HEALTH TIPS

ಸಮರಸ ಈ ಹೊತ್ತಿಗೆ ಹೊಸ ಹೊತ್ತಗೆ-ಸಂಚಿಕೆ-20-ಕೃತಿ:ಸುರಗಿ

 
         ಪುಸ್ತಕ: ಸುರಗಿ (ಹನಿಗವನ ಸಂಕಲನ)
         ಲೇಖಕರು: ಹರೀಶ್ ಸುಲಾಯ ಒಡ್ಡಂಬೆಟ್ಟು
         ಬರಹ:ಚೇತನಾ ಕುಂಬಳೆ
         ಸಾರಸ್ವತ ಲೋಕದಲ್ಲಿ ಹ.ಸು. ಒಡ್ಡಂಬೆಟ್ಟು ಎಂಬ ಕಾವ್ಯನಾಮದಿಂದ ಗುರುತಿಸಿಕೊಂಡಿರುವ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರು ವೃತ್ತಿಯಲ್ಲಿ ಶಿಕ್ಷಕರಾಗಿರುವರು. ಸಾಮಾಜಿಕ-ಧಾರ್ಮಿಕ ಕಾರ್ಯಕರ್ತ, ಸಂಘಟಕ, ನಿರೂಪಕ, ನಟ , ಯಕ್ಷಗಾನ ಕಲಾವಿದ ಹೀಗೆ ಬಹುಮುಖ ಪ್ರತಿಭಾವಂತರಾದ ಹ.ಸು.ಅವರು ಏಕ ಕಾಲದಲ್ಲಿ ಕನ್ನಡ ಹಾಗೂ ತುಳು ಎರಡೂ ಭಾಷೆಗಳಲ್ಲಿ ಕಾವ್ಯ ರಚಿಸುವ ಸಾಮಥ್ರ್ಯವುಳ್ಳವರು. ದಿನಕ್ಕೆ ಕನಿಷ್ಟ 5 ಆದರೂ ಹನಿಗಳನ್ನು ಬರೆದು ಜಾಲತಾಣಗಳಲ್ಲಿ ಹಂಚಿಕೊಳ್ಳುವರು. ಹನಿಗವನ ಪ್ರಕಾರದಲ್ಲಿ ತನ್ನದೇ ಒಂದು ಛಾಪನ್ನು ಮೂಡಿಸಿ ಮಿಂಚುತ್ತಿರುವ ಇವರು ಹಲವು ಕಾರ್ಯಕ್ರಮಗಳಲ್ಲಿ ಅಧ್ಯಕ್ಷರಾಗಿಯೋ, ಅತಿಥಿಗಳಾಗಿಯೋ, ನಿರೂಪಕರಾಗಿಯೋ ಕಾಣಿಸಿಕೊಳ್ಳುತ್ತಾರೆ. ಈಗಾಗಲೇ ತಮ್ಮ ಸಾಧನೆಗಾಗಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವರು. ಇವರು 'ಬೆಳಕು' (ಕನ್ನಡ)ಮತ್ತು 'ಉದಿಪು'(ತುಳು) ಎಂಬ ಎರಡು ಕವನ ಸಂಕಲನಗಳನ್ನು ಪ್ರಕಟಿಸಿರುವರು. 'ಸುರಗಿ' ಹನಿಗವನ ಸಂಕಲನವಾಗಿದ್ದು ಇವರ ಮೂರನೇ ಕೃತಿಯಾಗಿದೆ. ಇತ್ತೀಚೆಗೆ ಮತ್ತೊಂದು ಹನಿಗವನ ಸಂಕಲನವನ್ನೂ ಪ್ರಕಟಿಸಿದ್ದಾರೆ.
        ಈ ಸಂಕಲನಕ್ಕೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯರಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಮುನ್ನುಡಿ ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ "ಹಿಡಿಯಷ್ಟೇ ಬ್ರಹ್ಮಾಂಡವನ್ನು ಹುದುಗಿಸಿಕೊಳ್ಳುವ ತಾಕತ್ತಿರುವುದು   ಈ ಚುಟುಕಿಗೆ ಮಾತ್ರ. ಕವಿಯಾಗಲೀ ಕಲಾವಿದನಾಗಲೀ ಜನ ಮಾನಸಕ್ಕೆ ಹತ್ತಿರವಾಗುವುದು ಅವರ ಅಭಿವ್ಯಕ್ತಿಯಿಂದ, ತೀವ್ರತರವಾದ ಸ್ಪಂದನದಿಂದ. 'ಕಿರಿದರೊಳ್ ಪಿರಿದರ್ಥಮಂ' ಕೊಡುವುದು ಉತ್ತಮ ಕಾವ್ಯದ ಲಕ್ಷಣ. ಚುಟುಕುಗಳು ಅಲ್ಪದಲ್ಲೇ ಕಲ್ಪವನ್ನು ಕೆತ್ತುವ ಶಿಲ್ಪವೆಂಬ ಕವಿವಾಣಿಗೆ ಸಾಕ್ಷಿಗಳಾಗಿವೆ" ಎನ್ನುತ್ತಾರೆ. ಅಮೃತ ಪ್ರಕಾಶನದಿಂದ ಹೊರ ಬಂದ ಈ ಸಂಕಲನದಲ್ಲಿ ಪ್ರಕಾಶನದ ವ್ಯವಸ್ಥಾಪಕ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು ಅವರ ಶುಭನುಡಿಯಿದೆ. ಲೇಖಕರನ್ನು ಸಂಕ್ಷಿಪ್ತವಾಗಿ ಪರಿಚಯಿಸುತ್ತಾ ಅವರ ಬರವಣಿಗೆಗೆ ಬೆನ್ನುಡಿಯ ಬರಹದ ಮೂಲಕ  ಹಿರಿಯ ಕವಿ ಡಾ. ಕಾಸರಗೋಡು ಅಶೋಕ್ ಕುಮಾರ್ ಅವರು ಪ್ರೋತ್ಸಾಹ ನೀಡಿದ್ದಾರೆ. ಹೂವೊಂದು ಒಣಗುವವರೆಗೆ ಮಾತ್ರ ಪರಿಮಳ ಬೀರುವುದಾದರೆ, ಸುರಗಿ ಅದಕ್ಕೆ ವ್ಯತಿರಿಕ್ತವಾಗಿ ಪರಿಮಳವನ್ನು ಬೀರುವಂತೆ ಈ 'ಸುರಗಿ'ಯು ಸಾಹಿತ್ಯ ಲೋಕದಲ್ಲಿ ಸದಾ ಸುವಾಸನೆಯನ್ನು ಬೀರಬಹುದೆಂಬ ವಿಶ್ವಾಸದಿಂದ ತಮ್ಮ ಹನಿಗವನ ಸಂಕಲನಕ್ಕೆ 'ಸುರಗಿ' ಎಂದೇ ಶೀರ್ಷಿಕೆಯಿಟ್ಟದ್ದನ್ನು ಗಮನಿಸಬಹುದು.
      ಸಕಲ ಜೀವಿಗಳಲ್ಲೂ ಚೈತನ್ಯ ತುಂಬುವ, ಜೀವ ಕಳೆ ನೀಡುವ, ಪ್ರತಿದಿನ ಜಗವನ್ನು ಬೆಳಗುವ 'ಸೂರ್ಯ'ನಿಂದಲೇ ಮೊದಲ ಹನಿಯನ್ನು ಪ್ರಾರಂಭಿಸುತ್ತಾರೆ. ಪ್ರತಿ ಕಣ್ಣೀರಿನ ಹಿಂದೆ  ಯಾರಿಗೂ ತಿಳಿಯದ ಒಂದು ಕತೆಯಿದೆ ಅದು ಕಣ್ಣೀರಾದವರಿಗೆ ಮಾತ್ರ ತಿಳಿದಿರುವ ಸತ್ಯ ಆ ದುಃಖದ ತೀವ್ರತೆ ಇನ್ನೊಬ್ಬರಿಗರ್ಥವಾಗಲು ಸಾಧ್ಯವಿಲ್ಲ ಎಂದು 'ಕತೆ-ವ್ಯಥೆ' ಹನಿಯಲ್ಲಿ ತಿಳಿಸುತ್ತಾರೆ. ಶಾಂತಿಯ ಪ್ರತೀಕವಾದ ಬಿಳಿ ವಸ್ತ್ರವನ್ನು ಧರಿಸಿಕೊಂಡು ಸಮಾಜ ಸೇವೆಯ ನೆಪದಲ್ಲಿ ದೇಶವನ್ನೆ ಕೊಳ್ಳೆಹೊಡೆಯುವವರ ಬಗ್ಗೆ 'ಕ(ಖ)ದ್ದರು' ಹನಿಯಲ್ಲಿ ಹೇಳುತ್ತಾರೆ.'ಆಶಯ' ಹನಿಯಲ್ಲಿ ದೂರವಿದ್ದವರನ್ನು ಹತ್ತಿರ ಸೇರಿಸುವ ಉದ್ದೇಶದಿಂದ ಸೇತುವೆಯಾಗಲು ಬಯಸುವವರನ್ನು ತಮ್ಮ ಸ್ವಾರ್ಥಕ್ಕಾಗಿ ಏಣಿಯಾಗಿ ಬಳಸಿಕೊಂಡು ಕೃತಘ್ನರಾಗಿ ವರ್ತಿಸುವ ಜನರ ಕುರಿತು ಮಾತಾಡುತ್ತಾರೆ. ಮರ, ನೀರು, ಪ್ರಾಣಿ ಪಕ್ಷಿಗಳಂತೆ ನಾವೂ ಪ್ರಕೃತಿಯ ಒಂದು ಭಾಗವಷ್ಟೇ.ನಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸುವ ಪ್ರಕೃತಿಯನ್ನೇ ನಾಶ ಮಾಡಿದರೆ ನಮಗೆಂದೂ ಉಳಿಗಾಲವಿಲ್ಲ ಎಂಬ ಎಚ್ಚರಿಕೆಯನ್ನು 'ಪ್ರಕೃತಿ' ಹನಿಯಲ್ಲಿ ನೀಡುತ್ತಾರೆ. ನಿಷ್ಕಲ್ಮಶ 'ಸ್ನೇಹ'ಕ್ಕೆ ಉಪ್ಪೆಂದು ಗೊತ್ತಿದ್ದರೂ ಕಡಲನ್ನು ಸೇರಲು ಹಂಬಲಿಸುವ ನದಿಯ, ಕುಚೇಲನ ಅವಲಕ್ಕಿಯ, ಕೃಷ್ಣ ಪ್ರೀತಿಯಿಂದ ನೀಡಿದ ಸಂಪತ್ತನ್ನೇ ನಿದರ್ಶನವಾಗಿ ನೀಡುವುದನ್ನು ಕಾಣಬಹುದು. ಆದರೆ ಇಂದಿನ ಸ್ನೇಹ, ಪ್ರೀತಿ ವ್ಯಾವಹಾರಿಕವಾಗಿ ಬದಲಾದದ್ದನ್ನು ನೋಡಬಹುದು. ಅಂದಿನ ಕಾಲದಲ್ಲಿ ಕುತಂತ್ರಗಳನ್ನು ನಡೆಸಲು ಬಂಧಗಳ ನಡುವೆ ಬಿರುಕು ಮೂಡಿಸಲು ಮಂಥರೆ ಶಕುನಿಯಂತವರಿದ್ದರು.ಆದರೆ ಈಗ ಅವರಿಲ್ಲದೆಯೂ ಕುತಂತ್ರಗಳು ನಡೆಯುತ್ತಲೇ ಇವೆ ಎಂದು ವರ್ತಮಾನದ ಬಗ್ಗೆ  'ಕುತಂತ್ರ'ದಲ್ಲಿ ವ್ಯಂಗ್ಯವಿದೆ. ಹುಲ್ಲಿನ ಬದಲು ಹಂಚು ಬಂತು, ಹಂಚು ಹೋಗಿ ಟಾರಸಿ ಬಂದೊಡನೆ ಅನಾರೋಗ್ಯವೂ ಜೊತೆಗೂಡಿತೆಂದು ಸಮಾಜದಲ್ಲಿ ನಡೆಯುತ್ತಿರುವ ಬದಲಾವಣೆಯ ಹಂತಗಳನ್ನು ವಿವರಿಸುವರು.
ಕವಿ ಬರೆದದ್ದು ಸಹೃದಯರಿಗೆ ಅರ್ಥವಾಗಬೇಕು. ಇಷ್ಟವಾಗಬೇಕು. ಅವರ ಮನವನ್ನು ತಟ್ಟಬೇಕು ಮುಟ್ಟಬೇಕು. ಆಗ ಮಾತ್ರ ಆತನ ಬರವಣಿಗೆ ಸಾರ್ಥಕವಾಗುತ್ತದೆ. ಇಲ್ಲದಿದ್ದರೆ ಅದು ವ್ಯರ್ಥ ಬರಹವಾಗುತ್ತದೆ. ಅವರಿವರ ಹೊಗಳಿಕೆಗೆ ನಾವು ಯಾವತ್ತೂ ಬರೆಯಬಾರದು. ನಮ್ಮ ಖುಷಿಗಾಗಿ ಅಥವಾ ನೋವನ್ನು ಮರೆಯಲೋಸುಗ ಬಾವನೆಗಳರಳಿದಾಗ ಕವಿತೆ ಬರೆಯಬೇಕು. ಎಂದು ಬರವಣಿಗೆಯ ಬಗ್ಗೆ ಕವಿತೆಯ ಕುರಿತು ಹೇಳುತ್ತಾರೆ. ಹೆಣ್ಣಿನ ನಾಲಗೆಯೇ ಆಯುಧವಾದಾಗ ಶಸ್ತ್ರಾಸ್ತ್ರವಿಲ್ಲದೆಯೂ ಯುದ್ಧ ನಡೆಯುತ್ತದೆ ಎಂಬಲ್ಲಿ ನಾಲಗೆಯನ್ನು ಆಯುಧಕ್ಕೆ ಹೋಲಿಸಿರುವುದನ್ನು ಗಮನಿಸಬಹುದು. ಮಾಲ್ ನಲ್ಲಿ ದುಬಾರಿ ಬೆಲೆಯ ಚಪ್ಪಲಿ ಖರೀದಿಸುವವರು ಬೀದಿಬದಿಯ ಹಣ್ಣಿಗಾಗಿ ಚೌಕಾಸಿ ಮಾಡುವುದನ್ನು ನೋಡುವಾಗ ಮನುಷ್ಯನ ಸಣ್ಣತನ ಗೋಚರಿಸುತ್ತದೆ. ಬದುಕೆಂದರೆ, "ನಿನ್ನೆಯ ನೆನಪು, ಇಂದಿನ ಅನುಭವ ಮತ್ತು ನಾಳಿನ ಕನಸು"ಎಂದು ವ್ಯಾಖ್ಯಾನಿಸುತ್ತಾರೆ. "ಮರಕ್ಕೆ ಬಳ್ಳಿಯ ಆಲಿಂಗನ, ಬಳ್ಳಿಗೆ ಮರದ ಚುಂಬನ" ಎನ್ನುವಲ್ಲಿ ಮರ ಮತ್ತು ಬಳ್ಳಿಯ ನಡುವಿನ ಅನ್ಯೋನ್ಯ ಸಂಬಂಧ ಕಾಣಿಸುತ್ತದೆ. ವರ್ಷವಿಡೀ ಹೊಲ ಗದ್ದೆಗಳಲ್ಲಿ ಬೆವರು ಹರಿಸಿ ದುಡಿದು ಬೆಳೆ ತೆಗೆದು ಮಾರುಕಟ್ಟೆಯಲ್ಲಿ ಅದಕ್ಕೆ ನಿರೀಕ್ಷಿತ ಮೌಲ್ಯ ಕುಸಿಯುವುದನ್ನು ಕಂಡಾಗ ಮಣ್ಣಲ್ಲೇ ದುಡಿದು ಮಣ್ಣಲ್ಲೇ ಮಡಿವ ರೈತನ ಕಣ್ಣಿಂದ ಕಣ್ಣೀರು ಹರಿಯುತ್ತದೆ ಎಂದು ರೈತರ ಕರುಣಾಜನಕ ಸ್ಥಿತಿಯನ್ನು ವಿವರಿಸುವರು. ಒಂದಕ್ಕೊಂದು ಉಚಿತವೆಂದು ಖುಷಿಯಿಂದ ಖರೀದಿಸಿದ ಬಟ್ಟೆ ಒಂದೇ ಒಗೆತಕ್ಕೆ ಬಣ್ಣ ಬದಲಾಯಿಸುವುದನ್ನು ಕಾಣುವಾಗ ಮೋಸದ ಅರಿವಾಗುತ್ತದೆ. ಸಂಬಂಧಗಳಿಗೆ ಬೆಲೆ ಕಲ್ಪಿಸದೆ ಮಣ್ಣಿಗಾಗಿ ಪರಸ್ಪರ ಹೊಡೆದಾಡಿಕೊಳ್ಳುವ ಜನರು ಕೊನೆಗೆ ಸೇರುವುದು ಮಣ್ಣನ್ನೇ ಎಂಬ ವಾಸ್ತವವನ್ನು ಪದೆಪದೇ ಮರೆಯುವವರಿಗೆ ವಾಸ್ತವದರಿವು ಮೂಡಿಸುವ ಪ್ರಯತ್ನವಿದೆ. ಬರೆಯುವ ಕವಿತೆಗಳು ಹಣತೆಯಾಗಲಿ, ನಮ್ಮೆಲ್ಲರ ಮನಮನೆಗಳನ್ನು ಬೆಳಗಿ ಸುತ್ತಲಿನ ಕತ್ತಲೆಯನ್ನು ದೂರ ಮಾಡಲಿ, ಜ್ಞಾ ನದ ಅರಿವು ಮೂಡಿ, ಅ ಜ್ಞಾ ನ ಅಳಿಯಲಿ ಎಂದು ಬಯಸುತ್ತಾರೆ. ಮನದೊಳಗಿನ ಮಿಡಿವ ಭಾವಗಳನ್ನು ಅರ್ಥಮಾಡಿಕೊಳ್ಳದೆ ಎಲ್ಲವನ್ನೂ ವ್ಯಾವಹಾರಿಕವಾಗಿ ಕಾಣುವ ವ್ಯಾಪಾರಿಗೆ ತೊಟ್ಟಿಲು ಮತ್ತು ಶವ ಪೆಟ್ಟಿಗೆ ಖರೀದಿಸುವವರಿಬ್ಬರೂ ಸಮಾನರೇ ಎಂದು ತಿಳಿಸುವರು. ಒಂದು ನಗುವಿನ ಹಿಂದೆ ಅದೆಷ್ಟೋ ಅರ್ಥಗಳಿವೆ ಅವನ್ನು ಅರ್ಥಮಾಡಿಕೊಂಡರೆ ಅಪಾಯದಿಂದ ತಪ್ಪಿಸಿಕೊಳ್ಳಬಹುದೆಂಬ ಕಿವಿಮಾತು ಹೇಳುತ್ತಾರೆ. ಮೃದುವಾದ ಹೂ ಮತ್ತು ಒರಟಾದ ಮುಳ್ಳು ಒಂದೇ ಗಿಡದಲ್ಲಿ ಸಹಬಾಳ್ವೆ ನಡೆಸುತ್ತವೆ. ಅದರಂತೆ ನಮ್ಮ ಬದುಕಿನಲ್ಲೂ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸಲೇಬೇಕಾಗುತ್ತದೆ. ಮರ ಕಡಿದು ಕಾಗದ ತಯಾರಿಸುವವರು ಅದೇ ಕಾಗದದಲ್ಲಿ ಕಾಡು ಸಂರಕ್ಷಣೆಯ ಭಿತ್ತಿ ಪತ್ರಗಳನ್ನು ರಚಿಸಿ ಜಾಗೃತಿ ಮೂಡಿಸುವುದು ವಿಪರ್ಯಾಸವೇ ಸರಿ. ಬಾಳಿನ ದಾರಿಯಲ್ಲಿ ಅದೆಷ್ಟೋ ಕವಲುಗಳಿವೆ ನಮ್ಮ ಆಯ್ಕೆ ಯಾವಾಗಲೂ ಸರಿಯಾಗಿದ್ದರೆ ಜೀವನ ಸುಂದರವಾಗಿರುತ್ತದೆ. ಆದ್ದರಿಂದ ನಾವು ತುಂಬ ಆಲೋಚಿಸಿ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
        ಒಟ್ಟಾರೆಯಾಗಿ ಇಲ್ಲಿನ ಹನಿಗಳಲ್ಲಿ ಸತ್ವ, ತತ್ವ, ಚಿಂತನೆ, ಸಂದೇಶ, ನೀತಿ, ಸತ್ಯದ ದರ್ಶನ ದೈವಿಕ ಭಾವ, ಪ್ರೀತಿ ಸ್ನೇಹಕ್ಕೆ ನೀಡುವ ಮಹತ್ವ, ಅಸೂಯೆ ಸ್ವಾರ್ಥ ಮೋಸ ಮೊದಲಾದ ಋಣಾತ್ಮಕ ಭಾವಗಳಿಂದಾಗುವ ಪರಿಣಾಮಗಳಿವೆ. ಪ್ರಕೃತಿಯ ಮೇಲಿನ ಒಲವು,  ಒಳಿತು ಕೆಡುಕುಗಳ ಅರಿವು, ಮೊಬೈಲ್ ಬಂದಾಗ ಪೆನ್ನು ಮತ್ತು ಹಾಳೆಯ ಉಪಯೋಗ ಕಡಿಮೆಯಾದದ್ದು, ವೀರ ಯೋಧರ ಮೇಲಿನ ಅಭಿಮಾನ ಆಧುನಿಕತೆಗೆ ತೆರೆದುಕೊಂಡ ಜೀವನದ ಚಿತ್ರಣ, ರೈತರ ಬಗೆಗಿನ ಅನುಕಂಪ, ಎಲ್ಲವನ್ನೂ ವ್ಯವಹಾರ ದೃಷ್ಟಿಯಿಂದ ನೋಡುವ ಮನುಷ್ಯನ ಮನೋಧರ್ಮ, ಅತ್ತೆ ಸೊಸೆಯರ ನಡುವಣ ಮತ್ಸರ ಹೀಗೆ ಹಲವಾರು ವಿಷಯಗಳನ್ನೊಳಗೊಂಡ ಹನಿಗಳು ಓದುವಾಗಲೇ ಇಷ್ಟವಾಗುತ್ತವೆ ಆಪ್ತವಾಗುತ್ತವೆ.  ಕೆಲವೊಂದು ಹನಿಗಳು ಹೊಳೆದರೆ ಮತ್ತೊಂದಿಷ್ಟು ಎದೆಯಾಳಕ್ಕಿಳಿದು ಬಿಡುತ್ತವೆ.
           ಒಂದಿಷ್ಟು ಮನಸೆಳೆದ ಹನಿಗಳು:
ಭಾವನೆ
*******
ಕೈಗಳಿಲ್ಲ ಕೋಲುಗಳಿಲ್ಲ
ಕಿವಿ ಕಣ್ಣುಗಳೂ ಇಲ್ಲ
ಆದರೂ ಭಾವನೆಗಳಿವೆ
ಹೃದಯ ತಟ್ಟಿದ ಕವನಗಳಿವೆ

ಕವಿತೆಗೆ
*****
ಕವಿತೆಗೆ
ವಸ್ತು ಹುಡುಕುತ್ತಿದ್ದೆ
ಅಮ್ಮ ಬಂದರು

ವಿಪರ್ಯಾಸ
*****
ಹಿಡಿ ಕೊಟ್ಟಿತು
ಮರ ಕೊಡಲಿಗೆ
ಬುಡವೇ
ಬಲಿಯಾಯಿತು ಕೊಡಲಿಗೆ

ಕವಿಗೆ
****
ಈಗ ಬೇಕಿಲ್ಲ
ಹಾಳೆ ಪೆನ್ನು
ಕವನ ಬರೆಯಲು
ಸಾಕು ಒಂದು
ಮೊಬೈಲು ಮತ್ತು ಬೆರಳು

                                                       ಬರಹ: ಚೇತನಾ ಕುಂಬ್ಳೆ.
          FEEDBACK:samarasasudhi@gmail.com

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries