ನವದೆಹಲಿ: ಜುಲೈ.1 ರಿಂದ ಸುಪ್ರೀಂ ಕೋರ್ಟ್ 31 ನ್ಯಾಯಾಧೀಶರಿರುವ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಣೆ ಮಾಡಲಿದ್ದು, ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಹೊಸ ಕಾರ್ಯಸೂಚಿಗೆ ಅಧಿಸೂಚನೆ ಹೊರಡಿಸಿದ್ದಾರೆ.
ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯ ಮೂರ್ತಿಗಳು ಸೂಚಿಸಿರುವ ಹೊಸ ವಿಧಾನದ ಪ್ರಕಾರ ಸುಪ್ರೀಂ ಕೋರ್ಟ್ ನ ಟಾಪ್ 5 ನ್ಯಾಯಾಧೀಶರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಲಿದ್ದಾರೆ.
ಸುಪ್ರೀಂ ಕೋರ್ಟ್ ಗೆ ಬೇಸಿಗೆ ರಜೆ ಪ್ರಾರಂಭವಾಗುವುದಕ್ಕೂ ಮೊದಲು, ಮೇ.24 ರಂದು ಹೊಸದಾಗಿ 4 ನ್ಯಾಯಾಧೀಶರು ಬಡ್ತಿ ಪಡೆದಿದ್ದರು. ಈ ಮೂಲಕ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರ ಸಂಖ್ಯೆ 31 ಕ್ಕೆ ಏರಿಕೆಯಾಗಿತ್ತು. ಇದು ಸುಪ್ರೀಂ ಕೋರ್ಟ್ ನ ಗರಿಷ್ಠ ನ್ಯಾಯಾಧೀಶರ ಸಂಖ್ಯೆಯಾಗಿದೆ.
ಈ ಹಿಂದೆ ಹೊಸದಾಗಿ ಬರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಿಜೆಐ ಹಾಗೂ ಸಿಜೆಐ ನಂತರ 2ನೇ ಸ್ಥಾನದಲ್ಲಿರುವ ನ್ಯಾಯಾಧೀಶರು ಮಾತ್ರ ಆಲಿಸುತ್ತಿದ್ದರು.
ಹೊಸ ಕಾರ್ಯಸೂಚಿಯ ಪ್ರಕಾರವಾಗಿ ಸಿಜೆಐ ಪಿಐಎಲ್ ವಿಷಯಗಳತ್ತ ಗಮನ ಹರಿಸಲಿದ್ದು, ಟಾಪ್ 4 ನ್ಯಾಯಾಧೀಶರಾದ ಎಸ್ ಬಾಬ್ಡೆ, ಎನ್ ವಿ ರಮಣ, ಅರುಣ್ ಮಿಶ್ರಾ ಹಾಗೂ ಆರ್ ಎಫ್ ನಾರಿಮನ್ ಗೆ ಪಿಐಎಲ್ ಪ್ರಕರಣಗಳನ್ನು ಹಂಚಿಕೆ ಮಾಡಲಿದ್ದಾರೆ.