ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲಿ ಹೆಚ್ಚುವರಿ 511 ಮಂದಿಯನ್ನು ಸೇರ್ಪಡೆಗೊಳಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಶನಿವಾರ ನಡೆದ ಎಂಡೋಸಲ್ಫಾನ್ ಜಿಲ್ಲಾ ಮಟ್ಟದ ಘಟಕ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು.
1981 ಮಂದಿಯ ಪಟ್ಟಿ ಈ ಹಿಂದೆ ಅಂಗೀಕರಿಸಿ , ಅವರಿಗೆ ಸೌಲಭ್ಯ ಒದಗಿಸಲಾಗುತ್ತಿದೆ. ಇದಲ್ಲದೆ 18 ವರ್ಷಕ್ಕಿಂತ ಕೆಳಗಿನ ವರನ್ನು ಈಗ ಸೇರಿಸಲಾಗಿದೆ. ಇವರಿಗೆ ಸರಕಾರ ಘೋಷಿಸಿರುವ ಎಲ್ಲ ಸೌಲಭ್ಯಗಳೂ ಲಭಿಸಲಿವೆ.
ಈ ಪಟ್ಟಿಗೆ ಅರ್ಹರಾದವರನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಜೂ.25ರಿಂದ ಜುಲೈ 9 ವರೆಗೆ ವಿವಿಧ ಗ್ರಾಮ ಪಂಚಾಯತಿ ಗಳಲ್ಲಿ ಶಿಬಿರ ನಡೆಯಲಿದೆ. ಈ ಹಿಂದಿನ ಶಿಬಿರಗಳಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವ ಸಂತ್ರಸ್ತರು ಈ ಶಿಬಿರದಲ್ಲಿ ಭಾಗವಹಿಸಬಹುದು. ಸಂತ್ರಸ್ತರ ಚಿಕಿತ್ಸೆಯ ಎಲ್ಲ ವೆಚ್ಚಗಳನ್ನೂ ಸರಕಾರ ವಹಿಸಿಕೊಳ್ಳಲಿದೆ. ಇದಕ್ಕೆ ಮಿತಿಯನ್ನು ಇನ್ನೂ ನಿಗದಿಪಡಿಸಿಲ್ಲ ಎಂದು ಸಚಿವರು ತಿಳಿಸಿದರು.
ಪುನರ್ ವಸತಿ ಗ್ರಾಮ ನಿರ್ಮಾಣಕ್ಕಾಗಿ 68 ಕೋಟಿ ರೂ. ನ ಸಮಗ್ರ ಯೋಜನೆಯ ವರದಿ ಸರಕಾರಕ್ಕೆ ಸಲ್ಲಿಸಲಾಗಿದೆ. ಕಿಫ್ ಬಿ ಯಲ್ಲಿ ಅಳವಡಿಸಿ ಯೋಜನೆ ಜಾರಿಗೊಳಿಸಲು ಸರಕಾರ ಉದ್ದೇಶಿಸಿದೆ. ಪುನರ್ ವಸತಿ ಯೋಜನೆ ತ್ವರಿತವಾಗಿಲ್ಲ ಎಂಬ ಆರೋಪವನ್ನು ಸರಕಾರ ಗಂಭಿರವಾಗಿ ಪರಿಶೀಲಿಸುತ್ತಿದೆ. ಸಂತ್ರಸ್ತರ 3 ಲಕ್ಷ ರೂ. ವರೆಗಿನ ಸಾಲಗಳನ್ನು ಮನ್ನಾ ಮಾಡುವ ಕ್ರಮ ಸರಕಾರ ಕೈಗೊಂಡಿದೆ. ಇದಕ್ಕೆ ಚೆಕ್ ಗಳನ್ನು ಖಜಾನೆಗೆ ಸಲ್ಲಿಸಿರುವುದಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಶಿಲಾನ್ಯಾಸ ನಡೆಸಿ 6 ವರ್ಷಗಳೇ ಕಳೆದರೂ ಕಾಸರಗೋಡು ವೈದ್ಯಕೀಯ ಕಾಲೇಜಿನ ಕಾಮಗಾರಿ ಪೂರ್ಣಗೊಳ್ಳದೇ ಉಳಿದಿದೆ. ತುರ್ತು 10 ಕೊಟಿ ರೂ. ಸರಕಾರದಿಂದ ಲಭಿಸುವ ಕ್ರಮಕೈಗೊಳ್ಳಲಾಗುವುದು. ಸಂಸದರ , ಶಾಸಕರ ನಿಧಿ ಬಳಸಲೂ ಆಲೋಚಿಸಲಾಗುತ್ತಿದೆ. ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಕಿಡ್‍ಕೋ ಗೆ ಹಸ್ತಾಂತರಿಸಲಾಗಿದ್ದ 1.25 ಕೊಟಿ ರೂ. ಗುತ್ತಿಗೆದಾರರಿಗೆ ನೀಡದೇ ಬೇರೆ ವಿಚಾರಗಳಿಗಾಗಿ ವೆಚ್ಚ ಮಾಡಲಾಗಿದೆ ಎಂಬ ಆರೋಪ ಬಗ್ಗೆ ತನಿಖೆ ನಡೆಸಲಾಗುವುದು. ಎಂಡೋಸಲ್ಫಾನ್ ಸಂತ್ರಸ್ತರಿಂದ ಅಕ್ಷಯ ಕೇಂದ್ರಗಳಲ್ಲಿ 50 ರೂ.ನೋಂದಣಿ ಶುಲ್ಕವಾಗಿ ಪಡೆಯುತ್ತಿರುವ ದೂರುಗಳಿದ್ದು,ಈ ಬಗ್ಗೆ ತನಿಖೆ ನಡೆಸಲಾಗುವುದು. ಈ ರೀತಿ ಯಾವ ಶುಲ್ಕವನ್ನೂ ಸಂತ್ರಸ್ತರಿಂದ ಪಡೆಯಬಾರದು ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿದರು.
ಬಡ್ಸ್ ಶಾಲೆಗಳ ಚಟುವಟಿಕೆಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಶಾಲೆಗಳಲ್ಲಿ ಈಗಿರುವ ಸಿಬ್ಬಂದಿಯ ಸೇವೆಯನ್ನು ಮುಂದುವರಿಸಲು ಅನುಮತಿ ನೀಡಬೇಕು ಎಂಬ ಮನವಿಯನ್ನು ಪರಿಶೀಲಿಸಲಾಗುವುದು. ಡಯಾಲಿಸಿಸ್ ಅಗತ್ಯವಿರುವ ಎಲ್ಲ ಸಂತ್ರಸ್ತರಿಗೆ ಬೇಕಾದ ಸೌಲಭ್ಯ ಸರಕಾರಿ ಆಸ್ಪತ್ರೆಗಳಲ್ಲಿ ಇಲ್ಲ. ಈ ಹಿನ್ನೆಲೆಯಲ್ಲಿಖಾಸಗಿ ಅಸ್ಪತ್ರೆಗಳಲ್ಲೂ ಸೌಲಭ್ಯ ಏರ್ಪಡಿಸಲಾಗುವುದು.
. ಸಂತ್ರಸ್ತರಿಗೆ ಕೇಂದ್ರ ಸರಕಾರದಿಂದ, ಎಂಡೋಸಲ್ಫಾನ್ ನಿರ್ಮಾಣ ಸಂಸ್ಥೆಯಿಂದ, ಕೇರಳ ತೋಟಗಾರಿಕೆ ನಿಗಮದಿಂದ ಲಭಿಸಬೇಕಾದ ಸಹಾಯಗಳನ್ನು ಒದಗಿಸುವಲ್ಲಿ ರಾಜ್ಯದಲ್ಲಿ ಆಡಳಿತೆ ನಡೆಸಿದ ಪರ್ಯಾಯ ಸರಕಾರಗಳು ವಿಫಲವಾಗಿವೆ ಎಂಬ ಆರೋಪ ಸಭೆಯಲ್ಲಿ ಕೇಳಿಬಂತು.
ಈಗಲೂ ದಾಸ್ತಾನು ಕೇಂದ್ರದಲ್ಲಿರುವ ಕೀಟನಾಶಕ ಯಥಾವತ್ತಾಗಿಯೇ ಇದೆ. ಇದು ಅಪಾಯಕ್ಕೆ ಕಾರಣವಾಗಲಿದೆ ಎಂಬ ದೂರುಗಳು ಕೇಳಿಬಂದುವು.
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ.ನೆಲ್ಲಿಕುನ್ನು, ಕೆ.ಕುಂಞÂರಾಮನ್, ಹೆಚ್ಚುವರಿ ದಂಡನಾಧಿಕಾರಿ ಸಿ.ಬಿಜು, ಘಟಕ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.