು ಹಿಡಿದಿದೆ ಎನ್ನುತ್ತಾರೆ,
ಇಲ್ಲಿ ಹಿಟ್ಲರನ ಸರ್ವಾಧಿಕಾರ ಮನೊಭಾವದಿಂದ ಅಮಾನವೀಯ ಘಟನೆಗಳಿಗೆ ಸಾಕ್ಷಿಯಾದ ಯಾತನಾ ಶಿಬಿರದ ಭೀಭತ್ಸ ಚಿತ್ರಣವಿದೆ, ಹೃದಯ ಹಿಂಡುವ ನೋವಿದೆ; ಲೇಖಕಿ ನೇಮಿಚಂದ್ರ ಅವರ ಯಾದ್ ವ ಶೇಮ್ ಎಂಬ ಕಾದಂಬರಿಯಲ್ಲೂ ಯಾತನಾ ಶಿಬಿರದ ದೀರ್ಘವಾದ ಮಾಹಿತಿಯನ್ನು ಓದಿದ ನೆನಪು ಬಂದು ಹೋಯ್ತು.
"ಜೈಲೊಳಗೂ
ಮಳೆಯಾಗುತ್ತದೆ, ಆಗಾಗ
ಕಣ್ಣುಗಳಷ್ಟೇ ಒದ್ದೆಯಾಗುತ್ತವೆ"
ಹೀಗೆ,ಕಾರಾಗೃಹದ ಸರಳ ಹಿಂದೆ ಬಂಧಿಯಾದ ಮನಸುಗಳ ಮಾತುಗಳನ್ನೂ ಕವಿತೆಯಾಗಿಸುತ್ತಾರೆ.
"ನೆತ್ತರು ಹರಿಸಿದ್ದಕ್ಕಾಗಿ
ಐದು ವರ್ಷ ಮತ್ತು
ನೀರಿನಿಂದ ನೆತ್ತರನ್ನು ತೊಳೆದುದಕ್ಕಾಗಿ
ಹತ್ತು ವರ್ಷ ಸಜೆ"
ಹೀಗೆ ಭವಿಷ್ಯತ್ ನಲ್ಲಿ ನಡೆಯಬಹುದಾದ ನೀರಿನ ಬಗೆಗಿನ ಅದ್ಭುತ ಕಲ್ಪನೆಗಳಿವೆ.
ಶರಾಬು,ಸಾಕಿಯ ಸುತ್ತ ಒಂದಷ್ಟು ಹನಿಗಳುದುರುತ್ತವೆ.
ಕೆಲವೊಂದು ಸಾಲುಗಳಲ್ಲಿ ಬೆಂಕಿಯ ಉರಿಯಿದೆ, ಕವಿತೆಯಲ್ಲಿ ಕವಿ ಇಷ್ಟ ಪಡುವ ಗಾಂಧಿ ಇದ್ಧಾರೆ. ಕೊನೆಗೆ, ಕೆಟ್ಟ ಕವಿಯೊಬ್ಬನ ಸತ್ತ ಕವಿತೆಯನ್ನು ನಮ್ಮ ಮುಂದಿಡುತ್ತಾರೆ. ಆದರೆ, ಆ ಕವಿತೆಗೂ ಜೀವ ಇದೆ, ಅದು ಉಸಿರಾಡುತ್ತದೆ.
ಇಲ್ಲಿನ ಕವಿತೆಗಳು ಕಲ್ಪನೆಗಿಂತಲೂ ಹೆಚ್ಚಾಗಿ ವಾಸ್ತವತೆಗೆ ತೆರೆದುಕೊಳ್ಳುವುದನ್ನು ಕಾಣಬಹುದು. ಇಂತಹ ಜೀವ ಪರ ತುಡಿಯುವ ಮಿಡಿಯುವ ಕವಿತೆಗಳು ಅವರ ಲೇಖನಿಯಿಂದ ಹೊರಹೊಮ್ಮತ್ತಿರಲಿ, ಅವುಗಳು ಓದುಗರ ಮನಮುಟ್ಟುತ್ತಿರಲಿ, ತಟ್ಟುತ್ತಿರಲಿ, ಕಾಡುತ್ತಿರಲಿ
ಬರಹ: ಚೇತನಾ ಕುಂಬ್ಳೆ
Feed Back: samarasasudhi@gmail.com