ನವದೆಹಲಿ: ಮಳೆ ಕೊರತೆ ಮತ್ತು ಬರಗಾಲದ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುವ ಸಾದ್ಯತೆ ಇದ್ದು, ಇದೇ ಕಾರಣಕ್ಕೆ ಬೆಲೆ ನಿಯಂತ್ರಣದ ದೃಷ್ಟಿಯನ್ನಿಟ್ಟುಕೊಂಡು ಸುಮಾರು 50 ಸಾವಿರ ಟನ್ ಈರುಳ್ಳಿಯನ್ನು ದಾಸ್ತಾನು ಮಾಡಿಕೊಳ್ಳಲು ಮುಂದಾಗಿದೆ.
ಈಗಾಗಲೇ ದೇಶದ ವಿವಿಧೆಡೆ ಭೀಕರ ಬರಗಾಲ ಏರ್ಪಟ್ಟಿದ್ದು, ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಅಲ್ಲದೆ ಅಗತ್ಯ ವಸ್ತುಗಳು, ನಿತ್ಯ ಬಳಕೆಯ ತರಕಾರಿಗಳ ಬೆಲೆ ಕ್ರಮೇಣ ಗಗನಕ್ಕೇರುತ್ತಿದ್ದು, ಈರುಳ್ಳಿ ಬೆಲೆ ಕೂಡ ಗಗನದತ್ತ ಮುಖ ಮಾಡಿದೆ. ಮಹಾರಾಷ್ಟ್ರದ ಲಸಲ್ ಗಾಂವ್ ನಲ್ಲಿನ ಈರುಳ್ಳಿ ಹೋಲ್ ಸೇಲ್ ಮಾರುಕಟ್ಟೆಯಲ್ಲಿ ಪ್ರತೀ ಕೆಜಿಗೆ 11 ರೂಗಳಿದ್ದ ಬೆಲೆ ಮಂಗಳವಾರ ಬರೊಬ್ಬರಿ 29 ರೂಗೆ ಏರಿಗೆಯಾಗಿದೆ. ಕಳೆದ ವರ್ಷ ಇದೇ ದಿನ ಈರುಳ್ಳಿ ಬೆಲೆ 8.50 ರೂ ಗಳಾಗಿತ್ತು. ಆದರೆ ಈ ಬಾರಿ 29 ರೂಗಳಿಗೆ ಏರಿಕೆಯಾಗಿದೆ.
ಅಲ್ಲದೆ ರಿಟೇಲ್ ದರಗಳ ಕೂಡ ಗಗನಕ್ಕೇರಿವೆ. ಇದೇ ಕಾರಣಕ್ಕೆ ಬೆಲೆ ನಿಯಂತ್ರಣ ಮಾಡಲು ಕೇಂದ್ರ ಸರ್ಕಾರ ಸುಮಾರು 50 ಸಾವಿರ ಟನ್ ಈರುಳ್ಳಿಯನ್ನು ದಸ್ತಾನು ಮಾಡಿಕೊಳ್ಳಲಾಗಿದೆ ಎಂದು ಆಹಾರ ಸಚಿವಾಲಾಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.