ನವದೆಹಲಿ: ಮುಂದಿನ 24 ಗಂಟೆಗಳಲ್ಲಿ ನೈರುತ್ಯ ಮುಂಗಾರು ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮುಂಗಾರು ಪ್ರವೇಶದ ಹಿನ್ನೆಲೆಯಲ್ಲಿ ಜೂನ್ 10ರವರೆಗೂ ಕೊಲ್ಲಂ, ಅಲಾಪ್ಪುಝಾ , ತಿರುವನಂತಪುರ, ಎರ್ನಾಕುಲಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನೈಋತ್ಯ ಅರೇಬಿಯನ್ ಸಮುದ್ರ ಮತ್ತು ಕೇರಳ ಕರಾವಳಿಯಲ್ಲಿ ಇದೇ ರೀತಿಯ ಪರಿಸ್ಥಿತಿ ಕಂಡುಬರಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಮುಂಗಾರು ಕೇರಳ ಪ್ರವೇಶದ ಹಿನ್ನೆಲೆಯಲ್ಲಿ ರಾಜ್ಯದ ದಕ್ಷಿಣ, ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು, ರಾಮನಗರ, ಮೈಸೂರು, ಹಾಸನ ಭಾಗಗಳಲ್ಲಿ ಗುಡುಗು ಸಹಿತ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಮಧ್ಯೆ ದೆಹಲಿ, ರಾಜಸ್ತಾನ, ಮಧ್ಯಪ್ರದೇಶ, ವಿದರ್ಭ, ಮತ್ತು ಉತ್ತರ ಪ್ರದೇಶಗಳಲ್ಲಿ ವಾರಾಂತ್ಯದಲ್ಲಿ ತೀವ್ರ ಬಿಸಿಗಾಳಿ ಉಂಟಾಗುವ ಸಾಧ್ಯತೆ ಇದೆ. ಈಶಾನ್ಯ ರಾಜ್ಯಗಳಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.