HEALTH TIPS

ಸಮರಸ ಈ ಹೊತ್ತಿಗೆ ಹೊಸ ಹೊತ್ತಗೆ-ಸಂಚಿಕೆ 22-ಕೃತಿ ಮಳೆ ನಿಂತಾಗ

 
            ಪುಸ್ತಕ : ಮಳೆ ನಿಂತಾಗ
            ಲೇಖಕರು : ಕೆ.ಎ.ಎಂ ಅನ್ಸಾರಿ
             ಬರಹ: ಚೇತನಾ ಕುಂಬಳೆ
      ಅಮ್ಮನ ವಾತ್ಸಲ್ಯದ ಮಳೆ ನಿಂತಾಗ ತನ್ನ ಹೃದಯದಲ್ಲಿ ಮೂಡಿದ ಭಾವನೆಗಳನ್ನು ಅಕ್ಷರ ರೂಪಕ್ಕಿಳಿಸಿದವರು, ಅಮ್ಮನ ಅಗಲುವಿಕೆಯ ನೋವಿನಿಂದ ಹೊರ ಬರಲು ಅಕ್ಷರಗಳನ್ನು ಪ್ರೀತಿಸಿದವರು ಮಹಮ್ಮದ್ ಅನ್ಸಾರಿಯವರು. ಈ ಅಕ್ಷರಗಳು ಅವರ ನೋವಿಗೆ ಸಾಂತ್ವನಗಳಾದವು.
ಅನ್ಸಾರಿಯವರ ಮೊದಲ ಕವನ ಸಂಕಲನ 'ಮಳೆ ನಿಂತಾಗ'. ಇದರಲ್ಲಿ ಒಟ್ಟು 50 ಕವನಗಳಿದ್ದು ವೈವಿಧ್ಯಮಯ ವಿಷಯಗಳಿಂದ ಕೂಡಿವೆ. ಅವರ ನೇರವಾದ ಬರವಣಿಗೆಯ ಶೈಲಿ, ಸರಳವಾದ ಭಾಷೆ ಕವಿತೆಗಳನ್ನು ಓದಿಸಿಕೊಂಡು ಹೋಗುತ್ತವೆ. ಈ ಸಂಕಲನಕ್ಕೆ ಹಿರಿಯ ಸೋಹಿತಿಗಳಾದ ಡಾ. ವಾಮನ ನಂದಾವರ ಅವರು ಮುನ್ನುಡಿ ಬರೆದಿದ್ದಾರೆ. ಹಾಗೆಯೇ ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾದ ಶ್ರೀ ರಾಜಾರಾಮ ರಾವ್ ಬೆನ್ನುಡಿ ಬರೆದಿದ್ದಾರೆ.
      ಮಳೆಯೆಂದರೆ, ಸಂಭ್ರಮ ಸಡಗರ ಸಹಜ . ಆದರೆ ಕವಿಯ ಪಾಲಿಗೆ ಅದು ಬರಿಯ ಮಳೆಯಲ್ಲ, ಮಾತೃ ವಾತ್ಸಲ್ಯ. ಮನ ಸಂತಸದಿಂದಿರಲೆಂದೇ ಸುರಿಸುವ ಅಮೃತ. ಅಮ್ಮನ ಪ್ರೀತಿಯ ಮಳೆ ನಿಂತ ಮೇಲೂ ಕನಸುಗಳು ಚಿಗುರಿದವು, ಕವನಗಳು ಹುಟ್ಟಿದವು ಎಂದು ಮೊದಲ ಕವನ 'ಮಳೆ ನಿಂತಾಗ'ದಲ್ಲಿ ಅಮ್ಮನ ವಾತ್ಸಲ್ಯದ ಬಗ್ಗೆ ಹೇಳುತ್ತಾರೆ. 'ಮುಸ್ಸಂಜೆ ಮಾತು' ಕವಿತೆಯಲ್ಲಿ ಬಾಳಿನ ಸಂಜೆಯಲ್ಲಿ ಕವಿ ಒಮ್ಮೆ ಹಿಂತಿರುಗಿ ನೋಡಿದಾಗ ತಾನು ಪಡೆದುಕೊಂಡ ಗೆಲುವು ಚಿಕ್ಕದು ಅನಿಸುತ್ತದೆ. ಜಂಜಾಟದ ಬದುಕಿನಲ್ಲಿ ಸ್ನೇಹ ಸಂಬಂಧಗಳನ್ನು ಮರೆತಿರುವೆನೆಂದೂ, ಗಳಿಸಿದ್ದು ಶೂನ್ಯವೆಂದೂ ಬೆಟ್ಟದಷ್ಟು ಕಳೆದುಕೊಂಡಿರುವೆನೆಂಬ ಅರಿವಾಗುತ್ತದೆ.  ಅದೆಷ್ಟೋ ಜನರು ಉದ್ಯೋಗವನ್ನು ಅರಸಿ ಹೊರದೇಶಕ್ಕೆ ಹೋಗುತ್ತಾರೆ. ಆಗಲೇ ಅವರಿಗೆ ಅಲ್ಲಿನ ಅತ್ತರಿನ ಪರಿಮಳಕ್ಕಿಂತ ತಮ್ಮ ಹುಟ್ಟೂರಿನ ಮಣ್ಣಿನ ಸುಗಂಧವೇ ಹೆಚ್ಚು ಎಂದು ತಿಳಿದುಕೊಳ್ಳುವುದನ್ನು 'ಮರುಭೂಮಿಯ ಅತ್ತರು' ಕವನದಲ್ಲಿ ಕಾಣಬಹುದು. ಅಮ್ಮನ ಕೊನೆಯ ದಿನಗಳಲ್ಲಿ ಆಕೆಯೊಡನಿಲ್ಲದುದರ ನೋವನ್ನು'ಆ ದಿನ' ಕವಿತೆಯಲ್ಲಿ ವ್ಯಕ್ತಪಡಿಸುತ್ತಾರೆ. ಅಮ್ಮನ ಬಗೆಗಿನ ಅಪಾರವಾದ ಪ್ರೀತಿ ಮಮತೆ, ಆಕೆಯ ಅಗಲುವಿಕೆಯಿಂದಾದ ನೋವುಗಳನ್ನು ಇಲ್ಲಿನ ಹಲವು ಕವಿತೆಗಳಲ್ಲಿ ಕಾಣಬಹುದು.
     ಪ್ರೀತಿಸುವ ಜೀವವೊಂದು ಸತ್ತು ಮಲಗಿದಾಗಲೇ ನಮಗೆ ಸಾವು-ನೋವು ಏನೆಂದು ತಿಳಿಯುತ್ತದೆ ಎಂಬ ವಾಸ್ತವ ಸತ್ಯವನ್ನು 'ಸಾವು' ಕವಿತೆಯಲ್ಲಿ ತಿಳಿಸುತ್ತಾರೆ. ಮನಸು ನೊಂದಿರುವ ಘಳಿಗೆಯಲ್ಲಿ ಸಾಂತ್ವನ ಹೇಳುವ, ತಲೆ ನೇವರಿಸುವ ಅಮ್ಮನ ಕೈಗಳು 'ಒಡೆದ ಮನವನು ಸ್ತಿಮಿತಕ್ಕೆ ತರುವ ಮಂತ್ರದಂಡ' ಎಂದು 'ಅಳಲು' ಕವಿತೆಯಲ್ಲಿ ಹೇಳುತ್ತಾರೆ. ವರುಷಗಳೇ ಉರುಳಿದರೂ, ಕಾಲಗಳೇ ಬದಲಾದರೂ ಅಮ್ಮನ ಪ್ರೀತಿಯನ್ನು ಮುಪ್ಪು ಮುದ್ದಿಸಲಿಲ್ಲ, ಅಮ್ಮನ ಪ್ರೀತಿ ಎಂದಿಗೂ ಬದಲಾಗುವುದಿಲ್ಲ. ಎನ್ನುತ್ತಾರೆ. ಆಸ್ತಿಗಾಗಿ ಮಕ್ಕಳು ಪರಸ್ಪರ ಬಡಿದಾಡಿಕೊಳ್ಳುವ ವಿಚಾರ 'ಆಸ್ತಿ ಪಾಲು' ಕವಿತೆಯಲ್ಲಿದೆ. 'ಎದೆಯ ಬೆಂಕಿ' ಕವಿತೆಯಲ್ಲಿ ಅಮ್ಮನನ್ನೇ ವೃದ್ಧಾಶ್ರಮಕ್ಕೆ ತಳ್ಳಿದ ಮಗ ಆಕೆಗೆ ಚಳಿಯಾಗದಿರಲೆಂದು ಕಂಬಳಿ ತಂದುಕೊಟ್ಟಾಗ, ಆಕೆ ಅದನ್ನು ನಿರಾಕರಿಸುವುದನ್ನು ಗಮನಿಸಬಹುದು.  ಯಾಕೆಂದರೆ ಆಕೆಯ ಎದೆಯಲ್ಲಿ ನೋವು ಉರಿವ ಬೆಂಕಿಯಂತಾಗಿದೆ. ಅದುವೇ ದೇಹವನ್ನು ಬೆಚ್ಚಗಿರಿಸುವಾಗ ಮಗನ ಕಂಬಳಿಯ ಅಗತ್ಯವಿಲ್ಲ  ಎಂದು ಭಾವಿಸುತ್ತಾಳೆ. ಅಪ್ಪ ದುಬಾರಿ ಹಣಕೊಟ್ಟು ತಂದ ಮೀನಿನಲ್ಲಿ ಅಮ್ಮ ಕಾಗೆ ಬೆಕ್ಕು ನಾಯಿಗಳಿಗೂ ಪಾಲು ಕೊಡುವುದನ್ನು ನೋಡಿದಾಗ ಅಪ್ಪ ಬಯ್ಯುತ್ತಾನೆ. ಯಾಕೆಂದರೆ, ಆತನಿಗೆ ಹಣದ ಬೆಲೆ ಗೊತ್ತಿದೆ. ಆದರೆ, ಅಮ್ಮನಿಗೆ ಹಸಿವಿನ ಬೆಲೆ ಗೊತ್ತಿದೆ ಎಂಬುದನ್ನು 'ಅಮ್ಮನ ಇಷ್ಟ ದಾನ' ಕವಿತೆಯಲ್ಲಿ ಬಹಳ ಮಾರ್ಮಿಕವಾಗಿ ತಿಳಿಸಿದ್ದಾರೆ. ಅಪ್ಪ ಹೆಗಲಲ್ಲಿ ಹೊತ್ತ ಭಾರ, ಪಟ್ಟ ಕಷ್ಟ, ಸಹಿಸಿದ ನೋವು ಎಲ್ಲವೂ ಮಕ್ಕಳಿಗೆ ಅರ್ಥವಾದದ್ದು ಕೊನೆಗೆ ಆತನನ್ನು ಹೊತ್ತೊಯ್ಯುವಾಗ ಹೆಗಲು ಬದಲಾಯಿಸಬೇಕಾದಾಗಲೇ ಎಂಬುದನ್ನು 'ಅಪ್ಪನ ಹೆಗಲು' ಕವಿತೆಯಲ್ಲಿ ವಿವರಿಸುತ್ತಾರೆ. 'ತಲಾಖ್' ಕವಿತೆಯಲ್ಲಿ, ಬಹುಪತ್ನಿತ್ವ ವ್ಯವಸ್ಥೆ. ಸಂತಾನಕ್ಕಾಗಿ ಇನ್ನೊಬ್ಬ ಹೆಣ್ಣನ್ನು ಮದುವೆಯಾಗುವ ಗಂಡು ಹೆಣ್ಣಿನ ಪ್ರೀತಿ,  ನೋವು ಮತ್ತು ಕನಸುಗಳನ್ನು ಗಮನಿಸದೆ ಹೋಗುತ್ತಾನೆ.
     ಪ್ರಥಮ ಬಾರಿಗೆ ಮಗು ಅತ್ತಾಗಲೆ ಅಗಲುವಿಕೆಯ ನೋವಿನ ಅರಿವು ಎಳೆಗೂಸಿಗೂ ತಿಳಿಯುತ್ತದೆ ಎಂಬುದನ್ನು 'ಅಳು' ಕವಿತೆಯಲ್ಲಿ ಹೇಳುತ್ತಾರೆ. ತನ್ನ ಧರ್ಮವೇ ಶ್ರೇಷ್ಠವೆಂದು ಸಾರಲು ದೇವಾಲಯ ಕಟ್ಟಿಸಿದರೆ ಅದರಲ್ಲಿ ದೇವರೇ ಇಲ್ಲ. ಮನುಷ್ಯರಲ್ಲೇ ಭಾತೃತ್ವವನ್ನು ಕಾಣಬಯಸುವವನಿಗೆ ಮಂದಿರ ಮಸೀದಿಗಳ ಅಗತ್ಯವಿಲ್ಲ ಎನ್ನುತ್ತಾರೆ.   ಹೇಳದೇ ಉಳಿದ ಮೊದಲ ಪ್ರೀತಿ ಒಮ್ಮೆ ಮನದೊಳಗೆ ಸತ್ತಂತೆ ನಟಿಸುತ್ತದೆ. ಮಗದೊಮ್ಮೆ ಬಿರಿದ ಮಲ್ಲಿಗೆಯ ಘಮಲು ಎಂದು ವ್ಯಾಖ್ಯಾನಿಸುತ್ತಾರೆ.  ಕೊನೆಯಲ್ಲಿ ಪ್ರಸ್ತುತ ರಾಜಕೀಯ ವ್ಯವಸ್ಥೆಯ ಕುರಿತ ಕವನವೂ ಇದೆ . ಹೀಗೆ, ಇಲ್ಲಿನ ಕವನಗಳಲ್ಲಿ ಅಮ್ಮನ ಮೇಲಿನ  ಮಮತೆ, ಅಪ್ಪನ ಬಗೆಗಿನ ಪ್ರೀತಿ, ಸಂಗಾತಿಯ ಒಲವು, ಬಾಲ್ಯದ ನೆನಪುಗಳು, ಮಳೆಯ ಸಂಭ್ರಮ, ಹಳ್ಳಿಯಲ್ಲಿ ಮಕ್ಕಳು ಕ್ರಿಕೆಟ್ ಆಡುವ ಗಮ್ಮತ್ತು, ಕನ್ನಡಿಯಂತೆ ಛಿದ್ರವಾದ ಪ್ರಣಯ, ಧರ್ಮ, ಶಿಥಿಲಗೊಳ್ಳುತ್ತಿರುವ ಸಂಬಂಧಗಳು, ಧಾವಂತದ ಬದುಕು, ಸಂಪ್ರದಾಯ ರಾಜಕೀಯ, ನಗುವನ್ನು ಕಸಿದುಕೊಳ್ಳುತ್ತಿರುವ ಫೇಸ್ ಬುಕ್, ಅಳು ನಗು, ನೋವು,ಸಂತೋಷ ದುಃಖ, ಮೊದಲಾದ ಭಾವಗಳು ಮುಂತಾದ ಹಲವಾರು ವಿಷಯಗಳು ಇಲ್ಲಿನ ಕವಿತೆಗಳ ವಸ್ತುವಾಗಿವೆ.
                                                                  ಬರಹ:ಚೇತನಾ ಕುಂಬ್ಳೆ
       FEEDBACK: samarasasudhi@gmail.com

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries