ಮೈಸೂರು: ಮೈಸೂರು ರಾಜಮನೆತನದ 25ನೇ ಹಾಗೂ ಕೊನೆಯ ರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ಮೈಸೂರು ರಾಜವಂಶಸ್ಥರು ನಿರ್ಧರಿಸಿದ್ದು, ಸಕಲ ಸಿದ್ಧತೆ ನಡೆಸಿದ್ದಾರೆ.
ಈ ಸಂಬಂಧ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು, ಜುಲೈ 18ರಂದ ಜಯಚಾಮರಾಜೇಂದ್ರ ಒಡೆಯರ್ ಜನ್ಮಶತಮಾನೋತ್ಸವ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗವುದು ಎಂದರು.
ಜುಲೈ 18ರಂದು ರಾಜ್ಯಪಾಲ ವಜುಭಾಯ್ ವಾಲಾ ಅವರು ಅರಮನೆಯ ದರ್ಬಾರ್ ಹಾಲ್ ಜನ್ಮಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬೆಂಗಳೂರಿನಲ್ಲಿ ಜುಲೈ 20ರಂದು ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಮೋದಾದೇವಿ ತಿಳಿಸಿದರು.
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಮೋದಾದೇವಿ ಅವರು, ದೊಡ್ಡಕೆರೆ ಪಕ್ಕದ ಜಾಗದ ಖಾತೆ ಮಾಡಿಸಲು ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೋರ್ಟ್ ಆದೇಶ ನಮ್ಮ ಪರವಾಗಿದ್ದರೂ ಅದನ್ನು ಸರ್ಕಾರ ಉಲ್ಲಂಘನೆ ಮಾಡುತ್ತಿದೆ ಎಂದರು.
ಹಳಬರು ಒಂದು ರೀತಿ ತೊಂದರೆ ಕೊಟ್ಟರೆ, ಹೊಸಬರಿಂದ ಮತ್ತೊಂದು ರೀತಿ ತೊಂದರೆ ಆಗುತ್ತಿದೆ. ನನಗೆ ರಾಜಕೀಯ ಗೊತ್ತು. ಆದರೆ ರಾಜಕಾರಣ ಮಾಡಲು ಬರಲ್ಲ. ಅದಕ್ಕಾಗಿ ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದರು.