ಒಸಾಕಾ: ಸಣ್ಣ ರಾಷ್ಟ್ರಗಳಲ್ಲಿ ವಿಪತ್ತು ಸಂಭವಿಸಿದಾಗ ಅವರಿಗೆ ನೆರವಾಗಲು ತಾವು ಆರಂಭಿಸಿರುವ ಉಪಕ್ರಮವಾದ "ವಿಪತ್ತು ಪುನರ್ ಚೇತರಿಕೆ ಮೂಲಸೌಕರ್ಯ ಕುರಿತ ಅಂತಾರಾಷ್ಟ್ರೀಯ ಒಕ್ಕೂಟ"ಕ್ಕೆ ಸೇರುವಂತೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಜಿ-20 ಸದಸ್ಯ ರಾಷ್ಟ್ರಗಳಿಗೆ ಆಹ್ವಾನ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು, ವಿಪತ್ತು ಸಂಭವಿಸಿದಾಗ ಆ ದೇಶವನ್ನು ಪೂರ್ವ ಸ್ಥಿತಿಗೆ ತರಲು ವಿಶೇಷ ಒತ್ತು ನೀಡಲು ಮುಂದಾಗಿದ್ದಾರೆ, ಜಿ 20 ದೇಶಗಳನ್ನು ವಿಪತ್ತು ಪುನರ್ ಚೇತರಿಕೆ ಮೂಲಸೌಕರ್ಯಗಳ ಅಂತಾರಾಷ್ಟ್ರೀಯ ಒಕ್ಕೂಟಕ್ಕೆ ಸೇರಲು ಆಹ್ವಾನಿಸಿದ್ದಾರೆ ಎಂದು ವಿದೇಶಾಂಗ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಗುಣಮಟ್ಟದ ಮೂಲಸೌಕರ್ಯ ಹೂಡಿಕೆ ಮತ್ತು ಅಭಿವೃದ್ಧಿ ಸಹಕಾರ ಕುರಿತ ಜಿ 20 ಅಧಿವೇಶನದಲ್ಲಿ ಪ್ರಧಾನಿ ಮೋದಿ ಮಾತನಾಡಿ, ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯವು ಅಭಿವೃದ್ಧಿಗೆ ಮಾತ್ರವಲ್ಲ, ನೈಸರ್ಗಿಕ ವಿಪತ್ತುಗಳನ್ನು ಎದುರಿಸಲು ಸಹ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಾನು ಅಂತಾರಾಷ್ಟ್ರೀಯ ಅಗತ್ಯವನ್ನು ಬ್ಯೂನಸ್ ಐರಿಶ್ ಜಿ 20 ಶೃಂಗಸಭೆಯಲ್ಲಿಯೂ ಒತ್ತಿ ಹೇಳಿದ್ದೇನೆ. ಈ ಒಕ್ಕೂಟಕ್ಕೆ ಸೇರಲು ಮತ್ತು ಅದರ ಅನುಭವ ಮತ್ತು ಪರಿಣತಿಯನ್ನು ಹಂಚಿಕೊಳ್ಳಲು ನಾನು ಜಿ -20 ದೇಶಗಳನ್ನು ಆಹ್ವಾನಿಸುತ್ತೇನೆ ಎಂದು ತಿಳಿಸಿದರು.
ಈ ಹೊಸ ಜಾಗತಿಕ ಉಪಕ್ರಮವನ್ನು;ಈ ವಷಾರ್ಂತ್ಯದಲ್ಲಿ; ಪ್ರಾರಂಭಿಸಲು ಮೋದಿ ಮತ್ತು ಭಾರತ ಸರ್ಕಾರ ಉತ್ಸುಕವಾಗಿದೆ ಎಂದು ಜಪಾನಿನ ತಮ್ಮ ಸಹೋದ್ಯೋಗಿ ಶಿಂಜೊ ಅಬೆ ಅವರೊಂದಿಗೆ ಪ್ರಧಾನಿ ಮೋದಿ ಅವರ ದ್ವಿಪಕ್ಷೀಯ ಮಾತುಕತೆಯ ನಂತರ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಹೇಳಿದ್ದಾರೆ.
ಈ ಸಂಬಂಧದ ನಿಖರವಾದ ವಿವರಗಳನ್ನು ನಂತರ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಪ್ರತಿ ಬಾರಿಯೂ ಒಂದು ದೊಡ್ಡ ಅನಾಹುತ ಸಂಭವಿಸಿದಾಗ ತಕ್ಷಣದ ಪರಿಹಾರ ಮತ್ತು ಪುನರ್ವಸತಿ ನೀಡಲಾಗುತ್ತದೆ. ಆದರೆ ಅದರ ನಂತರ ಸಣ್ಣ , ದುರ್ಬಲ ದೇಶಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಉಪಕ್ರಮ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಗೋಖಲೆ ಹೇಳಿದ್ದಾರೆ.
ಈ ಬಗ್ಗೆ ಇದುವರೆಗೆ ಯಾರೂ ಗಮನ ಹರಿಸಿಲ್ಲ. ವಿಶ್ವಸಂಸ್ಥೆಯ ಪರಿಹಾರ ಮತ್ತು ಪುರ್ನವಸತಿ ವಿಭಾಗ ಕೂಡ ಇದನ್ನು ಪೂರ್ಣಗೊಳಿಸಿಲ್ಲ ಎಂದು ಗೋಖಲೆ ಹೇಳಿದ್ದಾರೆ.