ಟಿಪ್ಪಣಿ2)
ಅವತ್ತು ಅಲ್ಲ, ಆವತ್ತು!
ಹಿಂದೆ ನಡೆದ ಘಟನೆಯನ್ನು ವಿವರಿಸುವಾಗ ನಾವು ಅವತ್ತು ಅಥವಾ ಅವತ್ತಿನ ದಿನ ಎಂಬ ಪದಪುಂಜ ಬಳಸುತ್ತೇವೆ. ಅದರಲ್ಲಿ "ಅ" ಹ್ರಸ್ವಸ್ವರದ ಬದಲಿಗೆ "ಆ" ದೀರ್ಘಸ್ವರ ಬಳಸಬೇಕು. ಏಕೆಂದರೆ, "ಆ" + "ಹೊತ್ತು" ಎಂಬ ಪದಜೋಡಿ ಸೇರಿ ಆಹೊತ್ತು ಆಗಿ ಉಚ್ಚಾರ ಸೌಲಭ್ಯಕ್ಕಾಗಿ "ಆವತ್ತು" ಆಗುತ್ತದೆ. ಹಾಗಾಗಿ ಅವತ್ತು ಎನ್ನುವುದು ಸರಿಹೋಗದು.
ಟಿಪ್ಪಣಿ3.)
ಕಲಿಕಾ ಎನ್ನುವಷ್ಟು ಸಂಸ್ಕೃತಾನುಕರಣ ಬೇಕಾಗಿಲ್ಲ:
ರಕ್ಷಣಾ ಸಚಿವ, ನಿರ್ಮೂಲನಾ ಮಂಡಲಿ, ನಟನಾ ಚಾತುರ್ಯ,ಭಾಷಾ ವೈವಿಧ್ಯ ಮುಂತಾದ ಪದಪುಂಜಗಳಲ್ಲಿ ಮೊದಲ ಪದವನ್ನು "ಆ" ಕಾರಾಂತವಾಗಿ ಬಳಸುವುದು ಸರಿಯಾದ ರೀತಿಯೇ. ಅವು ಸಂಸ್ಕೃತದ ಪದಗಳು. ಅನುಕ್ರಮವಾಗಿ ರಕ್ಷಣೆಯ, ನಿರ್ಮೂಲನೆಯ, ನಟನೆಯ, ಭಾಷೆಯ ಎಂಬ ಷಷ್ಠೀವಿಭಕ್ತಿ ರೂಪವನ್ನೇ ಧ್ವನಿಸಲು "ಆ" ಕಾರಾಂತವಾಗಿ ಬಳಸುತ್ತೇವೆ. ಆದರೆ ಅದೊಂದು ಸ್ಟೈಲ್ ಇರಬೇಕು ಅಂದುಕೊಂಡು ಕಲಿಕೆಯ ಎಂಬ ಶುದ್ಧ ಕನ್ನಡಪದವನ್ನು ಸಹ ಕಲಿಕಾ ಎಂದು ಮಾಡುತ್ತೇವೆ. ಅದು ತಪ್ಪು. ಇತ್ತೀಚಿಗೆಹುಟ್ಟಿಕೊಂಡ ಪಿಡುಗು ಎನ್ನಬಹುದು. ಕಲಿಕೆ ಎನ್ನುವುದು ಸಂಸ್ಕೃತಪದವಲ್ಲ. ಕನ್ನಡ ಪದ. ಅದನ್ನು "ಆ" ಕಾರಾಂತವಾಗಿಸಿದರೆ ಷಷ್ಠೀವಿಭಕ್ತಿಯ ಪರ್ಯಾಯವಾಗುವುದಿಲ್ಲ. ಆದ್ದರಿಂದ ಕಲಿಕಾ ಕೇಂದ್ರ, ಕಲಿಕಾ ವಿಧಾನ ಇವೆಲ್ಲ ತಪ್ಪು ಬಳಕೆಗಳು. ಪ್ರಜಾವಾಣಿಯಂಥ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯಲ್ಲೂ ಆ ತಪ್ಪು ಬಳಕೆ ಇದೆ ಎಂದರೆ ತಿದ್ದುಪಡಿ ಆಗಲೇಬೇಕಾಗಿದೆ.
ನಾಳೆ ಹೊಸ ವಿಚಾರಗಳೊಂದಿಗೆ ಮುಂದುವರಿಯುವುದು......
ಲೇಖಕ:ಶ್ರೀವತ್ಸ ಜೋಶಿ ವಾಷಿಂಗ್ಟನ್ ಡಿಸಿ.
FEEDBACK: samarasasudhi@gmail.com