ನವದೆಹಲಿ: ಆರು ರಾಜ್ಯಸಭಾ ಸ್ಥಾನಗಳಿಗೆ ಜುಲೈ 5ರಂದು ಉಪ ಚುನಾವಣೆ ದಿನಾಂಕ ನಿಗದಿಪಡಿಸಿ ಚುನಾವಣಾ ಆಯೋಗ ಘೋಷಣೆ ಮಾಡಿದೆ.
ರಾಜ್ಯಸಭಾ ಸದಸ್ಯರಾಗಿದ್ದ ಆರು ಮಂದಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಸ್ಪರ್ಧಿಸಿ ಗೆದ್ದುಬಂದಿರುವುದರಿಂದ ಆ ಸ್ಥಾನಗಳು ಖಾಲಿ ಉಳಿದಿದ್ದು ಇದೀಗ ಉಪ ಚುನಾವಣೆ ಎದುರಾಗಿದೆ.
ಬಿಜೆಪಿ ಅಧ್ಯಕ್ಷ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗುಜರಾತ್ ನಿಂದ, ಉತ್ತರ ಪ್ರದೇಶದ ಅಮೇಥಿಯಲ್ಲಿ ಗೆದ್ದ ಸ್ಮೃತಿ ಇರಾನಿ, ಬಿಹಾರದಿಂದ ರವಿ ಶಂಕರ್ ಪ್ರಸಾದ್, ಒಡಿಶಾದಿಂದ ಅಚ್ಯುತಾನಂದ ಸಮಂತ, ಪ್ರತಾಪ್ ಕೇಶರಿ ದೇಬ್ ಮತ್ತು ಸೌಮ್ಯ ರಂಜನ್ ಪಾಟ್ನಾಯಕ್ ಒಡಿಶಾ ವಿಧಾನಸಭೆಗೆ ಗೆದ್ದು ಅವರ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ.
ಇದೇ 18ಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, 25ರವರೆಗೆ ಮುಂದುವರಿಯಲಿದೆ. ಜೂನ್ 28 ನಾಮಪತ್ರ ಸಲ್ಲಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನ. ಜುಲೈ 5ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಅದೇ ದಿನ ಮತಎಣಿಕೆ ನಡೆಯಲಿದೆ. ಜುಲೈ 9ಕ್ಕೆ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗಲಿದೆ.