ಪುಸ್ತಕ: ಮರುಭೂಮಿಯ ಹೂ
ಲೇಖಕರು: ಜಗದೀಶ್ ಕೊಪ್ಪ
ಬರಹ: ಚೇತನಾ ಕುಂಬಳೆ
'ಮರುಭೂಮಿಯ ಹೂ' ಪುಸ್ತಕದ ವಿಮರ್ಶೆಯೊಂದನ್ನು ಕಳೆದ ವರ್ಷ ಫೇಸ್ಬುಕ್ಕಲ್ಲಿ ಓದಿದಾಗಲೇ ಈ ಪುಸ್ತಕವನ್ನು ಒಮ್ಮೆ ಓದಬೇಕೆಂದು ನಿರ್ಧರಿಸಿದ್ದೆ. ಆದರೆ ಪುಸ್ತಕ ಸಿಕ್ಕಿದ್ದೇ ಕೆಲವು ವಾರಗಳ ಹಿಂದೆ ಅಷ್ಟೇ... ಮರುಭೂಮಿಯ ಹೂ... ವಾರಿಸ್ ಡಿರಿ ಎಂಬ ಜಗದ್ಪ್ರಸಿದ್ಧ ರೂಪದರ್ಶಿಯ ಆತ್ಮಕಥೆ. ಆಕೆ ತನ್ನ ಆತ್ಮಕಥೆಯನ್ನು ಇಂಗ್ಲೀಷ್ ನಲ್ಲಿ ಬರೆದಿದ್ದಳು. ಅದುವೇ ಡಿಸರ್ಟ್ ಫ್ಲವರ್. ಅದನ್ನು ಜಗದೀಶ್ ಕೊಪ್ಪ ಅವರು ಕನ್ನಡಕ್ಕೆ ಅನುವಾದಿಸಿದರು. ಡಾ. ಎನ್ ಜಗದೀಶ್ ಕೊಪ್ಪ ಅವರು ಮದ್ದೂರು ತಾಲೂಕಿನ ಕೊಪ್ಪ ಗ್ರಾಮದವರು. 17 ವರ್ಷಗಳಿಂದ ಉದಯ ಟಿ.ವಿಯ ಉತ್ತರ ಕರ್ನಾಟಕ ಪ್ರಾದೇಶಿಕ ಕಛೇರಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ, ಸೇವೆಯಿಂದ ನಿವೃತ್ತಿಯಾಗಿ ಧಾರವಾಡದಲ್ಲಿ ವಾಸವಾಗಿದ್ದಾರೆ. ಕಾವ್ಯ ತೌಲನಿಕ ಅಧ್ಯಯನ, ಇತಿಹಾಸ,ಜೀವನ ಚರಿತ್ರೆ ಮತ್ತು ಆತ್ಮಚರಿತ್ರೆಗಳ ಅನುವಾದ, ಪರಿಸರ ವಿ ಜ್ಞಾ ನ ಮೊದಲಾದ ವಿಷಯಗಳಲ್ಲಿ ಈವರೆಗೆ 26 ಕೃತಿಗಳನ್ನು ರಚಿಸಿದ್ದಾರೆ.
ಜಗತ್ತಿನ ಜಾಹಿರಾತು ಲೋಕದಲ್ಲಿ ಅಚ್ಚಳಿಯದ ಒಂದು ಹೆಸರು ವಾರಿಸ್ ಡಿರಿ. ಈಕೆ ಆಫ್ರಿಕಾ ಖಂಡದ ಸೋಮಾಲಿಯಾ ದೇಶದ ಒಂದು ಮುಸ್ಲಿಂ ಅಲೆಮಾರಿ ಬುಡಕಟ್ಟು ಜನಾಂಗದಲ್ಲಿ ಹುಟ್ಟಿದವಳು. ಒಬ್ಬ ಅಪ್ಪಟ ಅನಕ್ಷರಸ್ಥೆ. ಕಡು ಬಡತನದಲ್ಲೇ ಹುಟ್ಟಿ ಬೆಳೆದ ವಾರಿಸ್ ಕುರಿ, ಮೇಕೆ, ಒಂಟೆಗಳನ್ನು ಮೇಯಿಸುತ್ತಾ ಬಾಲ್ಯವನ್ನು ಕಳೆದವಳು. ಅವಳ ನೆನಪಿನ ಬುತ್ತಿಯಲ್ಲಿ ಸುಖದ ಕ್ಷಣಗಳಿಗಿಂತ ದುಃಖವೇ ತುಂಬಿತ್ತು. ನಲಿವಿಗಿಂತ ನೋವೇ ಹೆಚ್ಚಿತ್ತು. ಆಕೆ ಕುಟುಂಬಕ್ಕೆ ವಿಧೇಯಳಾಗಿದ್ದರೂ ತನ್ನ ಸ್ವಾಭಿಮಾನಕ್ಕೆ ಆತ್ಮಸಾಕ್ಷಿಗೆ ಧಕ್ಕೆಯುಂಟಾದಾಗ ಬಾಲ್ಯದಲ್ಲೇ ಸಿಡಿದೇಳುತ್ತಿದ್ದವಳು. ಆಕೆ ಆಫ್ರಿಕಾ ರಾಷ್ಟ್ರದ ಬಹುತೇಕ ಮುಸ್ಲಿಂ ಬುಡಕಟ್ಟು ಕುಟುಂಬಗಳಲ್ಲಿ ತಲತಲಾಂತರಗಳಿಂದ ಆಚರಣೆಯಲ್ಲಿರುವ ಒಂದು ಅನಿಷ್ಟ,ಅಮಾನುಷವಾದ ಆಚರಣೆಯ ಬಗ್ಗೆ ಮುಕ್ತವಾಗಿ ವಿವರಿಸುತ್ತಾಳೆ ಅದುವೇ ಯೋನಿ ವಿಚ್ಛೇದನ. ಅಂದರೆ, ಹೆಣ್ಣು ಮಕ್ಕಳಿಗೆ ಋತುಮತಿಯಾಗುವ ಮುನ್ನ ಆಕೆಯ ಯೋನಿಯ ಹೊರಭಾಗದ ಕೆಲವು ಭಾಗ ಮತ್ತು ಗರ್ಭಾಶಯದ ಕೊರಳಿನ ತುದಿಯಲ್ಲಿರುವ ಅವರೆಕಾಳಿನ ಗಾತ್ರದ ಮತ್ತು ಹೆಣ್ಣಿಗೆ ಲೈಂಗಿಕ ಸ್ಪರ್ಶ ಮತ್ತು ಸಂವೇದನೆಯ ಬಹು ಮುಖ್ಯ ಭಾಗವನ್ನು ತೆಗೆದು ಹಾಕಿ ಯೋನಿಯನ್ನು ಹೊಲಿಯುವ ಕ್ರಿಯೆ. ಕಥಾನಾಯಕಿ ವಾರಿಸ್ ಕೂಡ ತನ್ನ 5ನೇ ವರ್ಷದಲ್ಲಿ ಈ ಅಮಾನುಷ ಕೃತ್ಯಕ್ಕೆ ಬಲಿಯಾದವಳು. ಈ ಸಂದರ್ಭದಲ್ಲಿ ಆಕೆ ಅನುಭವಿಸಿದ ನೋವು, ಸಂಕಟ, ಹಿಂಸೆ ಎಲ್ಲವನ್ನೂ ಬಿಡಿಸಿ ಹೇಳುವಾಗ ಮೈಯಲ್ಲಿ ಒಂದು ಸಣ್ಣ ನಡುಕ. ಮಹಿಳೆಯರು ಪರಿಶುದ್ಧರಾಗಿರಬೇಕೆಂದೂ, ಹೆಣ್ಣು ಯೋನಿ ವಿಚ್ಛೇದನ ಕ್ರಿಯೆಗೆ ಒಳಗಾಗದಿದ್ದರೆ, ಗುಪ್ತಾಂಗಕ್ಕೆ ಹಾಕಿದ ಹೊಲಿಗೆ ಬಿಚ್ಚಿ ಹೋಗಿದ್ದರೆ, ಅಂತಹ ಹೆಣ್ಣು ಮಕ್ಕಳು ಸಮಾಜದ ದೃಷ್ಟಿಯಲ್ಲಿ ಅಪವಿತ್ರರು ಅಥವಾ ವ್ಯಭಿಚಾರಿಗಳು ಎಂಬ ನಂಬಿಕೆ ಇದೆ. ಜಗತ್ತು ಎಷ್ಟೇ ಮುಂದುವರಿದಿದ್ದರೂ, ಮನುಷ್ಯ ಎಷ್ಟೇ ವಿದ್ಯಾವಂತನಾಗಿದ್ದರೂ, ಇದರಿಂದ ಎಷ್ಟೋ ಮಂದಿ ಜೀವನದುದ್ದಕ್ಕೂ ನೋವಿನಿಂದ ನರಳುತ್ತಿದ್ದರೂ, ಸಾವನ್ನಪ್ಪುತ್ತಿದ್ದರೂ ಇಂತಹ ಆಚರಣೆಗಳು ನಂಬಿಕೆಗಳು ಇನ್ನೂ ಚಾಲ್ತಿಯಲ್ಲಿವೆ ಎಂಬುದೇ ಅಚ್ಚರಿ. ವಾರಿಸ್ ಈ ಪದ್ಧತಿಗೊಳಗಾದ ಹೆಣ್ಣು ಮಕ್ಕಳು ಅನುಭವಿಸುವ ನೋವು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾಳೆ. ಮುಂದೆ ಲಂಡನ್ನಲ್ಲಿ ವಾರಿಸ್ ತನ್ನ 28 ನೇ ವಯಸ್ಸಿನಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಶಾಶ್ವತವಾಗಿ ಆ ನೋವಿನಿಂದ ಮುಕ್ತಿ ಪಡೆಯುತ್ತಾಳೆ. 13 ವರ್ಷವಾದಾಗ ಅಪ್ಪ 60 ವರ್ಷದ ಮುದುಕನೊಂದಿಗೆ ಆಕೆಯ ಮದುವೆ ಮಾಡಲು ನಿರ್ಧರಿಸಿದಾಗ, ಮಧ್ಯರಾತ್ರಿಯಲ್ಲಿ
ಬದುಕಲೇಬೇಕೆಂಬ ಅದಮ್ಯ ಹಂಬಲದಿಂದ ಮನೆ ಬಿಟ್ಟುಹೋಗುತ್ತಾಳೆ. ಆ ಮರುಭೂಮಿಯ ಕಗ್ಗತಲ ಹಾದಿಯಲ್ಲಿ ಕಲ್ಲು ಮುಳ್ಳು ಹಾವು, ಚೇಳುಗಳನ್ನು ಲೆಕ್ಕಿಸದೆ ಮುಂದಿನ ಭವಿಷ್ಯದ ಅರಿವಿಲ್ಲದೆ ಎಲ್ಲವನ್ನೂ ಧಿಕ್ಕರಿಸಿ ನಡೆಯುತ್ತಾಳೆ. ಇಲ್ಲಿವರೆಗೂ ಕಂಡರಿಯದ ಜಗದೀಶು ನಗರದ ಚಿಕ್ಕಮ್ಮನ ಮನೆಯನ್ನು ಸೇರಿದ ವಾರಿಸ್ ಡೀರಿಗೆ ಲಂಡನಿಗೆ ಹೋಗುವ ಸುವರ್ಣ ಅವಕಾಶ ದೊರೆಯುತ್ತದೆ. ಅದನ್ನು ಸದುಪಯೋಗ ಪಡಿಸಿಕೊಳ್ಳುತ್ತಾಳೆ. ಚಿಕ್ಕಪ್ಪನ ಮನೆಯ ಎಲ್ಲಾ ಕೆಲಸವನ್ನು ಮೌನವಾಗಿ ಮಾಡುತ್ತಾ ತನಗಾದ ನೋವು ಅಪಮಾನಗಳನ್ನು ಸಹಿಸಿಕೊಳ್ಳುತ್ತಾಳೆ. ಅಮ್ಮನಿಗೆ ನೆರವಾಗಬೇಕೆಂಬ ಉದ್ದೇಶದಿಂದ ಮೈಮುರಿದು ದುಡಿಯುತ್ತಾಳೆ. ಚಿಕ್ಕಮ್ಮನ ಮಗಳ ಸಹಾಯದಿಂದ ಇಂಗ್ಲೀಷ್ ಕಲಿಯುತ್ತಾಳೆ. ಫೋಟೊಗ್ರಾಫರ್ ಮಾಲ್ಕಂ ಫೇರ್ ಚೆಲ್ಡ್ ನ ಮೂಲಕ ವಾರಿಸ್ ಜಾಹಿರಾತು ಲೋಕದ ರೂಪದರ್ಶಿಯಾಗುತ್ತಾಳೆ. 90ರ ದಶಕದಲ್ಲಿ ಬಿಳಿಯರಿಂದಲೇ ತುಂಬಿದ್ದ ಜಾಹಿರಾತು ಲೋಕಕ್ಕೆ ಕೃಷ್ಣ ಸುಂದರಿ ವಾರಿಸ್ ಪ್ರವೇಶಿಸುತ್ತಾಳೆ. ಅಲ್ಲಿಂದ ಮುಂದೆ ಒಂದೊಂದೇ ಹೆಜ್ಜೆಯಿರಿಸುತ್ತಾ ರೂಪದರ್ಶಿಯಾಗಿ ಪ್ರಸಿದ್ಧಿ ಹೊಂದುತ್ತಾಳೆ. ಸಿನಿಮಾಗಳಲ್ಲಿ ನಟಿಸುತ್ತಾಳೆ. ಜಾಹಿರಾತು ಲೋಕದಲ್ಲಿ ಮಿನುಗು ತಾರೆಯಾಗಿ ಕಂಗೊಳಿಸುತ್ತಾಳೆ. ಇದರ ಮಧ್ಯೆ ಹಲವಾರು ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸುತ್ತಾಳೆ. ಎಲ್ಲ ಸಂದರ್ಭಗಳಲ್ಲೂ ಆಕೆಯ ಗೆಳತಿಯರು ಜೊತೆಗಿದ್ದು ಸಲಹೆ ಕೊಡುತ್ತಾರೆ, ಮಾರ್ಗದರ್ಶನ ನೀಡುತ್ತಾರೆ , ಕಷ್ಟದಲ್ಲಿ ಸಹಾಯ ಮಾಡುತ್ತಾರೆ , ಸಂತೋಷದಲ್ಲಿ ಭಾಗಿಯಾಗುತ್ತಾರೆ. ಶೂಟಿಂಗಿಗೆ ಇಂಗ್ಲೇಂಡಿಗೆ ಹೋಗ್ಬೇಕಾಗಿ ಬಂದಾಗ ವಿಸಾ ಪಡೆಯಲು ಅಲ್ಲಿನ ವ್ಯಕ್ತಿಯನ್ನೇ ಮದುವೆಯಾಗಬೇಕಾದ ಸಂದರ್ಭ ಬಂದಾಗಲೂ ವಾರಿಸ್ ಹಿಂಜರಿಯದೆ ಮುಂದೆಹೋಗಲು ತೀರ್ಮಾನಿಸುತ್ತಾಳೆ. ಅಲ್ಲಿನ ಒಬ್ಬ ಪ್ರಾಯದ ವ್ಯಕ್ತಿಯನ್ನು ವಿವಾಹವಾಗುತ್ತಾಳೆ. ಅವನಿಂದಾದ ಕಷ್ಟಗಳನ್ನು ಸಮಸ್ಯೆಗಳನ್ನು ಹೇಳುತ್ತಾಳೆ. ಕೊನೆಗೆ ಆಫ್ರಿಕಾದ ಹುಡುಗ ಡೆನ.ನ ಜೊತೆಗೆ ತನ್ನ ಹೊಸ ಬದುಕನ್ನು ಕಟ್ಟಿಕೊಳ್ಳುತ್ತಾಳೆ. ತಾಯ್ತನದ ಸುಖವನ್ನು ಅನುಭವಿಸುತ್ತಾಳೆ. ಮುಂದೊಂದು ದಿನ ವಿಶ್ವಸಂಸ್ಥೆಯ ರಾಯಭಾರಿಯಾಗಿ ಆಯ್ಕೆಗೊಂಡಾಗ ತನ್ನ ಸಮುದಾಯದಲ್ಲಿರು ಅನಿಷ್ಟ ಪದ್ಧತಿಯಾದ ಯೋನಿ ವಿಚ್ಛೇದನದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಾಳೆ. ಪತ್ರಿಕೆ ಹಾಗೂ ಟಿ.ವಿ ಮಾಧ್ಯಮಗಳಲ್ಲಿ ಸಂದರ್ಶನ ನೀಡುವ ಮೂಲಕ ಆ ಪದ್ಧತಿಯನ್ನು ಲೋಕಕ್ಕೆ ಪರಿಚಯಿಸುತ್ತಾಳೆ. 'ಡಿಸರ್ಟ್ ಫ್ಲವರ್ ಫೌಂಡೇಶನ್' ಎಂಬ ಸಂಸ್ಥೆಯನ್ನು ಸ್ಥಾಪಿಸಿ ಆಫ್ರಿಕಾ ರಾಷ್ಟ್ರಗಳಲ್ಲಿ ಸಂಚರಿಸುತ್ತಾ ಜಾಗೃತಿ ಮೂಡಿಸುತ್ತಿದ್ದಾಳೆ. 'ಸೋಮಾಲಿಯಾದಲ್ಲಿ ಹೆಣ್ಣು ಮಕ್ಕಳಿಗೆ ಯೋನಿ ಛೇದನ ಶಿಕ್ಷೆಯನ್ನು ನಿಬರ್ಂಧಿಸಲಾಗಿದೆ' ಎಂಬ ಸುದ್ದಿಯನ್ನು ಕೇಳಬೇಕು. ಆಗ ಈ ಬದುಕು, ಹೋರಾಟ, ಜನ್ಮ ಸಾರ್ಥಕವಾಗುತ್ತದೆ ಎನ್ನುತ್ತಾ ತನ್ನ ಹೋರಾಟವನ್ನು ಮುಂದುವರಿಸುತ್ತಿದ್ದಾಳೆ.
ಒಟ್ಟಿನಲ್ಲಿ ಯಾವುದೇ ಮುಜುಗರ ಪಡದೆ, ಮುಚ್ಚುಮರೆಯಿಲ್ಲದೆ ಬಾಲ್ಯದಲ್ಲಿ ನಡೆದ ಅತ್ಯಾಚಾರ, ಸಂಪ್ರದಾಯ, ಆಚರಣೆಗಳು, ನಂಬಿಕೆಗಳು, ನೋವು, ಹಿಂಸೆ, ಸಂಕಟ ಅಪಮಾನ ಎಲ್ಲವನ್ನು ಮನ ಮುಟ್ಟುವಂತೆ, ತಟ್ಟುವಂತೆ ಹೇಳಿಕೊಳ್ಳುತ್ತಾಳೆ. ತನ್ನ ಸಂಸ್ಕೃತಿಯಲ್ಲಿರುವ ಅನಿಷ್ಟ ಪದ್ಧತಿಯ ವಿರುದ್ಧ ನಡೆಸಿದ ಹೋರಾಟದ ಬದುಕನ್ನು ನಮ್ಮ ಮುಂದೆ ತೆರೆದಿಡುತ್ತಾಳೆ. ಅನಕ್ಷರಸ್ಥಳಾಗಿದ್ದರೂ ತನ್ನ ಬಾಲ್ಯದಲ್ಲೇ ತೆಗೆದುಕೊಂಡ ನಿರ್ಧಾರ , ಇಟ್ಟ ದಿಟ್ಟ ಹೆಜ್ಜೆ ಆಕೆಯ ಬದುಕನ್ನೇ ಬದಲಾಯಿಸಿತು. ಇಂತಹ ಹೆಣ್ಣು ಮಗಳು ಓದುಗರ ಮನಸ್ಸಿನಲ್ಲಿ ಉಳಿದುಬಿಡುವುದರಲ್ಲಿ ಸಂಶಯವಿಲ್ಲ. ಹೆಚ್. ದಂಡಪ್ಪ ಹೇಳುವಂತೆ "ಒಬ್ಬ ಅನಕ್ಷರಸ್ಥಳಾಗಿದ್ದರೂ, ಇಂಗ್ಲೀಷ್ ಕಲಿತು ಅದೆಷ್ಟೋ ಜನರ ಮುಚ್ಚಿದ್ದ ಕಣ್ಣನ್ನು ತೆರೆಯುವಂತೆ ಮಾಡಬಹುದು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟವಳು ವಾರಿಸ್ ಡೀರಿ. ಹಾಗೆಯೇ ಈ ಕೃತಿ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಕೈದೀವಿಗೆಯೂ ಹೌದು".
ಬಿ.ಬಿ.ಸಿ ಚಾನೆಲ್ ಈಕೆಯ ಕುರಿತಾದ 'ನೊಮೆಡ್ ಇನ್ ನ್ಯುಯಾರ್ಕ್' ಎಂಬ ಸಾಕ್ಷ್ಯ ಚಿತ್ರವನ್ನು ನಿರ್ಮಾಣ ಮಾಡಿತು. ಈ ಆತ್ಮಕಥನ ಆಧಾರಿತ ಡೆಸರ್ಟ್ ಫ್ಲವರ್ ಹೆಸರಿನಲ್ಲಿ ಚಿತ್ರವೊಂದು ಹಾಲಿವುಡ್ ನಲ್ಲಿ ನಿರ್ಮಾಣವಾಯಿತು. ವಾರಿಸ್ ಡೀರಿಳ ಈ ಆತ್ಮಕಥನ ಇಂದು ಜಗತ್ತಿನ 85 ಭಾಷೆಗಳಲ್ಲಿ ಪ್ರಕಟಗೊಂಡಿದೆ.
ಲೇಖಕಿ: ಚೇತನಾ ಕುಂಬ್ಳೆ
FEEB BACK: samarasasudhi@gmail.com