ಪುಸ್ತಕ: ಅಕ್ಷರ ದೀಪ (ಕವನ ಸಂಕಲನ)
ಲೇಖಕರು: ಅನ್ನಪೂರ್ಣ ಬೆಜಪ್ಪೆ
ಬರಹ:ಚೇತನಾ ಕುಂಬಳೆ.
*ಅಕ್ಷರ ದೀಪದ ಬೆಳಕಿನಲ್ಲಿ ಕಂಡಷ್ಟು...*
ಕವನಗಳ ಮೂಲಕ ಜಾಲತಾಣದಲ್ಲಿ ಪರಿಚಿತರಾದವರು ಕವಯತ್ರಿ ಅನ್ನಪೂರ್ಣ ಬೆಜಪ್ಪೆಯವರು. ಕಳೆದ ವರುಷ ಫೆ. 4ರಂದು ಪುತ್ತೂರಿನ ಪುರಭವನದಲ್ಲಿ 'ಪುತ್ತೂರು ಸಾಹಿತ್ಯ ವೇದಿಕೆ'ಯ ವತಿಯಿಂದ ನಡೆದ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ನಮ್ಮಿಬ್ಬರ ಪ್ರಥಮ ಭೇಟಿಯಾಗಿತ್ತು. ಅಲ್ಲಿಂದ ಮುಂದೆ ಕೆಲವೊಂದು ಕವಿಗೋಷ್ಠಿಗಳಲ್ಲಿ ಭೇಟಿಯಾಗಿದ್ದೆವು. ಕಳೆದ ಆದಿತ್ಯವಾರ ಹಿರಿಯ ಸಾಹಿತಿಗಳೂ ಶಿಕ್ಷಣ ತ???ರೂ ಆಗಿರುವ ವಿ.ಬಿ ಕುಳಮರ್ವ ಅವರ ಮನೆಯಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿ ನಮ್ಮ ಪುಸ್ತಕಗಳನ್ನು ವಿನಿಮಯ ಮಾಡಿಕೊಂಡಿದ್ದೆವು.
ಅನ್ನಪೂರ್ಣ ಬೆಜಪ್ಪೆಯವರು ಕವನ, ಕಥೆ, ಹನಿಗವನ, ಶಿಶುಗೀತೆ, ಭಾವಗೀತೆ ಗಜಲ್ ಹೀಗೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ರಚನೆಗಳನ್ನು ಮಾಡುತ್ತಾ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. 2018ರ ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯಲ್ಲಿ ಬಹುಮಾನವನ್ನೂ ಪಡೆದುಕೊಂಡಿದ್ದಾರೆ. ಅನ್ನಪೂರ್ಣ ಅವರು ಕಾಸರಗೋಡಿನಲ್ಲಿ ಮೊದಲ ಬಾರಿಗೆ ಕನ್ನಡ ಸಾಹಿತ್ಯದಲ್ಲಿ ಹೊಸ ಪ್ರಕಾರವಾಗಿರುವಂಥ ಗಜಲನ್ನು ಬರೆಯಲು ಪ್ರಾರಂಭಿಸಿದವರು.
ಇತ್ತೀಚೆಗಷ್ಟೇ ಅವರು 'ಅಕ್ಷರ ದೀಪ' ಎಂಬ ತಮ್ಮ ಚೊಚ್ಚಲ ಕವನ ಸಂಕಲನವನ್ನು 'ಅಕ್ಷರ ದೀಪ ಪ್ರಕಾಶನ'ದಿಂದ ಪ್ರಕಟಿಸಿದ್ದಾರೆ. ನಾವು ನಮ್ಮವರು ಬಳಗದವರಾದ ಪತ್ರಕರ್ತರು ಗಣೇಶ ಪ್ರಸಾದ್ ಪಾಂಡೇಲು ಅವರು ಈ ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ. ಹಿರಿಯ ಲೇಖಕಿಯೂ, ಕೊಡಗಿನ ಗೌರಮ್ಮ ಕಥಾಸ್ಪರ್ಧೆಯ ಸಂಚಾಲಕಿಯಾಗಿರುವ ವಿಜಯ ಸುಬ್ರಹ್ಮಣ್ಯ ಅವರು ಬೆನ್ನುಡಿಯನ್ನು ಬರೆದು ಪ್ರೋತ್ಸಾಹ ನೀಡಿದ್ದಾರೆ. ಅನ್ನಪೂರ್ಣ ಅವರ ಆತ್ಮೀಯ ಗೆಳತಿಯಾದ ಶ್ರೀಮತಿ ಪ್ರಸನ್ನಾ ವಿ. ಚೆಕ್ಕೆಮನೆಯವರ ಅಕ್ಕರೆಯ ನುಡಿಗಳಲ್ಲಿ ಲೇಖಕಿಯ ಬಗೆಗಿನ ಅಪಾರವಾದ ಪ್ರೀತಿ ಹಾಗೂ ಅಭಿಮಾನವನ್ನೂ ಕಾಣಬಹುದು.
ಅಕ್ಷರ ದೀಪ ಕವನ ಸಂಕಲನದಲ್ಲಿ ಕವಿತೆಗಳಿವೆ, ರಾಗ ಹಾಕಿ ಹಾಡಬಲ್ಲ ಭಾವಗೀತೆಗಳಿವೆ. ಗಜಲ್ ಗಳಿವೆ, ಹನಿಗವನಗಳಿವೆ. ಅನ್ನಪೂರ್ಣ ಅವರು ಮೊದಲ ಕವನ 'ಅರ್ಪಣೆ'ಯಲ್ಲಿ ತಮ್ಮ ಗುರುಗಳಾದ ಶ್ರೀ ರಾಘವೇಶ್ವರ ಸ್ವಾಮಿಗಳಿಗೆ ಗುರು ನಮನ ಸಲ್ಲಿಸಿದ್ದಾರೆ. ಅಲ್ಲಿಂದ ಮುಂದೆ ಭಕ್ತಿ ಭಾವದ ಲೋಕವೊಂದು ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ವಿಘ್ನ ವಿನಾಶಕ ಗಣಪತಿ, ಶಿವ, ರಾಮ, ಹನುಮಂತ , ಕೃಷ್ಣ, ಲಕ್ಷ್ಮಿ ಮೊದಲಾದ ದೇವರುಗಳನ್ನು ಭಕ್ತಿಯಿಂದ ಕವನಗಳಲ್ಲಿ ನೆನೆದುಕೊಳ್ಳುತ್ತಾರೆ. ಗೋ ಸಂರಕ್ಷಣೆಯ ಜಾಗೃತಿ ಮೂಡಿಸುವ ಕವನಗಳೂ ಇಲ್ಲಿವೆ. ಜೀವನ ಮೌಲ್ಯಗಳನ್ನು ಹೇಳುವ ಕವನಗಳಿವೆ. ಬಣ್ಣ ಬಣ್ಣದ ಹೂಗಳನ್ನು ವರ್ಣಿಸುತ್ತಾ ಹೂ ಬನದ ರಾಣಿಯರೆಂದು ಅವುಗಳನ್ನು ವರ್ಣಿಸುವರು.ಇಲ್ಲಿನ ಕವನಗಳಲ್ಲಿ ಹೂವಿಂದ ಹೂವಿಗೆ ಹಾರಿ ಕಣ್ಮನ ಸೆಳೆವ ಚಿಟ್ಟೆಗಳಿವೆ. ಮನೋಹರವಾದ ಮುಂಜಾನೆ, ಮುಸ್ಸಂಜೆ, ಪ್ರಕೃತಿ ವಿಸ್ಮಯದ ವರ್ಣನೆಗಳಿವೆ. ಪ್ರೀತಿ ಪ್ರೇಮ, ವಿರಹ ಮುನಿಸು ಹೀಗೆ ನವಿರು ಭಾವಗಳಿವೆ, ಕೃಷ್ಣನನ್ನಗಲಿ ವಿರಹವೇದನೆ ಅನುಭವಿಸುವ ರಾಧೆಯಿದ್ದಾಳೆ, ವಾತ್ಸಲ್ಯಮಯಿ ತಾಯಿಯನ್ನು ನೆನೆಯುತ್ತಾರೆ. ಅಮ್ಮ ಮಡಿಲಾದರೆ, ಅಪ್ಪ ಹೆಗಲು ಎನ್ನುತ್ತಾರೆ. ಮನುಷ್ಯ ಬೆಳಕು ನೀಡುವ ಸೂರ್ಯನಂತೆ, ತಂಪನೀಡುವ ಚಂದ್ರನಂತೆ, ಮುಳ್ಳ ನಡುವೆ ಅರಳಿ ನಗುವ ಹೂವಂತೆ, ನೆರಳು ನೀಡುವ ಮರದಂತಿರಬೇಕು. ಒಟ್ಟಿನಲ್ಲಿ ಇನ್ನೊಬ್ಬರಿಗೆ ಉಪಕಾರಿಯಾಗಿರಬೇಕು ಎನ್ನುತ್ತಾರೆ. ಮನೆಮನವನ್ನು ಬೆಳಗುವ ಮಗಳಿಗೆ ತಾಯಿಯ ಉಪದೇಶದ ಮಾತುಗಳಿವೆ. ನಲ್ಲನ ಬಗ್ಗೆ, ಪ್ರಿಯತಮೆ, ಸಂಗಾತಿ, ಗೆಳತಿಯ ಬಗ್ಗೆಯೂ ಕವನ ಬರೆಯುತ್ತಾರೆ. ಹರುಷವನ್ನು ಹೊತ್ತು ತರುವ ಹೊಸ ವರುಷದ ಬಗ್ಗೆ ಕವನವಿದೆ. ಕವನಗಳಲ್ಲಿ ಕನಸುಗಳನ್ನೂ ತುಂಬುತ್ತಾರೆ. ಪ್ರೀತಿ ಪ್ರೇಮಕ್ಕೆ ಮಾತ್ರ ಆದ್ಯತೆ ನೀಡಿದ್ದ ಗಜಲ್ ಇಂದು ವಸ್ತು ವಿಷಯದಿಂದ ವಿಸ್ತಾರಗೊಂಡಿದೆ. ಇವರ ಗಜಲ್ ಗಳಲ್ಲಿ ನಿಸರ್ಗದ ಚೆಲುವಿದೆ, ನವಿರಾದ ಪ್ರೀತಿಯ ಭಾವವಿದೆ, ಭಕ್ತಿಯಿದೆ, ಬದುಕಿನ ವಾಸ್ತವವಿದೆ. ಹಾಗೆಯೇ ನೆನಪು, ಸೂರ್ಯ, ಚಂದ್ರ, ಮುಂಜಾನೆ, ಪ್ರಕೃತಿ ಮೊದಲಾದ ವಿಷಯಗಳ ಕುರಿತ ಹನಿಗವನಗಳಿವೆ.
ಒಟ್ಟಿನಲ್ಲಿ ಈ ಸಂಕಲನ ಕವನ ಹನಿಗವನ, ಗಜಲ್, ಭಕ್ತಿಗೀತೆ, ಭಾವಗೀತೆ ಹೀಗೆ ಹಲವು ಪ್ರಕಾರಗಳನ್ನೊಳಗೊಂಡ ಒಂದು ವಿಶಿಷ್ಟ ಕೃತಿಯಾಗಿದೆ. ಇವರಿಂದ ಇನ್ನಷ್ಟು ಸಾಹಿತ್ಯ ರಚನೆಗಳು ಸೃಷ್ಟಿಯಾಗಲಿ, ಪುಸ್ತಕ ರೂಪ ಪಡೆದು ಓದುಗರಿಗೆ ತಲುಪಲಿ ಎನ್ನುವುದು ಆಶಯ.
ಬರಹ:-ಚೇತನಾ ಕುಂಬ್ಳೆ
FEEDBACK:samarasasudhi@gmail.com