ನವದೆಹಲಿ: ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯಲ್ಲಿ ಎಎನ್ -32 ವಿಮಾನ ಭಗ್ನಾವಶೇಷ ಪತ್ತೆಯಾದ ದುರ್ಗಮ ಪ್ರದೇಶದಲ್ಲಿ ಯಾರೂ ಬದುಕುಳಿದಿಲ್ಲ, ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದು, ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದು ಭಾರತೀಯ ವಾಯುಪಡೆ ನಿನ್ನೆ ತಿಳಿಸಿದೆ.
ಗುರುವಾರ ಬೆಳಿಗ್ಗೆ ಎಂಟು ಸದಸ್ಯರನ್ನೊಳಗೊಂಡ ರಕ್ಷಣಾ ತಂಡ ವಿಮಾನ ಪತನಗೊಂಡಿರುವ ಸ್ಥಳಕ್ಕೆ ಭೇಟಿ ನೀಡಿದ್ದು, ಯಾರೂ ಬದುಕುಳಿದಿಲ್ಲ ಎಂದು ಟ್ವೀಟರ್ ನಲ್ಲಿ ಭಾರತೀಯ ವಾಯುಪಡೆ ಮಾಹಿತಿ ನೀಡಿದೆ.
ಎಲ್ಲಾ 13 ಸಿಬ್ಬಂದಿಗಳ ಮೃತದೇಹಗಳು ಹಾಗೂ ವಿಮಾನದಲ್ಲಿನ ಕಪ್ಪು ಪೆಟ್ಟಿಗೆ ವಶಕ್ಕೆ ಪಡೆಯಲಾಗಿದ್ದು, ವಿಮಾನ ಪತನಗೊಂಡಿರುವ ಪ್ರದೇಶದಿಂದ ಮೃತದೇಹಗಳನ್ನು ಸಾಗಿಸಲು ಹೆಲಿಕಾಪ್ಟರ್ ಗಳನ್ನು ಬಳಸಲಾಗುತ್ತಿದೆ. ವಿಮಾನದ ಮಾಹಿತಿ ಧ್ವನಿ ಮುದ್ರಿಕೆ ಮತ್ತು ಕಾಕ್ ಪಿಟ್ ಧ್ವನಿ ಮುದ್ರಿಕೆಯನ್ನು ಮರು ಪಡೆಯಲಾಗಿದೆ ಎಂದು ಹೇಳಲಾಗಿದೆ.
ಆರು ಮಂದಿ ಅಧಿಕಾರಿಗಳು, ಐವರು ವಿಮಾನದ ಸಿಬ್ಬಂದಿ ಹಾಗೂ ಇನ್ನಿತರ ಇಬ್ಬರು ಮಂದಿಯನ್ನೊಳಗೊಂಡ ವಿಮಾನ ಜೂನ್ 3 ರಂದು ಅಸ್ಸಾಂನ ಜರ್ಹತ್ ವಾಯುನೆಲೆಯಿಂದ ಟೇಕಾಫ್ ಆದ ನಂತರ ನಾಪತ್ತೆಯಾಗಿತ್ತು.
ಎಎನ್ -32 ವಿಮಾನ ಅಪಘಾತದಲ್ಲಿ ಮೃತಪಟ್ಟವರ ಹೆಸರನ್ನು ಭಾರತೀಯ ವಾಯುಪಡೆ ಬಿಡುಗಡೆ ಮಾಡಿದೆ. ವಿಂಗ್ ಕಮಾಂಡರ್ ಜಿಎಂ ಚಾಲ್ರ್ಸ್, ಸ್ಕ್ವಾಡರ್ ಲೀಡರ್ ಹೆಚ್. ವಿನೋದ್, ವಿಮಾನದ ಲೆಪ್ಟಿನೆಂಟ್ ಆರ್ ಥಾಪಾ,ಎ. ತನ್ವರ್, ಎಸ್, ಮೋಹಂತಿ, ಎಂ ಕೆ ಗಾರ್ಗ್, ವಾರೆಂಟ್ ಅಫೀಸರ್ ಕೆಕೆ ಮಿಶ್ರಾ, ಸರ್ಜಿಯಾಂಟ್ ಅನೂಪ್ ಕುಮಾರ್, ಕಾರ್ಪೋರಲ್ ಶೆರಿನ್, ವಿಮಾನದ ಪ್ರಮುಖರಾದ ಎಂಕೆ ಸಿಂಗ್, ಮನು ಪಂಕಜ್ ಹಾಗೂ ಪುತಾಲಿ, ರಾಜೇಶ್ ಕುಮಾರ್ ಎಂದು ಗುರುತಿಸಲಾಗಿದೆ.
ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಭಾರತೀಯ ವಾಯುಪಡೆಯ 15 ಪರ್ವತಾರೋಹಿಗಳು, ಸೇನಾ ಹಾಗೂ ಸ್ಥಳೀಯ ಪರ್ವತಾರೋಹಿಗಳ ತಂಡ ಬುಧವಾರ ವಿಮಾನ ಪತನಗೊಂಡಿರುವ ಬಳಿ ತಲುಪಿದ್ದು, ಇಂದು ಅಂತಿಮವಾಗಿ ಎಂಟು ಸದಸ್ಯರನ್ನೊಳಗೊಂಡ ತಂಡ ದುರಂತದ ಸ್ಥಳಕ್ಕೆ ತಲುಪಿದೆ.