ನವದೆಹಲಿ: 2005ರ ಅಯೋಧ್ಯಾ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಯಾಗ್ ರಾಜ್ ವಿಶೇಷ ಕೋರ್ಟ್ ನಾಲ್ವರು ಆಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಒಬ್ಬ ಆರೋಪಿಯನ್ನು ಖುಲಾಸೆಗೊಳಿಸಿ ಮಂಗಳವಾರ ತೀರ್ಪು ನೀಡಿದೆ.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ವಿಶೇಷ ಕೋರ್ಟ್, 14 ವರ್ಷಗಳ ಬಳಿಕ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಐದನೇ ಆರೋಪಿ ಮೊಹಮ್ಮದ್ ಅಜಿಜ್ ಅವರನ್ನು ಖುಲಾಸೆಗೊಳಿಸಿದೆ.
2005ರ ಜುಲೈನಲ್ಲಿ ಅಯೋಧ್ಯೆಯಲ್ಲಿನ ವಿವಾದಿತ ರಾಮ ಜನ್ಮಭೂಮಿಯಲ್ಲಿದ್ದ ದೇವಾಲಯದ ಮೇಲೆ ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ದಾಳಿ ನಡೆಸಿತ್ತು. ಈ ಉಗ್ರರು ಅಂದು ಭಕ್ತರ ರೀತಿ ಆಗಮಿಸಿದ್ದು, ಅಯೋಧ್ಯೆಯ ಹೊರಭಾಗದಲ್ಲಿ ಜೀಪ್ ವೊಂದನ್ನು ಬಾಡಿಗೆ ಪಡೆದಿದ್ದರು.
ಜೀಪ್ ಅಯೋಧ್ಯೆಯ ಗಡಿಭಾಗದಲ್ಲಿ ಸ್ಫೋಟಿಸಿದ್ದರು. ತದನಂತರ ಉಗ್ರರು ರಾಕೆಟ್ ಲಾಂಚರ್ ಬಳಸಿ ದಾಳಿ ನಡೆಸಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ್ದ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುವ ಮೂಲಕ ಐವರು ಉಗ್ರರನ್ನು ಹೊಡೆದುರುಳಿಸಿದ್ದರು. ಪೊಲೀಸ್ ತನಿಖೆಯ ವೇಳೆ ಇನ್ನುಳಿದ ಐವರು ಉಗ್ರರನ್ನು ಬಂಧಿಸಿದ್ದರು.
ಇರ್ಫಾನ್, ಆಶಿಕ್ ಇಕ್ಬಾಲ್ ಅಲಿಯಾಸ್ ಫಾರೂಖ್, ಶಕೀಲ್ ಅಹ್ಮದ್, ಮೊಹಮ್ಮದ್ ನಸೀಂ ಮತ್ತು ಮೊಹಮ್ಮದ್ ಅಜಿಜ್ ಸೇರಿದಂತೆ ಐವರು ಉಗ್ರರನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದರು.
ಭದ್ರತೆಯ ಕಾರಣದಿಂದ ಮಂಗಳವಾರ ತೀರ್ಪು ಪ್ರಕಟಿಸುವ ವೇಳೆ ಅಪರಾಧಿಗಳನ್ನು ಕೋರ್ಟ್ ಗೆ ಹಾಜರುಪಡಿಸಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ. ಸದ್ಯ ನಾಲ್ವರು ಅಪರಾಧಿಗಳು ಪ್ರಯಾಗರಾಜ್ ನ ನೈನಿ ಸೆಂಟ್ರಲ್ ಜೈಲಿನಲ್ಲಿದ್ದಾರೆ.