ಮಂಜೇಶ್ವರ: ಬಂದೂಕಿನ ನಳಿಗೆಯಲ್ಲಿ, ಕತ್ತಿಯ ತುದಿಯಲ್ಲಿ ಮಾತನಾಡುವ ಯುರೋಪು ದೇಶವು ಎಲ್ಲಾ ಸಮಸ್ಯೆಗಳಿಗೂ ಯುದ್ಧವೇ ಪರಿಹಾರ ಎಂದು ನಂಬಿದೆ. ಯುದ್ಧದಿಂದ ಗೆದ್ದವರೂ ಯಾರೂ ಇಲ್ಲ ಎಂದು ಭಾರತ ಸಾರಿದೆ. ಯುದ್ಧದ ಸಮ್ಮೋಹನವೇ ಹಿಟ್ಲರ್‍ನನ್ನು ಸೃಷ್ಟಿಸಿದೆ ಎಂದು ಸಾಹಿತಿ ರುಚಿಕಾ ಹೇಳಿದರು.
ಅವರು ಸಾಹಿತಿ, ಪ್ರಾಧ್ಯಾಪಕ ಟಿ.ಎ.ಎನ್.ಖಂಡಿಗೆ ಅವರ ಕಣ್ವತೀರ್ಥದ ನಿವಾಸದಲ್ಲಿ ಇತ್ತೀಚೆಗೆ ನಡೆದ `ಈ ಹೊತ್ತಿಗೆ ಈ ಹೊತ್ತಗೆ' 7ನೇ ಸರಣಿ ಕಾರ್ಯಕ್ರಮದಲ್ಲಿ ನೇಮಿಚಂದ್ರ ಅವರ ಯಾದ್ ವಶೇಮ್ ಕೃತಿಯ ಬಗ್ಗೆ ಮಾತನಾಡಿದರು.
ಯಾದ್ ವಶೇಮ್ ಎಂದರೆ ಇಸ್ರೇಲಿನ ಗೋಳುಗೋಡೆ. ಇದು ಯಹೂದ್ಯರಿಗೂ, ಮುಸ್ಲಿಮರು ಹಾಗೂ ಕ್ರೈಸ್ತರಿಗೂ ಏಕಕಾಲಕ್ಕೆ ಪವಿತ್ರ ಸ್ಥಳವಾಗಿದೆ. ಜನಾಂಗೀಯ ದ್ವೇಷ, ಸಂಘರ್ಷ, ಮೇಲರಿಮೆಗಳು ಕಾಲಾನುಗತಿಯಲ್ಲಿ ಭಿನ್ನರೂಪ ಪಡೆಯುವುದನ್ನು ಕೃತಿಯಲ್ಲಿ ವಿಶ್ಲೇಷಿಸಲಾಗಿದೆ. ಹಿಟ್ಲರ್‍ಗೆ ದೊರೆತ ಪರಿಸರ, ಬಾಲ್ಯ ಮತ್ತು ಬೆಂಬಲ ದೊರೆತರೆ ಹಿಟ್ಲರ್ ಇನ್ನೂ ಮುಂದೆಯೂ ಹುಟ್ಟಬಹುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕುಂಜತ್ತೂರು ಸಾಹಿತ್ಯ ಸಂಘದ ಅಧ್ಯಕ್ಷ ಎ.ನಾರಾಯಣ ಉಪಸ್ಥಿತರಿದ್ದರು. ಉಪನ್ಯಾಸದ ಬಳಿಕ ನಡೆದ ಸಂವಾದದಲ್ಲಿ ಡಾ.ವಿಜಯ ಕುಮಾರ್, ಎ.ನಾರಾಯಣ, ಕೃಷ್ಣ ಪೂಜಾರಿ, ಕುಶಲಾಕ್ಷಿ ಕುಲಾಲ್, ನಿರ್ಮಲಾ ಟೀಚರ್ ಮೊದಲಾದವರು ಭಾಗವಹಿಸಿದ್ದರು. ಕವಿತಾ ಕೂಡ್ಲು ಸ್ವಾಗತಿಸಿ, ಸರಣಿ ಕಾರ್ಯಕ್ರಮದ ಸಂಚಾಲಕ ಟಿ.ಎ.ಎನ್. ಖಂಡಿಗೆ ವಂದಿಸಿದರು.