ನವದೆಹಲಿ: ಜಮ್ಮ ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವನ್ನು 6 ತಿಂಗಳು ವಿಸ್ತರಣೆ ಮಾಡಲು ಲೋಕಸಭೆ ಶುಕ್ರವಾರ ಸಮ್ಮತಿ ನೀಡಿದೆ.
ಕೇಂದ್ರ ಗೃಹ ಸಚಿವ ಅಮಿತ್? ಶಾ ಅವರು ಇಂದು ಲೋಕಸಭೆಯಲ್ಲಿ ಜುಲೈ 3ರಿಂದ ಮತ್ತೆ ಆರು ತಿಂಗಳವರೆಗೆ ಜಮ್ಮುಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತವನ್ನು ವಿಸ್ತರಿಸುವಂತೆ ಕೋರಿ ಶಾಸನಬದ್ಧ ನಿರ್ಣಯ ಮಂಡಿಸಿದ್ದರು.
ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ವಿಸರ್ಜಿಸಿದ ನಂತರ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಹಲವು ಕಾರಣಗಳಿಂದಾಗಿ ಚುನಾವಣಾ ಆಯೋಗ ಈ ವರ್ಷದ ಕೊನೆಯಲ್ಲಿ ಹೊಸದಾಗಿ ಚುನಾವಣೆ ನಡೆಸಲು ನಿರ್ಧರಿಸಿದೆ. ಹಾಗಾಗಿ ಜುಲೈ 3 ರಿಂದ 6 ತಿಂಗಳ ಕಾಲ ರಾಷ್ಟ್ರಪತಿ ಆಳ್ವಿಕೆಯನ್ನು ವಿಸ್ತರಿಸುವ ಅಗತ್ಯವಿದೆ. ಈ ಮೊದಲು ರಾಜ್ಯದಲ್ಲಿ 2 ಬಾರಿ ರಾಷ್ಟ್ರಪತಿ ಮತ್ತು 7 ಬಾರಿ ರಾಜ್ಯಪಾಲರ ಆಳ್ವಿಕೆ ಹೇರಲಾಗಿತ್ತು ಎಂದು ತಿಳಿಸಿದರು.
ಈ ವರ್ಷದ ಅಂತ್ಯದ ವೇಳೆಗೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ಅವರು ಸಂಸತ್ತಿಗೆ ಮಾಹಿತಿ ನೀಡಿದರು. ಅಲ್ಲದೆ ಇದೇ ವೇಳೆ ಈ ಹಿಂದಿನ ಸರ್ಕಾರ ಹೊರಡಿಸಿದ ಸುಗ್ರೀವಾ ಜ್ಞೆ ಯನ್ನು ಬದಲಿಸಲು 2019 ರ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆಯನ್ನು ಮಂಡಿಸಿದರು.
ಕಾನೂನಿನ ಪ್ರಕಾರ ರಾಜ್ಯದಲ್ಲಿ ಶೇ. 43 ರಷ್ಟು ಮೀಸಲಾತಿ ಲಭ್ಯವಿದೆ ಮತ್ತು ಇದರ ಅಡಿಯಲ್ಲಿ ಶೇ. 3 ರಷ್ಟು ನಿಯಂತ್ರಣ ರೇಖೆಯ ಉದ್ದಕ್ಕೂ ವಾಸಿಸುವ ಜನರಿಗೆ ಮೀಸಲಿಡಲಾಗಿದೆ ಎಂದು ಶಾ ಹೇಳಿದರು.
ಈ ನೂತನ ಮಸೂದೆಯು ರಾಜ್ಯದ ಅಂತರರಾಷ್ಟ್ರೀಯ ಗಡಿಯಲ್ಲಿ ವಾಸಿಸುವ ಜನರಿಗೆ ಶೇ.3 ರಷ್ಟು ಮೀಸಲಾತಿ ವಿಸ್ತರಿಸಲು ಅವಕಾಶ ನೀಡುತ್ತದೆ ಎಂದು ತಿಳಿಸಿದರು.