ಪುಸ್ತಕ: ಮಿಠಾಯಿ
ಲೇಖಕರು: ಶೀಲಾ ಲಕ್ಷ್ಮೀ
ಬರಹ: ಚೇತನಾ ಕುಂಬಳೆ
*ಷಡ್ರಸಪೂರಿತವಾದ ಶುಂಠಿ ಮಿಠಾಯಿ*
ಮಿಠಾಯಿಯೆಂದರೆ ಯಾರಿಗಿಷ್ಟವಿಲ್ಲ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಮಿಠಾಯಿಯ ಸವಿಯುಂಡವರೇ. ಸವಿದಷ್ಟೂ ಅದರ ರುಚಿ ಹೆಚ್ಚು. ಹಾಗಂತ ಎಲ್ಲವೂ ಸಿಹಿಯೆಂದಲ್ಲ. ಅದರಲ್ಲಿ ಹುಳಿಯದ್ದೂ ಇವೆ, ಖಾರದ್ದೂ ಇವೆ. ಹಾಗೆನೇ ಜೀವನದ ಅನುಭವಗಳೂ ಕೂಡ. ಮಧುರವಾದ ಅನುಭವಗಳು, ಸವಿನೆನಪುಗಳು ನಮ್ಮನ್ನು ಮತ್ತೆ ಮತ್ತೆ ಕಾಡುತ್ತಲೇ ಇರುತ್ತವೆ ಮಿಠಾಯಿಯ ಸವಿಯಂತೆ. ತಮ್ಮ ಬದುಕಿನಲ್ಲಿ ಮರೆಯಲಾಗದ ಅನುಭವಗಳನ್ನು, ಅದರ ಸವಿಯನ್ನು ಓದುಗರಿಗೂ ಹಂಚಬೇಕೆಂದು ಅವುಗಳಿಗೆ ಅಕ್ಷರ ರೂಪ ನೀಡಿ 'ಮಿಠಾಯಿ' ಎಂಬ ಹೆಸರಲ್ಲಿ ಲೇಖನ ಗುಚ್ಛವನ್ನು ಪಂಚಾಮೃತ ಪ್ರಕಾಶನ(ಕಾಸರಗೋಡು)ದಿಂದ ಪ್ರಕಟಿಸಿದ್ದಾರೆ ಶೀಲಾ ಲಕ್ಷ್ಮಿ ಅವರು. ಇವರ ಮತ್ತೊಂದು ಪುಸ್ತಕ ಹವ್ಯಕ ಭಾಷೆಯಲ್ಲಿ ಬಂದ ಕಾದಂಬರಿ 'ಅಬ್ಬೆ ಎನಗೆ ಅರುಂಧತಿಯ ಕಂಡಿದೇ ಇಲ್ಲೆ'.
ಇಲ್ಲಿನ ಬರಹಗಳು ಪತ್ರಿಕೆಗಳಲ್ಲಿ ಅಂಕಣಗಳಾಗಿ ಬರುತ್ತಿದ್ದವು. ಹಾಗೂ ಲೇಖಕಿ ತಮ್ಮದೇ 'ಮಿಠಾಯಿ' ಎಂಬ ಬ್ಲಾಗ್ ನಲ್ಲಿ ಪ್ರಕಟಿಸುತ್ತಿದ್ದರು. ಹಿರಿಯ ಲೇಖಕಿ ವಿಜಯ ಸುಬ್ರಹ್ಮಣ್ಯ ಅವರು ಮುನ್ನುಡಿ ಬರೆದಿದ್ದಾರೆ. "ಹೆಂಗಳೆಯರ, ಸಮಾಜದ, ಬದುಕಿನ ಜಾಡಿಯಲ್ಲಿ ಗಾಳಿಸಿ ತೆಗೆದು ಪಕ್ವಗೊಳಿಸಿರುವ ಈ ಮಿಠಾಯಿ ಮಾಲಿಕೆಯಲ್ಲಿ ಲಘುಬರಹಗಳೊಂದಿಗೆ ಚಿಂತನಶೀಲ ಬರಹಗಳೂ ಸೇರಿ ಅದೊಂದು ಷಡ್ರಸಪೂರಿತ ಶುಂಠಿ ಮಿಠಾಯಿ ಆಗಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ಪ್ರತಿಯೊಂದು ಲೇಖನಗಳಿಗೆ ಸಂಬಂಧಿಸಿದಂತೆ ಸೂಕ್ತವಾದ ನೂತನ ಶೈಲಿಯ ಚಿತ್ರಗಳನ್ನೂ ಅಳವಡಿಸಿದ್ದರಿಂದ ಪುಸ್ತಕ ಆಕರ್ಷಕವಾಗಿದೆ.
ಇದರಲ್ಲಿ ಒಟ್ಟು 25 ಸಣ್ಣಪುಟ್ಟ ಲೇಖನಗಳಿದ್ದು 3 ಅಥವಾ 5 ಪುಟಗಳಿಗೆ ಸೀಮಿತವಾಗಿವೆ. ವೇಗವಾಗಿ ಓಡುತ್ತಿರುವ ಈ ಕಂಪ್ಯೂಟರ್ ಯುಗದಲ್ಲಿ ಜೀವನವೇ ಯಾಂತ್ರಿಕವಾಗಿದೆ. ನಮ್ಮವರೊಡನೆ ಮನಬಿಚ್ಚಿ ಮಾತಾಡುವ, ಜೊತೆ ಕುಳಿತು ಊಟಮಾಡುವ ಪರಿಪಾಠವೇ ಮರೆಯಾಗಿವೆ. ಹಾಗಿರುವಾಗ ಲೇಖಕಿ "ಕುಟುಂಬ ಸದಸ್ಯರೊಳಗಿನ ಪರಸ್ಪರ ಪ್ರೀತಿಯಲ್ಲಿ ಜೀವನದ ಸೌಂದರ್ಯವಿದೆ" ಎನ್ನುತ್ತಾರೆ. ಮಹಿಳೆಯರಿಗಿಯೇ ಮೀಸಲಿಟ್ಟ ಬಸ್ಸು, ಅದರ ಸುತ್ತ ನಡೆದ ಘಟನೆಗಳಿಗೆ ಮರುಜೀವ ತುಂಬುತ್ತಾರೆ. ಕಾರಂತರ ಬೆಟ್ಟದ ಜೀವ ಕಾದಂಬರಿಯನ್ನು ಓದಿದ್ದು, ಅದರ ಸಾರವನ್ನು ಅರ್ಥೈಸಿಕೊಂಡದ್ದು, ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಕಾರಂತರೊಂದಿಗಿನ ಮೊದಲ ಭೇಟಿಯ ನೆನಪು, ತನ್ನಿಂದಾದ ತಪ್ಪಿಗೆ ಕ್ಷಮೆಯಾಚಿಸಿದ್ದು, ಅವರ ಮೆಚ್ಚುಗೆಗೆ ಪಾತ್ರಳಾದ ಸನ್ನಿವೇಶವನ್ನು ಸ್ವಾರಸ್ಯಕರವಾಗಿ ಹೇಳುತ್ತಾರೆ. ಶಾಲಾ ವಾರ್ಷಿಕೋತ್ಸವದಲ್ಲಿ ಮಾಡಿದ ನೃತ್ಯ ಅದರ ಅನುಭವದಿಂದ ಮುಂದೆ ಸ್ಕೂಲ್ ಡೇಯಲ್ಲಿ ಭಾಗವಹಿಸಲಾರೆ ಎಂದು ಪ್ರತಿ???? ಮಾಡಿಕೊಂಡ ಸನ್ನಿವೇಶದ ನೆನಪುಗಳಿವೆ. ಆ ನೆನಪುಗಳೆಲ್ಲವೂ ಜೀವಂತವಾಗಿವೆ. ಮನೆಗೆ ಬಂದ ದಾಸಯ್ಯನ ಪ್ರಸಂಗದಲ್ಲಿ ಮಹಿಳೆಯರಿಗೊಂದು ಎಚ್ಚರಿಕೆಯಿದೆ. ಹಿರಿಯ ವಿಧ್ವಾಂಸರೊಬ್ಬರು ಕೇಳಿಕೊಂಡಾಗ ಅಪ್ಪನ ಬಗ್ಗೆ ಬರೆದ ಲೇಖನಕ್ಕೆ ಅನಿರೀಕ್ಷಿತವಾಗಿ ಸಂದ ಗೌರವ, ಸಂತೋಷ ಪಟ್ಟ ಕ್ಷಣಗಳಿವೆ.
ಆಂಟಿ ಅಂತ ಕರಿವ ಜೋಳಪುರಿ ಮಾರುವ ಹುಡುಗನಿಂದ ಅಕ್ಕಾ ಅಂತ ಕರಿಸಿಕೊಂಡದ್ದು, ಆತನೊಂದಿಗಿನ ಆಪ್ತವಾದ ಸಂಬಂಧದ ಚಿತ್ರಣವಿದೆ. ಡೆಂಗ್ಯೂ ರೋಗದ ಬಗ್ಗೆ ಮನೆಮನೆಗೆ ಅರಿವು ಮೂಡಿಸಲು ಬಂದವರಿಂದ ಮನೆಯಲ್ಲಿ ನಡೆದ ಹಾಸ್ಯ ಘಟನೆಯನ್ನು ವಿವರಿಸುವರು. "ನಮ್ಮೊಳಗಿನ ಕುಂದು ಕೊರತೆ ದೌರ್ಬಲ್ಯಗಳನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದು- ವ್ಯಕ್ತಿತ್ವ ಸುಧಾರಣೆಗೆ ಮನಸ್ಸು ಮಾಡುವುದು- ಸಹಜೀವಿಗಳೊಂದಿಗೆ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವುದು ಈ ಮೂರು ಕುಣಿಕೆಗಳಾಗಿ ಒಂದರೊಳಗೊಂದು ಸೇರಿ ಹೋದಾಗ ಜೀವನವೆನ್ನುವುದು ಸರಳ ಸಂಕಲೆಯಾಗುತ್ತದೆ" ಎನ್ನುವ ಲೇಖಕಿ "ಅದೇ ಕ್ಷಣ ಕಣ್ಣಿಲ್ಲದ ಮೋಹ ವಿವೇಚನೆಯನ್ನು ಕಳೆದುಕೊಂಡಾಗ ಮನುಷ್ಯ ಮನುಷ್ಯರೊಳಗಿನ ಸಂಬಂಧ ಜಾಳುಜಾಳಾಗುತ್ತದೆ ಎಂಬುದಕ್ಕೆ ತಮ್ಮ ಅನುಭವಗಳನ್ನು ಸಾಕ್ಷಿಯಾಗಿಸುತ್ತಾರೆ. ಪ್ರಾಣಿಗಳಲ್ಲಿ ಅತ್ಯಂತ ವಿಧೇಯ ಮತ್ತು ವಿಶ್ವಾಸನೀಯ ಪ್ರಾಣಿಗಳೆಂದರೆ ಕುದುರೆ ಮತ್ತು ನಾಯಿ. ಮಾನವನ ಕ್ರೂರತೆಯ ಅಟ್ಟಹಾಸಕ್ಕೆ ಬಲಿಯಾದ ಉತ್ತರಾಖಂಡ್ ರಾಜ್ಯದ ಪೋಲಿಸ್ ಅಶ್ವ ಶಕ್ತಿಮಾನ್ ಎನ್ನುವ ಮೂಕಪ್ರಾಣಿಯ ಉಲ್ಲೇಖ ಮಾಡುತ್ತಾರೆ. ಕುದುರೆಗಳಿಗೆ ಪೋಲಿಸ್ ಇಲಾಖೆಯ ತರಬೇತಿ ನೀಡುವುದರ ಬಗ್ಗೆ ಮಾಹಿತಿ ನೀಡುತ್ತಾರೆ. ಹದಿಹರಯದವರು ಕುಡಿತದ ಚಟಕ್ಕೆ ಬಲಿಯಾಗುವುದು ಅದಕ್ಕೆ ಹೆತ್ತವರೇ ಒಂದುರೀತಿಯಲ್ಲಿ ಕಾರಣಕರ್ತರಾಗುವುದನ್ನು ತಿಳಿಸುವರು. ಅಂಗನವಾಡಿ ಕಾರ್ಯಕರ್ತೆಯರ ಕರ್ತವ್ಯ ಜವಾಬ್ದಾರಿಗಳನ್ನು ತಿಳಿಸುತ್ತಾರೆ. ತನ್ನ ತವರು ಮನೆ, ಅಮ್ಮ, ಆಕೆ ಮಾಡುವ ರುಚಿಯಾದ ಅಡುಗೆಯ ಬಗೆಗಿನ ಬಿಟ್ಟೂ ಬಿಡದೆ ಕಾಡುವ ಮಧುರ ನೆನಪುಗಳನ್ನು ಮೆಲುಕು ಹಾಕುತ್ತಾರೆ.
ಒಟ್ಟಿನಲ್ಲಿ ಇಲ್ಲಿನ ಲೇಖನಗಳೆಲ್ಲವೂ ಸರಳ ಭಾಷೆಯನ್ನು ಹೊಂದಿವೆ. ಬರಹಗಳೆಲ್ಲವೂ ಆಪ್ತವಾಗಿದ್ದು ಓದಿಸಿಕೊಂಡು ಹೋಗುತ್ತವೆ. ಕೆಲವೊಂದು ಬರಹಗಳು ಚಿಂತನೆಗೆ ಹಚ್ಚಿದರೆ ಮತ್ತೊಂದಿಷ್ಟು ನಗು ಮೂಡಿಸುತ್ತವೆ. ಕೆಲವೊಂದು ಸಮಾಜಕ್ಕೊಂದು ಸಂದೇಶವನ್ನೂ ನೀಡುತ್ತವೆ. ಈ ಲೇಖನಗಳನ್ನು ಓದಿ ಮುಗಿಸಿದಾಗ ವಿಜಯ ಸುಬ್ರಹ್ಮಣ್ಯ ಅವರು ಹೇಳುವಂತೆ ಇದು ಷಡ್ರಸಪೂರಿತ ಶುಂಠಿ ಮಿಠಾಯಿಯೇ...
ಚೇತನಾ ಕುಂಬ್ಳೆ
Feed Back: samarasasudhi@gmail.com