HEALTH TIPS

ಸಮರಸ ಈ ಹೊತ್ತಿಗೆ ಹೊಸ ಹೊತ್ತಗೆ-ಸಂಚಿಕೆ 19-ಪುಸ್ತಕ ಎದೆಯೊಳಗಿನ ಇಬ್ಬನಿ

     
         ಪುಸ್ತಕ : ಎದೆಯೊಳಗಿನ ಇಬ್ಬನಿ
         ಲೇಖಕರು: ದೊಡ್ಡಕಲ್ಲಹಳ್ಳಿ ನಾರಾಯಣಪ್ಪ
          ಲೇಖನ: ಚೇತನಾ ಕುಂಬಳೆ
      *ಎದೆಗಿಳಿವ ಇಬ್ಬನಿಗಳು*

     ದೊಡ್ಡಕಲ್ಲಹಳ್ಳಿ  ನಾರಾಯಣಪ್ಪ ಎಂಬ ಕಾವ್ಯನಾಮದ ಎಂ. ನಾರಾಯಣಪ್ಪನವರು  ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ದೊಡ್ಡಕಲ್ಲಹಳ್ಳಿಯವರು. ಪ್ರಸ್ತುತ ಬೆಂಗಳೂರಿನ ಕುವೆಂಪು.ಸ್ಮಾರಕ ವಿದ್ಯಾಕೇಂದ್ರದಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಾಗಲೇ 'ಬೆಂಗಾಡು', 'ಉತ್ತೀತ ಹಾಡು' ಎಂಬ ಕವನ ಸಂಕಲನಗಳು ಬಿಡುಗಡೆಯಾಗಿದೆ. ಈ 'ಎದೆಯೊಳಗಿನ ಇಬ್ಬನಿ' ಅವರ ಮೂರನೆ ಕೃತಿ.
   ಇದರಲ್ಲಿ ಗಜಲ್ ಗಳು ಅಲ್ಲದೆ ಒಂದಷ್ಟು ಮುಕ್ತಕಗಳೂ ಇವೆ.  ' ನೆಟ್ಟ ಎಲ್ಲ ಪದವೂ ಕಣ್ಣು ಬಿಡುವ ವಿಸ್ಮಯಕೆ ಹಾತೊರೆದು' ಎಂಬ ಮನೋಹರ ಶೀರ್ಷಿಕೆಯಲ್ಲಿ ಮನ ಮುಟ್ಟುವಂತೆ ಕವಿ ವಾಸುದೇವ ನಾಡಿಗ್ ಅವರು ಮುನ್ನುಡಿಯನ್ನು ಬರೆದಿದ್ದಾರೆ. ಮೊದಲ ಬಾರಿಗೆ ಅವರ ಮನ್ಪುಡಿಯ ಬರಹವನ್ನು ಗಾಯತ್ರೀ ರಾಘವೇಂದ್ರ ಅವರ 'ಮುಂಜಾವದ ಹನಿಗಳು' ಸಂಕಲನದಲ್ಲಿ ಓದಿದ್ದೆ. ತುಂಬಾ ಇಷ್ಟ ಪಟ್ಟಿದ್ದೆ. ಈಗ ಅವರ ಬರಹವನ್ನು ಮತ್ತೊಮ್ಮೆ ಓದುವ ಅವಕಾಶ.ಅವರ ಬರಹಕ್ಕೆ ಒಂದು ಸೆಳೆಯುವ ಶಕ್ತಿ ಇದೆ. ಮತ್ತೊಮ್ಮೆ ಓದಬೇಕೆನಿಸುವಷ್ಟು ಅವರ ಬರಹ ಆಪ್ತವಾಗಿರುತ್ತವೆ. ಗಜಲ್ ಲೋಕದಲ್ಲಿ ಕಲ್ಲಳ್ಳಿಯೆಂದೇ ಗುರುತಿಸಿಕೊಂಡಿರುವ ನಾರಾಯಣಪ್ಫ ಅವರ ಜೀವದ ಗೆಳೆಯ ಪ್ರಸನ್ನ ಡಿ.ಟಿ ಅವರ ಮನದಾಳದ ಮಾತುಗಳಲ್ಲಿ ಅವರಿಬ್ಬರ ನಡುವಿನ ಗಾಢವಾದ ಪ್ರೀತಿ ಕಾಣಿಸುತ್ತದೆ. ಇದಕ್ಕೆ ಶಿಕ್ಷಕರೂ ಕವಿಯೂ ಆಗಿರುವ ನಾ ಗುರುಮೂರ್ತಿ ಅವರು ಬೆನ್ನುಡಿ ಬರೆದು ಪ್ರೋತ್ಸಾಹಿಸಿದ್ದಾರೆ.
   ಈ ಸಂಕಲನದಲ್ಲಿ 36 ಗಜಲ್ ಗಳೊಂದಿಗೆ ಹಲವು ಮುಕ್ತಕಗಳು ಸೇರಿಕೊಂಡಿವೆ. ಮುಕ್ತಕಗಳನ್ನು ಓದಿದಾಗ ಮೊದಲು ಕಾಡಿದ ಸಂಶಯ ಏನೆಂದರೆ, ಹನಿಗವನಕ್ಕೂ ಮುಕ್ತಕಗಳಿಗೂ ಇರುವ ಸಂಬಂಧವೇನು? ಎಂಬುದು. ಅವುಗಳೆಲ್ಲವೂ ಹನಿಗವನವನ್ನು ಹೋಲುತ್ತಿದ್ದವು. ಹಾಗಾಗಿ ಗೂಗಲ್ ನಲ್ಲಿ ಹುಡುಕಿದಾಗ ಆ ಸಂಶಯ ನಿವಾರಣೆಯೂ ಆಯಿತು.
      ಮುಕ್ತಕ ಸಾಹಿತ್ಯ : ಕನ್ನಡ ಸಾಹಿತ್ಯದಲ್ಲಿ  ಅದರಲ್ಲೂ ಪ್ರಾಚೀನ ಕನ್ನಡದಲ್ಲಿ ಇದನ್ನು ವಚನ, ಮಕ್ತಕ, ಚಾಟು ಪದ್ಯ, ಇಡುಕುಂಗಬ್ಬ ಎಂದು ಕರೆದರೆ, ಹೊಸಗನ್ನಡದಲ್ಲಿ ಹನಿಗವನ, ಮಿನಿಗವನ ಚುಟುಕ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಸಂಸ್ಕೃತದಲ್ಲಿ ಲೋಕೋಕ್ತಿ, ಶೋಕಗೀತೆ, ಎಂದೂ, ತಮಿಳಿನಲ್ಲಿ ನಾಟುನುಡಿ ಎಂದೂ, ತೆಲುಗಲ್ಲಿ ಚಾಟುಪದ್ಯ ಎಂದೂ , ಉರ್ದುವಿನಲ್ಲಿ ಶಾಯರಿ ಎಂದೂ, ಪ್ರಾಕೃತದಲ್ಲಿ ಗಾಹೆ ಎಂದೂ, ಜಪಾನ್ ಭಾಷೆಯಲ್ಲಿ ಹೈಕು ಎಂದೂ ಕರೆಯುತ್ತಾರೆ.
      ಹೀಗೆ ಒಂದೊಂದು ಪುಸ್ತಕವನ್ನು ಓದಿದಾಗ ಏನಾದರೊಂದು ಹೊಸ ವಿಷಯಗಳು ಕಲಿಯಲು ಸಿಗುತ್ತವೆ.
  ಇವರ ಬರಹಗಳಲ್ಲಿ ಬದುಕಿನ ಅನುಭವಗಳಿಂದ ಪಡೆದ ಅರಿವುಗಳಿವೆ. ಇಲ್ಲಿ ಒಂದಷ್ಟು ನೋವು, ನಗು ಖುಷಿ ಮುಂತಾದ ಭಾವಗಳು ಮೇಳೈಸಿವೆ. ಕಾಡುವ ನೆನಪುಗಳಿವೆ. 'ನೆನಪುಗಳ ಸಿರಿ ಇಲ್ಲದವನು ಶವತಾನೆ' ಎಂದು ಕೇಳುತ್ತಾರೆ.  ಅಲ್ಲಿ ಮೊದಲ ಸ್ಪರ್ಶದ ಅನುಭವ ಇದೆ, ನಿರೀಕ್ಷೆ, ನಿರಾಸೆಯಿದೆ. ಅವರು ತಮ್ಮ ಗಜಲ್ ನಲ್ಲಿ ಕಾಫಿಯಾನ ಗಜಲ್ ಗಳಿಗೆ ಹೆಚ್ಚಿನ ಆಧ್ಯತೆ ನೀಡಿರುವುದನ್ನು ಕಾಣಬಹುದು.  ನಿರ್ದಾಕ್ಷಿಣ್ಯವಾಗಿ ಹರಿಯುವ ಕಾಲ ಮದುವೆಗೆ ಹೊರಟವರು ಮಸಣಕ್ಕೆ ತೋರಣವಾದಾಗ ಕ್ಷಣ ಹೊತ್ತು ನಿಲ್ಲುವುದಿಲ್ಲ, ಹಾಗೆಯೇ ಹಾಲು, ನೀರು, ಮಾತಿಗೆ ಕಾಯದ ಕಾಲ ತಾನು ಬರೆದ ಗಜಲಿಗೆ ಕಾಯಬಹುದೇ ಎಂದು ಶಂಕಿಸುತ್ತಾರೆ.
ಕಂಬನಿಯಲ್ಲಿ, ಅವಳಿಗೆ ಕಾಣಿಸದಿರೆಂದೂ,
ನಿಟ್ಟುಸಿರಲ್ಲಿ, ನೋವುಗಳನ್ನು ಬಯಲು ಮಾಡದಿರೆಂದೂ,
ಭಾವಗಳಲ್ಲಿ, ಭ್ರಮೆಯ ಹೊಳೆ ಹರಿಸಿ ನಗದಿರೆಂದೂ
ನಿರಾಸೆಗಳಲ್ಲಿ, ವಿರಸಗಳ ಬಿತ್ತಿ ಬೆಳೆಯದಿರೆಂದೂ
ಸಂತಸದಲ್ಲಿ ದಾರಿಹೋಕನಂತೆ ಬಂದು ಹೋಗದಿರಿಯೆಂದೂ ಕಳಕಳಿಯಿಂದ ವಿನಂತಿಸಿಕೊಳ್ಳುವುದನ್ನು ಕಾಣಬಹುದು. ಅವರು ಬದುಕೆಂದರೆ ಹೆಸರು, ಕೆಸರು,ಖೀರು ಏನೂ ಅಲ್ಲ ಎನ್ನುತ್ತಾರೆ. ಅವರು ಯಾವತ್ತೃ ಸುಮ್ಮನಿರಲು ಬಯಸದೆ, ಲೋಕ ಹುಚ್ಚನೆಂದು ಕರೆದರೂ ಪರವಾಗಿಲ್ಲ ತನ್ನೊಳಗಿನ ಕಾವ್ಯದೊಂದಿಗೆ ನಿತ್ಯವೂ ಹರುಟುತ್ತೇನೆ ಎನ್ನುವಲ್ಲಿ ಜೀವನದ ಜಂಜಾಟದಲ್ಲಿ ಮುಳುಗಿದ್ದರೂ ಒಂದಷಾಟು ಸಮಯವನ್ನು ಕಾವ್ಯಕ್ಕಾಗಿ ಮೀಸಲಿಟ್ಟಿರುವದನ್ನೂ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವುದನ್ನೂ ಕಾಣಬಹುದು. ಕವಿತೆಗಿಂತ ಮತ್ತೇರಿಸುವ ಮಧು ಮತ್ತೊಂದಿಲ್ಲ ಎನ್ನುತ್ತಾರೆ.  "ಹಗುರವಾಗುವ ನೆಪಕ್ಕಾಗಿ ಬರೆಯುತ್ತೇನೆ" ಎನ್ನುವಲ್ಲಿ ತಮ್ಮ ಬರವಣಿಗೆ ಉದ್ದೇಶವನ್ನು ಸ್ಪಷ್ಟಪಡಿಸುತ್ತಾರೆ. ಹಾಗೆಯೇ, "ನಿನ್ನ ಮೌನ ಬಂಗಾರದ ಸೂಜಿ ನನ್ನ ಗಾಯಗೊಳಿಸಿದೆ
ಸಾವು- ನೋವಿಗೆ ಅಂಜದ ಕಲ್ಲಳ್ಳಿ ಮೌನಕ್ಕೆ ಅಂಜುತ್ತಾನೆ" ಎಂಬಲ್ಲಿ ಲೇಖಕರು ಮೌನದ ಬಗೆಗೆ ನೀಡಿದ ವ್ಯಾಖ್ಯಾನವನ್ನು ಗಮನಿಸಬಹುದು. ಇವರ ಗಜಲ್ ಗಳಲ್ಲಿ,ಸಂಕ್ಷಿಪ್ತತೆಯನ್ನು ಕಾಣಬಹುದು.

ಒಂದಷ್ಟು ಕಾಡಿದ್ದು-
" ನನಗಂತೂ ಸಾಕು ಸಾಕಾಗಿದೆ ನೆಲವೇ
ನಿನ್ನ ತಿಕ್ಕಲು ತಾಳಕ್ಕೆ ಕುಣಿದೂ ಕುಣಿದೂ"

"ಹಸಿವಿನಲ್ಲಿ ಹುಟ್ಟಿದ
ಕಾವ್ಯ
ಅನ್ನವಾಗಲಿಲ್ಲ"

"ನಿನ್ನ ಕೊನೆಯ ಉಸಿರು
ಒಮ್ಮೆಯಾದರೂ
ನನ್ನನ್ನು ತಾಗಿ
ಸಂತೈಸಲಿ"

"ಕಾಲ ಸದಾ ಸಿದ್ಧವಾಗಿರುತ್ತದೆ
ಗಾಯಕ್ಕೆ
ನೆನಪಿನ
ಉಪ್ಪೀ ಸವರಲು"

"ಬರೆಯುವುದು ಎಂದರೆ ಬೇಯುವುದು ಎಂದರ್ಥ
ಓದುವುದೂ ಸಹ ಅಗೋ ನಿನ್ನ ಕಣ್ಣಲ್ಲಿ ಬೆಂಕಿಯಿದೆ"

ಒಟ್ಟಿನಲ್ಲಿ ಇಲ್ಲಿಯ ಇಬ್ಬನಿಗಳಿಗೆ ಹೊಳೆವ ಶಕ್ತಿಯಿದೆ. ಕೆಲವೊಂದು ಸದ್ದಿಲ್ಲದೆ ಎದೆಗಿಳಿದು ಬಿಡುತ್ತವೆ. ಮನಸ್ಸು ಹೃದಯವನ್ನು ತಣಿಸುತ್ತವೆ.

                                                                  ಬರಹ: ಚೇತನಾ ಕುಂಬ್ಳೆ
           FEEDBACK: samarasasudhi@gmail.com

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries