ಕಾಸರಗೋಡು: ಜಿಲ್ಲೆಯ 21 ಸ್ಥಳೀಯಾಡಳಿತ ಸಂಸ್ಥೆಗಳ ಹಾಲಿ ವರ್ಷದ ಯೋಜನೆಗಳಲ್ಲಿನ ಬದಲಾವಣೆಗಳಿಗೆ ಜಿಲ್ಲಾ ಯೋಜನೆ ಸಮಿತಿ ಅಂಗೀಕಾರ ನೀಡಿದೆ.
ದೇಲಂಪಾಡಿ,ಕಾರಡ್ಕ, ಮೀಂಜ, ಬೇಡಡ್ಕ, ಚೆಮ್ನಾಡ್ ಸಹಿತ ಗ್ರಾಮಪಂಚಾಯತಿಗಳ, ಮಂಜೇಶ್ವರ, ನೀಲೇಶ್ವರ ಬ್ಲಾಕ್ ಪಂಚಾಯತಿಗಳ, ಕಾಞಂಗಾಡ್ ನಗರಸಭೆಗಳ ಯೋಜನೆಗಳಲ್ಲಿ ಬದಲಾವಣೆ ತರುವ ವಿಚಾರಕ್ಕೆ ಅಂಗೀಕಾರ ಲಭಿಸಿದೆ.
ಜಿಲ್ಲಾ ಯೋಜನೆ ಸಮಿತಿ ಸಭಾಂಗಣದಲ್ಲಿ ಈ ಸಂಬಂಧ ಶನಿವಾರ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು,ನೀಲೇಶ್ವರ ನಗರಸಭೆಗಳ ಅಯ್ಯಂಗಾಳಿ ನೌಕರಿ ಖಾತರಿ ಯೋಜನೆಯ ಕ್ರಿಯಾ ಯೋಜನೆ, ಕಾರ್ಮಿಕ ಮುಂಗಡಪತ್ರ ಇತ್ಯಾದಿ ಪ್ರಸ್ತುತಪಡಿಸಲಾಯಿತು. ಹರಿತ ಕೇರಳಂ ಮಿಷನ್ ಗೆ ಸಂಬಂಧಿಸಿದ ಕಿರು ನೀರಾವರಿ ಕರಡು ಯೋಜನೆ ಸಲ್ಲಿಸುವ ಕ್ರಮ ಕೈಗೊಳ್ಳುವಂತೆ ಸಭೆ ಸಂಬಂಧಪಟ್ಟವರಿಗೆ ಆದೇಶಿಸಿದೆ.
ಕಾಸರಗೋಡು, ಮಂಜೇಶ್ವರ ಬ್ಲಾಕ್ ಪಂಚಾಯತಿಗಳನ್ನು ಹೊರತುಪಡಿಸಿ ಇತರ ಬ್ಲಾಕ್ ಪಂಚಾಯತಿಗಳು ಕರಡು ಯೋಜನೆ ಸಲ್ಲಿಸಿವೆ. ಚೆರುವತ್ತೂರು ಗ್ರಾಮಪಂಚಾಯತಿಯು ಸಿದ್ಧಪಡಿಸಿದ ಚೆರುವತ್ತೂರು 20=40 ಕರಡು ಯೋಜನೆ ಗ್ರಾಮ ಪಂಚಾಯತಿ ಅಧ್ಯಕ್ಷ ಮಾಧವನ್ ಮಣಿಯರು ಪ್ರಸ್ತುತಪಡಿಸಿದರು.
ಚೆರುವತ್ತೂರು ಪಂಚಾಯತಿಯನ್ನು ಸಭೆಯಲ್ಲಿ ಅಭಿನಂದಿಸಲಾಯಿತು. ತ್ರಿಶೂರು ಇಂಜಿನಿಯರಿಂಗ್ ಕಾಲೇಜಿನ ಆರ್ಕಿಟೆಕ್ಟ್ ವಿಭಾಗದ ಪಿ.ಜಿ.ವಿದ್ಯಾರ್ಥಿಗಳು ಕರಡು ಯೋಜನೆ ಸಿದ್ಧಪಡಿಸಿದ್ದರು. ಪಿ.ಎನ್.ಪಣಿಕ್ಕರ್ ಫೌಂಡೇಶನ್ ಮಾದರಿಯ ಸೇವೆಗಿರುವ ಪುರಸ್ಕಾರ ಪಡೆದಿರುವ ಚೆಂಗಳ ಗ್ರಾಮಪಂಚಾಯತಿ ಅಧ್ಯಕ್ಷ ಷಾಹಿನಾ ಸಲೀಂ ಅವರನ್ನೂ ಅಭಿನಂದಿಸಲಾಯಿತು.
ಹೆಚ್ಚುವರಿ ದಂಡನಾಧಿಕಾರಿ ಸಿ.ಬಿಜು, ಜಿಲ್ಲಾ ಯೋಜನೆ ಸಮಿತಿ ಸದಸ್ಯರಾದ ಷಾನವಾಝ್ ಪಾದೂರು, ಜೋಸ್ ಪದಾಲಿಲ್, ಎಂ. ನಾರಾಯಣನ್,ಪುಷ್ಪಾ ಅಮೆಕ್ಕಳ, ಇ.ಪದ್ಮಾವತಿ, ಎ.ಎ.ಜಲೀಲ್, ಸುಮಯ್ಯ, ಕೆ.ಬಾಲಕೃಷ್ಣನ್, ವಿ.ಪಿ.ಜಾನಕಿ, ವಿವಿಧ ಇಲಾಖೆಗಳ ಸಿಬ್ಬಂದಿ ಉಪಸ್ಥಿತರಿದ್ದರು.