ಉಪ್ಪಳ: ಮಂಗಲ್ಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಕನ್ನಡ ಭಾಷೆಯಲ್ಲಿ ನಾಮಫಲಕ ಹಾಕಬೇಕು, ವಿವಿಧ ಇಲಾಖೆಗಳಲ್ಲಿ ಕನ್ನಡ ಅರ್ಜಿಗಳನ್ನು ವಿತರಿಸಬೇಕೆಂದು ಕನ್ನಡ ಹೋರಾಟ ಸಮಿತಿಯ ಪ್ರಾದೇಶಿಕ ಸಮಿತಿಯ ಸಭೆಯಲ್ಲಿ ಒತ್ತಾಯಿಸಲಾಯಿತು.
ಉಪ್ಪಳ ಕೈಕಂಬ ಪಂಚಮಿ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿದ ಕನ್ನಡ ಭಾಷಾಭಿಮಾನಿಗರ ಸಭೆಯಲ್ಲಿ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಜೂನ್ 22 ರಂದು ಬೆಳಿಗ್ಗೆ 10 ಗಂಟೆಯಿಂದ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆಯಲಿರುವ ಸತ್ಯಾಗ್ರಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸಿ ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು. ಕನ್ನಡ ಹೋರಾಟ ಸಮಿತಿಯ ಮಂಗಲ್ಪಾಡಿ ಪಂಚಾಯತಿ ಪ್ರಾದೇಶಿಕ ಸಮಿತಿಯ ಅಧ್ಯಕ್ಷರಾಗಿ ಬಾಬು ಹಾಗು ಪ್ರಧಾನ ಕಾರ್ಯದರ್ಶಿಯಾಗಿ ಉದಯಚಂದ್ರ ಅವರನ್ನು ಆಯ್ಕೆ ಮಾಡಲಾಯಿತು. ಜೋನ್ ಪೈವಳಿಕೆ, ದಿನೇಶ್ ಚೆರುಗೋಳಿ, ಸುನೀತ, ಹರಿನಾಥ ಭಂಡಾರಿ, ರವಿ, ಕಿಶೋರ, ಭಾಸ್ಕರ ಕಾಸರಗೋಡು ಮೊದಲಾದವರು ಸಭೆಯಲ್ಲಿ ಸೂಕ್ತ ಸಲಹೆಗಳನ್ನಿತ್ತರು.