ನವದೆಹಲಿ: ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಅಮಿತಾಭ್ ಕಾಂತ್ ಅವರ ಅಧಿಕಾರವಧಿಯನ್ನು ಕೇಂದ್ರ ಸರ್ಕಾರ ಎರಡು ವರ್ಷಗಳ ಕಾಲ ವಿಸ್ತರಿಸಿದೆ.
ಜೂನ್ 30 ಕ್ಕೆ ಅಂತ್ಯಗೊಳ್ಳುತ್ತಿದ್ದ ಅಮಿತಾಭ್ ಕಾಂತ್ ಅವರ ಅವಧಿಯನ್ನು ಜೂನ್ 30, 2021ರ ವರೆಗೆ ವಿಸ್ತರಿಸಲು ಸಂಪುಟ ನೇಮಕಾತಿ ಸಮಿತಿ ಒಪ್ಪಿಗೆ ನೀಡಿದೆ ಎಂದು ಸಿಬ್ಬಂದಿ ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಈ ಹಿಂದಿನ ನಿಯಾಮಾವಳಿಗಳಂತೆ ನೀತಿ ಆಯೋಗದ ಸಿಇಒ ಅವಧಿಯನ್ನು ಜೂನ್ 30, 2021ವರೆಗೂ ವಿಸ್ತರಿಸಲು ಕೇಂದ್ರ ಸಂಪುಟ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ.
ಅಮಿತಾಭ್ ಕಾಂತ್ 1980ರ ಬ್ಯಾಚ್ ನ ಕೇರಳ ಕೇಡರ್ ನ ಐಎಎಸ್ ಅಧಿಕಾರಿಯಾಗಿದ್ದಾರೆ. 2016ರಲ್ಲಿ ಎರಡು ವರ್ಷಗಳ ಅವಧಿಗೆ ನೀತಿ ಆಯೋಗದ ಸಿಇಒ ಆಗಿ ನೇಮಕಗೊಂಡಿದ್ದ ಅಮಿತಾಭ್ ಕಾಂತ್ ಅವಧಿಯನ್ನು ಎರಡನೇ ಬಾರಿ ವಿಸ್ತರಿಸಲಾಗಿದೆ.