ಕಾಸರಗೋಡು: ಭಾಷಾ ಅಲ್ಪಸಂಖ್ಯಾತ ಪ್ರದೇಶ ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳು ಹಾಗು ಪರಿಹಾರದ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಬಲ ಹೋರಾಟ ನಡೆಸಲು ಬೀರಂತಬೈಲು ಕನ್ನಡ ಅಧ್ಯಾಪಕ ಭವನದಲ್ಲಿ ಶನಿವಾರ ಜರಗಿದ ಕನ್ನಡ ಹೋರಾಟ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ರಾಜ್ಯ ಭಾಷಾ ಅಲ್ಪಸಂಖ್ಯಾತ ಸಮಿತಿಯಿಂದ ಕನ್ನಡ ಪ್ರತಿನಿಧಿಯನ್ನು ಕೈಬಿಟ್ಟ ಕ್ರಮ ಹಿಂತೆಗೆದು ಕೂಡಲೇ ಪ್ರತಿನಿಧಿಯನ್ನು ಸೇರ್ಪಡೆಗೊಳಿಸಬೇಕು, ಪ್ರೌಢ ಶಾಲೆ ಮತ್ತು ಉನ್ನತ ಪ್ರೌಢ ಶಾಲೆ ಏಕೀಕರಿಸುವ ಸಂದರ್ಭದಲ್ಲಿ ಕನ್ನಡಿಗರ ಹಿತರಕ್ಷಣೆ ಕಾಯಬೇಕು, ಕನ್ನಡಿಗರಿಗೆ ಮೀಸಲಾತಿ ಇರಿಸಿದ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸಬೇಕು, ಭಾಷಾ ಅಲ್ಪಸಂಖ್ಯಾತ ಪ್ರದೇಶದಲ್ಲಿ ಬಾಲವಾಡಿ/ಅಂಗನವಾಡಿ ಮೇಲ್ವಿಚಾರಕಿಯಾಗಿ ಕನ್ನಡಿಗರನ್ನು ಮೀಸಲಾತಿಯ ಮೂಲಕ ನೇಮಕಾತಿ ನಡೆಸಲು ಕಾನೂನಿಗೆ ತಿದ್ದುಪಡಿ ತರಬೇಕು, ಅವಿಭಜಿತ ಕಾಸರಗೋಡು ತಾಲೂಕಿನಿಂದ ಬೇರ್ಪಟ್ಟ ಮಂಜೇಶ್ವರ ತಾಲೂಕಿಗೆ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕು ಎಂಬಿತ್ಯಾದಿ ಹಲವು ಬೇಡಿಕೆಗಳನ್ನು ಮುಂದಿರಿಸಿಕೊಂಡು ಜೂನ್ 22 ರಂದು ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಬೃಹತ್ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಯಿತು.
ಗ್ರಾಮ ಮಟ್ಟದಲ್ಲಿ ರಾಜಕೀಯೇತರವಾಗಿ ಕನ್ನಡಿಗರನ್ನು ಒಗ್ಗೂಡಿಸಿ ಬಲಿಷ್ಠವಾದ ಸಂಘಟನೆ ರೂಪೀಕರಿಸಲು ತೀರ್ಮಾನಿಸಲಾಯಿತು. ಕನ್ನಡ ಪ್ರದೇಶದ ಎಲ್ಲಾ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರಾದೇಶಿಕ ಸಮಿತಿಗಳನ್ನು ರಚಿಸಲು ತೀರ್ಮಾನಿಸಲಾಯಿತು. ಅದೇ ರೀತಿ ಹೊಸದುರ್ಗ ತಾಲೂಕು ಮಟ್ಟದಲ್ಲಿ ಕನ್ನಡ ಭಾಷಾಭಿಮಾನಿಗಳನ್ನು ಒಟ್ಟು ಸೇರಿಸಿ ಸಕ್ರಿಯಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದರು. ಮಹಾಲಿಂಗೇಶ್ವರ ಭಟ್ ಎಂ.ವಿ, ಬಾಲಕೃಷ್ಣ ಅಗ್ಗಿತ್ತಾಯ, ಕೆ.ವಿಶ್ವನಾಥ ರಾವ್, ಕೆ.ವಾಸುದೇವ, ದಿನೇಶ್ ಚೆರುಗೋಳಿ, ಎಸ್.ವಿ.ಭಟ್, ಸತೀಶ್ ಕೂಡ್ಲು, ಎನ್.ಶೋಭಾ, ತಾರಾನಾಥ ಮಧೂರು, ರಾಮಮೂರ್ತಿ, ಡಾ.ಬೇ.ಸೀ.ಗೋಪಾಲಕೃಷ್ಣ ಭಟ್, ಡಾ.ಯು.ಮಹೇಶ್ವರಿ, ಸುಬ್ರಹ್ಮಣ್ಯ ನಾಯಕ್, ಭಾಸ್ಕರ ಕಾಸರಗೋಡು ಮೊದಲಾದವರು ಸಭೆಯಲ್ಲಿ ಅಭಿಪ್ರಾಯ ಮಂಡಿಸಿ ಮಾತನಾಡಿದರು.